ಮಂಗಳವಾರ, ಸೆಪ್ಟೆಂಬರ್ 21, 2021
29 °C
ನನೆಗುದಿಗೆ ಬಿದ್ದ ಕಾಮಗಾರಿ

ಹಾವೇರಿ ವಿಜ್ಞಾನ ಕೇಂದ್ರಕ್ಕೆ ಗ್ರಹಣ: 15 ವರ್ಷ ಕಳೆದರೂ ಸಾಕಾರಗೊಳ್ಳದ ಯೋಜನೆ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪವಿರುವ ಜಿಲ್ಲಾಡಳಿತ ಭವನದ ಎದುರು ನಿರ್ಮಾಣಗೊಳ್ಳಬೇಕಿರುವ ‘ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ’ದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, 15 ವರ್ಷ ಕಳೆದರೂ ಈ ಯೋಜನೆ ಸಾಕಾರಗೊಂಡಿಲ್ಲ. 

ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸುವುದು, ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕತೆ ಬೆಳೆಸುವುದು, ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿ ವಿಜ್ಞಾನ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವುದು, ಜನರಲ್ಲಿರುವ ಮೂಢನಂಬಿಕೆಗಳನ್ನು ನಿವಾರಿಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ. 

ಜನರನ್ನು ವಿಜ್ಞಾನದ ಕಡೆಗೆ ಕರೆದೊಯ್ಯುವ ದೂರದೃಷ್ಟಿಯೊಂದಿಗೆ ಹಾಗೂ ರಾಜ್ಯದಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರಚುರಪಡಿಸಲು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನದೊಂದಿಗೆ, ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. 

10 ಕೇಂದ್ರಗಳು:

2006ರಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯ ಮಂಡಳಿ (ಎನ್‌.ಸಿ.ಎಸ್‌.ಎಂ) ಮೂಲಕ ರಾಜ್ಯದ 10 ಜಿಲ್ಲೆಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಿಸಲು ಅನುಮೋದನೆ ನೀಡಿತ್ತು. ಆ ಹತ್ತು ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ಕೂಡ ಆಯ್ಕೆಯಾಗಿತ್ತು. 

ಹಾವೇರಿ ಜಿಲ್ಲಾಡಳಿತ ಭವನದ ಎದುರು 15 ಎಕರೆ ಜಾಗ ಗುರುತಿಸಿ, ₹4 ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಅನುದಾನದ ಕೊರತೆ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ 2015ರವರೆಗೆ ಕಾಮಗಾರಿಯೇ ಆರಂಭವಾಗಲಿಲ್ಲ.

₹3 ಕೋಟಿ ಬಿಡುಗಡೆ:

2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಅವರು ಮುತುವರ್ಜಿ ವಹಿಸಿ, ವಿಜ್ಞಾನ ಕೇಂದ್ರದ ಕಾಮಗಾರಿಗೆ ಚಾಲನೆ ಕೊಡಿಸಿದ್ದರು. ಅವರು ವರ್ಗಾವಣೆಯಾದ ನಂತರ ಹಾವೇರಿಗೆ ಬಂದ ಜಿಲ್ಲಾಧಿಕಾರಿಗಳು ಈ ಕೇಂದ್ರದ ಬಗ್ಗೆ ಆಸಕ್ತಿ ತೋರದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿತು. ಬಿಡುಗಡೆಯಾದ ₹3 ಕೋಟಿಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದವರು ₹2 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಿದ್ದರೂ, ಕಾಮಗಾರಿ ಪೂರ್ಣಗೊಂಡಿಲ್ಲ.

ಮಂಜೂರಾಗಿದ್ದ ₹4 ಕೋಟಿ ಅನುದಾನದಲ್ಲಿ ಕಟ್ಟಡ, ಸೈನ್ಸ್‌ ಪಾರ್ಕ್‌, ವಸ್ತು ಸಂಗ್ರಹಾಲಯ, ತಾರಾಮಂಡಲ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕಿತ್ತು. ಆದರೆ, ಇದುವರೆಗೂ ಕಟ್ಟಡ ಕೆಲಸ ಹೊರತುಪಡಿಸಿದರೆ ಬೇರೆ ಯಾವ ಕೆಲಸವೂ ನಡೆದಿಲ್ಲ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ–ಸ್ಟೆಪ್ಸ್‌) ಬಾಕಿ ₹1 ಕೋಟಿ ಬಿಡುಗಡೆ ಮಾಡಲು ಸಿದ್ಧವಿದ್ದರೂ, ಆ ಹಣದಲ್ಲಿ ವಿಜ್ಞಾನ ಕೇಂದ್ರ ರೂಪುಗೊಳ್ಳುವುದು ಕಷ್ಟಸಾಧ್ಯ. 

‘ವರ್ಷಗಳು ಉರುಳಿದಂತೆ ಯೋಜನಾ ವೆಚ್ಚವೂ ಹೆಚ್ಚಾಗುತ್ತದೆ. ಹೀಗಾಗಿಯೇ ಅನುದಾನದ ಕೊರತೆಯಿಂದ ವಿಜ್ಞಾನ ಕೇಂದ್ರದ ಕೆಲಸಗಳು ನನೆಗುದಿಗೆ ಬಿದ್ದಿವೆ. ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಿದರೆ, ವಿಜ್ಞಾನ ಕೇಂದ್ರ ಸಾಕಾರಗೊಳ್ಳುತ್ತದೆ’ ಎನ್ನುತ್ತಾರೆ ಹಾವೇರಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶ್‌. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯವರೇ ಆಗಿರುವುದರಿಂದ ವಿಜ್ಞಾನ ಕೇಂದ್ರಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿ, ವಿಜ್ಞಾನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾರೆ ಎಂಬುದು ವಿಜ್ಞಾನ ಶಿಕ್ಷಕರ ನಿರೀಕ್ಷೆಯಾಗಿದೆ. 

₹65 ಲಕ್ಷ ಬಿಡುಗಡೆ ಮಾಡಿದ್ದು, ಕೆಲಸ ಆರಂಭವಾಗುತ್ತಿದೆ. ಕಟ್ಟಡಕ್ಕೆ ₹2 ಕೋಟಿ, ಒಳಾಂಗಣ ವಿನ್ಯಾಸಕ್ಕೆ ₹5 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ಕಾಂಪೌಂಡ್‌, ಗ್ಯಾಲರಿ, ಕಟ್ಟಡ ಹಾಗೂ ಇತರ ಉದ್ದೇಶಕ್ಕೆ ₹15 ಕೋಟಿ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ
– ಅಂದಾನಪ್ಪ ವಡಗೇರಿ, ಡಿಡಿಪಿಐ, ವಿಜ್ಞಾನ ಕೇಂದ್ರ ಸಮಿತಿಯ ಸದಸ್ಯ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು