ಮಂಗಳವಾರ, ಸೆಪ್ಟೆಂಬರ್ 28, 2021
25 °C
ತುಮ್ಮಿನಕಟ್ಟಿಯಲ್ಲಿ ರಸ್ತೆ ತುಂಬ ತಗ್ಗು, ಗುಂಡಿಗಳು

ಚರಂಡಿಯಲ್ಲಿ ಹೂಳು; ನಿವಾಸಿಗಳ ಗೋಳು, ಸೊಳ್ಳೆ ನಿಯಂತ್ರಿಸಲು ಒತ್ತಾಯ

ಬಸವರಾಜ ಒಡೇರಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುಮ್ಮಿನಕಟ್ಟಿ: ಗ್ರಾಮದ ವಿವಿಧ ರಸ್ತೆಗಳ ಪಕ್ಕ ಹಾಕಿರುವ ಕಸದ ರಾಶಿ, ಗಿಡಗಂಟಿ ಬೆಳೆದು ಹೂಳು ತುಂಬಿದ ಚರಂಡಿಗಳು, ದುರಸ್ತಿ ಕಾಣದ ರಸ್ತೆ, ಸ್ವಂತ ಕಟ್ಟಡ ಇಲ್ಲದೆ ಸೊರಗಿದ 1ನೇ ಅಂಗನವಾಡಿ, ಸಾರ್ವಜನಿಕ ಗ್ರಂಥಾಲಯ. ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. 

ಒಂದನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಎಸ್.ಸಿ. ಕಾಲೊನಿಯಲ್ಲಿ ಗ್ರಾಮದ ಎಲ್ಲ ಚರಂಡಿಗಳಿಂದ ಬಂದ ಕೊಳಚೆ ನೀರು ಮುಂದೆ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮಳೆಗಾಲದಲ್ಲಿ ಕೊಳಚೆ ಪ್ರದೇಶವಾಗಿ ನಿರ್ಮಾಣವಾಗುತ್ತದೆ. ಪರಿಣಾಮ ಅಲ್ಲಿನ ನಿವಾಸಿಗಳು ದುರ್ವಾಸನೆ ಸೇವಿಸುತ್ತ ಬದುಕುವ ಅನಿವಾರ್ಯತೆ ಎದುರಾಗಿದೆ.

ಚರಂಡಿ ನೀರು ಸರಾಗವಾಗಿ ಹಳ್ಳ ಸೇರುವ ನಿಟ್ಟಿನಲ್ಲಿ ಚರಂಡಿ ನಿರ್ಮಾಣ ಮಾಡಿ ಸಮಸ್ಯೆ ಪರಿಹರಿಸುವಂತೆ ಹಲವಾರು ಬಾರಿ ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಧರ್ಮರಾಜ ಕಡೇಮನಿ ದೂರಿದರು.

6ನೇ ವಾರ್ಡಿನಲ್ಲಿ ಬರುವ ಈಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ರಸ್ತೆ ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಮಳೆಯ ನೀರು ರಸ್ತೆ ಮೇಲೆ ಹರಿದು ಚರಂಡಿಯಾಗಿ ಮಾರ್ಪಟ್ಟಿದೆ. ರಸ್ತೆ ತುಂಬೆಲ್ಲ ತಗ್ಗು, ಗುಂಡಿಗಳು ನಿರ್ಮಾಣವಾಗಿವೆ. ಇಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತದೆ. ಮಕ್ಕಳು, ವೃದ್ದರು ಮತ್ತು ಮಹಿಳೆಯರು ಸಂಚರಿಸಲು ಪ್ರಯಾಸ ಪಡುವಂತಾಗಿದೆ.

ಚರಂಡಿ ದುರಸ್ತಿ ಪಡಿಸಿ: ರಟ್ಟೀಹಳ್ಳಿ ರಸ್ತೆಯ ಒಂದು ಬದಿಯಲ್ಲಿ ಪಕ್ಕಾ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ಬದಿ ಕಚ್ಚಾ ಚರಂಡಿಯಲ್ಲಿ ಗಿಡ, ಗಂಟಿಗಳು ಬೆಳೆದು ಹೂಳು ತುಂಬಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯವರು ಇತ್ತ ಗಮನ ಹರಿಸದೇ ಇರುವ ಪರಿಣಾಮ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ಇಲ್ಲಿನ ನಿವಾಸಿ ಹಾಲೇಶ ಚೌಟಗಿ ಆರೋಪಿಸಿದ್ದಾರೆ.

‘ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ವ ಸದಸ್ಯರು ವಾರ್ಡ್‌ವಾರು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಆರೋಗ್ಯದ ಹಿತದೃಷ್ಟಿಯಿಂದ ಅನಿವಾರ್ಯವಿರುವ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಗ್ರಾಮಸ್ಥರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ಭರಮಪ್ಪ ಗೋನಾಳ ಮನವಿ ಮಾಡಿದರು.

ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ನಾಗರಿಕರಿಗೆ ಸ್ವಚ್ಛತೆ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಜ್ಞಾವಂತರ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಮಾರುತಿ ದೊಡ್ಮನಿ ಒತ್ತಾಯಿಸಿದರು.

***

ಸದಸ್ಯರು, ಸಿಬ್ಬಂದಿ ವರ್ಗದೊಂದಿಗೆ ಚರ್ಚಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು

- ಜ್ಯೋತಿ ಸತೀಶ ಉಪ್ಪಿನ, ಗ್ರಾ.ಪಂ. ಅಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು