ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಮಿ ಅಗೆದರೆ ವಿನಾಶ ಖಚಿತ: ಪುಷ್ಪಲತಾ

ವಿಶ್ವ ಪರಿಸರ ದಿನಾಚರಣೆ
Published 8 ಜೂನ್ 2024, 15:07 IST
Last Updated 8 ಜೂನ್ 2024, 15:07 IST
ಅಕ್ಷರ ಗಾತ್ರ

ಹಾವೇರಿ: ‘ಭೂಮಿಯ ಮೇಲಿನ ಇಡೀ ಜೀವ ಸಂಕುಲವೇ ಸೃಷ್ಟಿಯಾಗಿ ಬದುಕುತ್ತಿರುವುದು ಭೂಮಿಯ ಮೇಲಿರುವ ಪರಿಸರದ ಮಡಿಲಿನಿಂದ. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಭೂತಾಯಿಯ ಮಡಿಲನ್ನು ಬಗೆದರೆ ಜೀವಸಂಕುಲದ ವಿನಾಶ ಖಚಿತ’ ಎಂದು ಜೀವಶಾಸ್ತ್ರದ ಉಪನ್ಯಾಸಕಿ ಪುಷ್ಪಲತಾ ಡಿ.ಎಲ್.  ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ‘ಅಭಿವೃದ್ಧಿಯ ವೇಗದಲ್ಲಿ ಹೊರಟಿರುವ ಮನುಷ್ಯರು ನೇರವಾಗಿ ಪರಿಸರದ ಮೇಲೆ ಪರಿಣಾಮ ಬೀರುವ ಯೋಜನೆಗಳಿಂದ ಪರಿಸರ ಎಲ್ಲಾ ರೀತಿ ಮಲೀನವಾಗುತ್ತಿದೆ. ಇದರ ಪರಿಣಾಮ ಘೋರವಾಗುತ್ತಿದ್ದು ತುರ್ತಾಗಿ ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು’ ಎಂದು ಕರೆಕೊಟ್ಟರು.

ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ‘ಮಾನವರ ಅತಿಯಾದ ಅಕ್ರಮಣದಿಂದ ಭೂಮಿಯ ನೆಲ, ನೀರು, ಗಾಳಿ ಕಲುಷಿತಗೊಂಡು ಅಪಾಯದ ಮಟ್ಟ ಮೀರುತ್ತಿದೆ. ಇದರಿಂದ ಮನುಷ್ಯರಿಗೆ ವಿವಿಧ ಬಗೆಯ ಹೊಸ ಹೊಸ ಕಾಯಿಲೆಗಳು ಬರುತ್ತಿವೆ. ಅಭಿವೃದ್ಧಿಯೆಂದರೆ ಅದು ಪರಿಸರದ ಮೇಲೆ ನೇರ ಆಕ್ರಮಣ. ನಮ್ಮ ಸ್ವಾರ್ಥಕ್ಕಾಗಿ ಇಡೀ ಪರಿಸರವನ್ನೇ ವಿನಾಶ ಮಾಡಿ ಮುಂದಿನ ಪೀಳಿಗೆಗಳನ್ನ ಬಲಿಕೊಡುತ್ತಿದ್ದೇವೆ. ಇದು ನಿಲ್ಲಬೇಕು’ ಎಂದರು.

ಪ್ರಭಾರ ಪ್ರಾಚಾರ್ಯ ನಾಗರಾಜ ಹಕ್ಕೇರ ಮಾತನಾಡಿ, ‘ಭೂಮಿ ಪರಿಸರ ನಮ್ಮ ತಾಯಿ ಇದ್ದಂತೆ. ಅದರ ಸಂರಕ್ಷಣೆ ಕುರಿತು ಜನಜಾಗೃತಿ ನಡೆಯಬೇಕು ಮತ್ತು ಪರಿಸರದೊಂದಿಗೆ ಬೆಸೆದುಕೊಂಡ ಮೂಢನಂಬಿಕೆಗಳನ್ನು ನಿರ್ಮೂಲನಗೊಳಿಸಿದರೆ ಸುಂದರ ಪರಿಸರ ನಿರ್ಮಿಸಬಹುದು’ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವಿ.ಟಿ. ಹೊನ್ನಪ್ಪನವರ, ಎಸ್.ಸಿ.ಮರಡಿ, ವಿ.ಎಸ್.ಪಾಟೀಲ, ಮಂಜುನಾಥ ಹತ್ತಿಯವರ, ಸುನಂದ ಶೀಲಿ, ವಿಶ್ವನಾಥ ಬಿ.ಎನ್.ಉಸ್ಮಾನ್, ರಾಜು, ಪುಷ್ಪ, ನಂದಿನಿ, ಈಶ್ವರಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT