ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಕೊಲೆ: ಆರೋಪಿಗಳ ಬಂಧನ

ಸಾಲ ವಾಪಸ್‌ ಕೊಡದ ಸ್ನೇಹಿತನ ಹತ್ಯೆಗೆ ಸಂಚು: ಸಾಕ್ಷಿ ನಾಶಕ್ಕಾಗಿ ಬಾಲಕನ ಕೊಲೆ
Last Updated 18 ಮಾರ್ಚ್ 2021, 13:25 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಯತ್ತಿನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ, 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಯತ್ತಿನಹಳ್ಳಿ ಗ್ರಾಮದ ಶಂಭುಲಿಂಗ ಪೋರಾಪೂರ ಮತ್ತು ಆತನ ಲಾರಿ ಚಾಲಕ ಮಂಜುನಾಥ ಯರೇಶಿಮಿ ಎಂಬುವರು ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡು, ವೀಲ್‌ ಸ್ಪ್ಯಾನರ್‌ ಹಾಗೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾವೇರಿ ನಗರದ ವಿಜಯನಗರ ಬಡಾವಣೆಯ ನಿವಾಸಿಗಳಾದ ನಿಂಗಪ್ಪ ಶಿರಗುಪ್ಪಿ (28) ಮತ್ತು ಗಣೇಶ ಕುಂದಾಪುರ (16) ಈ ಇಬ್ಬರು ಯತ್ತಿನಹಳ್ಳಿ ಗ್ರಾಮದ ಗುತ್ತಲ ರಸ್ತೆಯ ಪಕ್ಕದಲ್ಲಿರುವ ಮಳೀಮಠ ಕಾಂಪ್ಲೆಕ್ಸ್‌ನ ಮಳಿಗೆಯೊಂದರಲ್ಲಿ ಮಂಗಳವಾರ ರಾತ್ರಿ ಮಲಗಿದ್ದ ವೇಳೆ, ಈ ಇಬ್ಬರನ್ನು ಆರೋಪಿಗಳು ಹತ್ಯೆಗೈದಿದ್ದರು.

ಸಾಲ ಮರಳಿಸದೆ ಸತಾಯಿಸುತ್ತಿದ್ದ:

ಖಚಿತ ಮಾಹಿತಿ ಮೇರೆಗೆ ಹಾನಗಲ್‌ ಬಸ್‌ ನಿಲ್ದಾಣದಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ‘ಕೊಲೆಯಾದ ನಿಂಗಪ್ಪ ಶಿರಗುಪ್ಪಿ ನಮಗೆ ಸ್ನೇಹಿತನಾಗಿದ್ದ. ಇತ್ತೀಚೆಗೆ ದುಡ್ಡಿಗಾಗಿ ಬಹಳ ಪೀಡಿಸುತ್ತಿದ್ದ. ₹3ರಿಂದ ₹4 ಲಕ್ಷ ಸಾಲವನ್ನು ಮರಳಿ ವಾಪಸ್‌ ಕೊಡದೆ ಸತಾಯಿಸುತ್ತಿದ್ದ. ಪಡೆದುಕೊಂಡ ಕಾರು, ಬೈಕ್‌ಗಳನ್ನು ಹಿಂದಿರುಗಿಸದೆ ಸೊಕ್ಕಿನಿಂದ ಮಾತನಾಡುತ್ತಿದ್ದ’ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

‘ನಾನು ಮಾಡಿಕೊಂಡ ಕಚೇರಿಗೆ ನಿಂಗಪ್ಪ ಶಿರಗುಪ್ಪಿ ಬಂದು ಕುಡಿಯುವುದು, ತಿನ್ನುವುದು ಮಾಡಿ, ರಾತ್ರಿ ಅಲ್ಲಿಯೇ ಮಲಗಲು ಶುರು ಮಾಡಿದ್ದ. ಜತೆಗೆ ನಮಗೆ ಕೊಲೆ ಬೆದರಿಕೆ ಹಾಕಲು ಶುರು ಮಾಡಿದ್ದ. ಕಾಟ ಜಾಸ್ತಿಯಾದ ಕಾರಣ ಮಾರ್ಚ್‌ 16ರಂದು ರಾತ್ರಿ ವೇಳೆ ಮಳಿಗೆಯಲ್ಲಿ ನಿಂಗಪ್ಪ ಶಿರಗುಪ್ಪಿ ಮಲಗಿದ್ದಾಗ ನಾವಿಬ್ಬರೂ (ಆರೋಪಿಗಳು) ಕೂಡಿಕೊಂಡು ಡಂಬಲ್ಸ್‌ ಮತ್ತು ರಾಡ್‌ನಿಂದ ತಲೆಗೆ ಹೊಡೆದವು. ಇದರಿಂದ ಆತನ ಜತೆಯಲ್ಲೇ ಮಲಗಿದ್ದ ಬಾಲಕ ಗಣೇಶನಿಗೆ ಎಚ್ಚರವಾಗಿ ಕಿರುಚಾಡಿದ. ಸಾಕ್ಷಿ ಉಳಿಸಬಾರದು ಎಂದು ಆತನ ತಲೆಗೂ ಹೊಡೆದು ಸಾಯಿಸಿದೆವು’ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದರು.

ಜೈಲು ಸೇರಿದ್ದ ನಿಂಗಪ್ಪ:

ಕೊಲೆಯಾಗಿರುವ ನಿಂಗಪ್ಪ ಶಿರಗುಪ್ಪಿ 2014ರಲ್ಲಿ ಕೊಲೆ ಮತ್ತು ಡಕಾಯಿತಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಸೇರಿದ್ದ. ನಂತರ ಹೈಕೋರ್ಟ್‌ನಿಂದ ಜಾಮೀನು ಪಡೆದು 2020ರ ಮಾರ್ಚ್‌ 20ರಂದು ಬಿಡುಗಡೆಯಾಗಿದ್ದ. ಆತನ ದೂರದ ಸಂಬಂಧಿ ಬಾಲಕ ಗಣೇಶ ಕೆಲವು ತಿಂಗಳಿನಿಂದ ನಿಂಗಪ್ಪನ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಎಂದು ಎಸ್ಪಿ ದೇವರಾಜು ತಿಳಿಸಿದರು.

ಆರೋಪಿತರ ಪತ್ತೆ ಕಾರ್ಯಕ್ಕೆ ಹಾವೇರಿ ಶಹರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಪ್ರಹ್ಲಾದ ಚನ್ನಗಿರಿ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಎಸ್‌.ಪಿ. ಹೊಸಮನಿ, ಪಿ.ಜಿ.ನಂದಿ ಹಾಗೂ ಸಿಬ್ಬಂದಿಯ ತಂಡವನ್ನು ರಚಿಸಲಾಗಿತ್ತು. ಆರೋಪಿತರನ್ನು ಶೀಘ್ರ ಪತ್ತೆ ಮಾಡಿದ್ದರಿಂದ ಎಸ್ಪಿ ಅವರು ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT