ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ‘ದೇಸಿ ಆಕಾಶಬುಟ್ಟಿ’ಗಳ ಹೊಳಪು

ಮಾರುಕಟ್ಟೆಗೆ ಬಂದ ಗುಜರಾತಿನ ‘ಗಾಜಿನ ದೀಪಗಳು’: ಮಣ್ಣಿನ ಹಣತೆಗಳಿಗೆ ಉತ್ತಮ ಬೇಡಿಕೆ
Last Updated 10 ನವೆಂಬರ್ 2020, 12:50 IST
ಅಕ್ಷರ ಗಾತ್ರ

ಹಾವೇರಿ: ‘ಬೆಳಕಿನ ಹಬ್ಬ’ ದೀಪಾವಳಿಗೆ ಕಣ್ಣು ಕೋರೈಸುವ ‘ದೇಸಿ ಆಕಾಶಬುಟ್ಟಿ’ಗಳು ಮತ್ತು ಮನೆ–ಮನ ಬೆಳಗುವ ತರಹೇವಾರಿ ‘ಮಣ್ಣಿನ ಹಣತೆ’ಗಳು ಹಾವೇರಿ ನಗರದ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ.

ಪ್ರತಿ ವರ್ಷ ಚೀನಾದ ಆಕಾಶಬುಟ್ಟಿಗಳು ಮಾರುಕಟ್ಟೆಗೆ ದಾಂಗುಡಿ ಇಡುತ್ತಿದ್ದವು. ಈ ವರ್ಷದ ವಿಶೇಷವೆಂದರೆ ಶೇ 75ರಷ್ಟು ‘ದೇಸಿ ಆಕಾಶಬುಟ್ಟಿಗಳು’ ಮಾರುಕಟ್ಟೆಗೆ ಬಂದಿದ್ದು, ಶೇ 20ರಿಂದ 25ರಷ್ಟು ಮಾತ್ರ ಚೀನಾ ಉತ್ಪನ್ನಗಳು ಬಂದಿವೆ. ದೇಸಿ ಆಕಾಶದೀಪಗಳ ದರ ತುಸು ಜಾಸ್ತಿಯಾದರೂ, ಗುಣಮಟ್ಟ ಮತ್ತು ವಿನ್ಯಾಸದಲ್ಲಿ ಉತ್ಕೃಷ್ಟವಾಗಿವೆ ಎನ್ನುತ್ತಾರೆ ವ್ಯಾಪಾರಿಗಳು.

‘ಆಕಾಶಬುಟ್ಟಿ’ ಎಂಬುದುದೀಪಾವಳಿಹಬ್ಬದ ಸಂದರ್ಭದಲ್ಲಿ ಮನೆಯ ಹೊರಗಡೆ ತೂಗುಬಿಡುವ ಒಂದು ಆಲಂಕಾರಿಕ ದೀಪ. ಇದನ್ನು ‘ನಕ್ಷತ್ರಗೂಡು’, ‘ಆಕಾಶದೀಪ’ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ‘ಗೂಡುದೀಪ’ ಅಂತಲೂ ಕರೆಯುತ್ತಾರೆ.

ವಿಶೇಷವಾಗಿ ದೀಪಾವಳಿ ಅಮಾವಾಸ್ಯೆಯ ರಾತ್ರಿಯಂದು ಆಕಾಶಬುಟ್ಟಿಗಳು ನಕ್ಷತ್ರಗಳಂತೆ ಮಿನುಗುತ್ತವೆ.ಕಾರ್ತೀಕಮಾಸವಿಡೀ ಬೆಳಗುತ್ತಿರುತ್ತವೆ. ಬಿದಿರಿನ ಕಡ್ಡಿಗಳಿಗೆ ಬಣ್ಣದ ಕಾಗದಗಳನ್ನು ಅಲಂಕರಿಸಿ, ಅದರೊಳಗೆ ಒಂದು ವಿದ್ಯುದ್ದೀಪವನ್ನು ಜೋಡಿಸಿದರೆ ‘ಆಕಾಶಬುಟ್ಟಿ’ ತಯಾರು.

60ಕ್ಕೂ ಅಧಿಕ ವಿನ್ಯಾಸ:

‘ನಾವು ಪೂನಾ ಮತ್ತು ಹುಬ್ಬಳ್ಳಿಯಿಂದ ಬಿದಿರು, ಶೈನಿಂಗ್ ದಾರ, ಕುಂದನ್‌, ಆಲಂಕಾರಿಕ ಸಾಮಗ್ರಿ ಮುಂತಾದ ಕಚ್ಚಾವಸ್ತುಗಳನ್ನು ತರಿಸಿ, ಆಕಾಶಬುಟ್ಟಿಯನ್ನು ಸ್ಥಳೀಯವಾಗಿ ತಯಾರು ಮಾಡುತ್ತೇವೆ. ನಮ್ಮಲ್ಲಿ ಟೊಮೆಟೊ, ಸ್ಟಾರ್‌, ಗಣಪ, ಲಕ್ಷ್ಮಿ ಸೇರಿದಂತೆ 60ಕ್ಕೂ ಹೆಚ್ಚು ವಿಧದ ಆಕಾಶಬುಟ್ಟಿಗಳು ಲಭ್ಯವಿವೆ. ಆಕಾಶಬುಟ್ಟಿ ಸಂಸ್ಕೃತಿಯ ಮೇಲೆ ಆಧುನಿಕತೆಯ ಗಾಳಿ ಸೋಕಿ, ವರ್ಷದಿಂದ ವರ್ಷಕ್ಕೆ ಹೊಸ ರೂಪವನ್ನು ಪಡೆದುಕೊಂಡಿವೆ’ ಎನ್ನುತ್ತಾರೆ ಹಾವೇರಿ ನಗರದ ವ್ಯಾಪಾರಿ ರಮೇಶ ಚೌಧರಿ.

‘ಕಳೆದ ವರ್ಷ ₹50 ಸಾವಿರ ಮೌಲ್ಯದ ಆಕಾಶಬುಟ್ಟಿಗಳನ್ನು ಮಾರಾಟ ಮಾಡಿದ್ದೆವು. ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ₹30 ಸಾವಿರ ಮೌಲ್ಯದ ಆಕಾಶಬುಟ್ಟಿಗಳಿಗೆ ಬಂಡವಾಳ ಹಾಕಿದ್ದೇವೆ. ಜನರು ಆಕಾಶಬುಟ್ಟಿ ಕೊಂಡುಕೊಳ್ಳುತ್ತಿದ್ದಾರೆ. ಹಬ್ಬದ ಹಿಂದಿನ ಎರಡು ದಿನಗಳಲ್ಲಿ ವ್ಯಾಪಾರ ಜೋರಾಗುವ ಸಾಧ್ಯತೆ ಇದೆ. ನಮ್ಮಲ್ಲಿ ₹100ರಿಂದ ₹550ರವರೆಗೆ ವಿವಿಧ ದರಗಳ ಆಕಾಶದೀಪಗಳು ಸಿಗುತ್ತವೆ’ ಎಂದು ಹೇಳಿದರು.

ಗಾಜಿನ ದೀಪಗಳು:

ತರಹೇವಾರಿ ಮಣ್ಣಿನ ಹಣತೆಗಳು, ತಮಿಳುನಾಡಿನ ಪಿಂಗಾಣಿ ಹಣತೆಗಳು ನಗರದ ಎಂ.ಜಿ.ರಸ್ತೆಯ ಬದಿಗಳಲ್ಲಿ ಮಾರಾಟವಾಗುತ್ತಿವೆ. ಗುಜರಾತಿನ ಗಾಜಿನ ದೀಪಗಳು ಮಾರುಕಟ್ಟೆಗೆ ಬಂದಿರುವುದು ಈ ಬಾರಿಯ ವಿಶೇಷವಾಗಿವೆ. ಸ್ತ್ರೀದೀಪ, ತೆಂಗಿನಕಾಯಿ ದೀಪ, ಆನೆ ದೀಪ, ನಕ್ಷತ್ರ ದೀಪ, ಗಣೇಶ ದೀಪ, ಲಕ್ಷ್ಮೀ ದೀಪ, ಲ್ಯಾಂಪ್‌ ಆಕಾರದ ದೀಪ, ಚಟ್ಟಿ ದೀಪ ಹೀಗೆ ನಾನಾ ತರಹದ ಹಣತೆಗಳು ಗ್ರಾಹಕರ ಮನ ಸೆಳೆಯುತ್ತಿವೆ.

‘ಸ್ಥಳೀಯವಾಗಿ ಹಣತೆಗಳು ಹೆಚ್ಚಾಗಿ ಸಿಗದ ಕಾರಣ ತಮಿಳುನಾಡಿನಿಂದ ಮಣ್ಣಿನ ಮತ್ತು ಪಿಂಗಾಣಿ ದೀಪಗಳನ್ನು ತರಿಸುತ್ತೇನೆ. ಸಾಗಣೆ ಸಂದರ್ಭ ಶೇ 20ರಷ್ಟು ದೀಪಗಳು ಹಾಳಾಗುತ್ತವೆ. ಈ ವರ್ಷವೂ ₹40 ಸಾವಿರ ಮೌಲ್ಯದ ಹಣತೆಗಳನ್ನು ತರಿಸಿದ್ದೇನೆ. ಗೌರಿಹಬ್ಬದಲ್ಲಿ ಸಕ್ಕರೆ ಗೊಂಬೆ, ಚೌತಿಯಲ್ಲಿ ಮುತ್ತಿನ ಮಾಲೆ, ಗೊಂಬೆ, ಹೋಳಿ ಹಬ್ಬದಲ್ಲಿ ಬಣ್ಣ.. ಹೀಗೆಹತ್ತು ವರ್ಷಗಳಿಂದ ‘ಸೀಸನ್‌ ಬ್ಯುಸಿನೆಸ್‌‌’ ಮಾಡುತ್ತಿದ್ದೇನೆ’ಎನ್ನುತ್ತಾರೆ ಬೀದಿಬದಿ ವ್ಯಾಪಾರಿ ಪ್ರಕಾಶ ವಿ.ಗೊಂದಿ.

***

ಮಣ್ಣಿನ ಹಣತೆಗಳಿಗೆ ಹೆಚ್ಚು ಬೇಡಿಕೆಯಿದೆ. ₹1ರಿಂದ ₹60ರವರೆಗೆ ವಿವಿಧ ಆಕಾರದ ದೀಪಗಳು ದೊರೆಯುತ್ತವೆ. ಕೋವಿಡ್‌ ಇದ್ದರೂ ವ್ಯಾಪಾರಕ್ಕೆ ಧಕ್ಕೆಯಾಗಿಲ್ಲ
– ಪ್ರಕಾಶ ವಿ.ಗೊಂದಿ, ಬೀದಿಬದಿ ವ್ಯಾಪಾರಿ, ಹಾವೇರಿ

ಮೂರು ದಿನಗಳಿಂದ ಹಣತೆ ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ವರ್ಷ ನಿತ್ಯ 2 ಸಾವಿರ ದೀಪಗಳು ಮಾರಾಟವಾಗುತ್ತಿದ್ದವು. ಈ ವರ್ಷ ಶೇ 40ರಷ್ಟು ವ್ಯಾಪಾರ ಕುಸಿದಿದೆ
– ಸುಮಾ, ಬೀದಿಬದಿ ವ್ಯಾಪಾರಿ, ಹಾವೇರಿ

ಹಬ್ಬದ ಸಂಭ್ರಮ ಹೆಚ್ಚಿಸುವ ಆಕಾಶಬುಟ್ಟಿ ಮತ್ತು ಮಣ್ಣಿನ ಹಣತೆಗಳನ್ನು ಪ್ರತಿ ವರ್ಷ ಕೊಳ್ಳುತ್ತೇವೆ. ನಕ್ಷತ್ರದಂತೆ ಮಿನುಗುವ ಆಕಾಬುಟ್ಟಿಗಳು ನಮ್ಮ ಸಂಸ್ಕೃತಿಯ ಪ್ರತೀಕ
– ಪ್ರಿಯಾಂಕಾ ಪಿ.ಕಜ್ಜಿ, ಬಸವೇಶ್ವರ ನಗರ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT