ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸಮೀಕ್ಷೆ: ಮತದಾರರಿಗೆ ‘ಪ್ರಜಾವಾಣಿ’ ಹೆಸರಿನಲ್ಲಿ ನಕಲಿ ಕರೆ!

Last Updated 24 ಫೆಬ್ರುವರಿ 2023, 13:45 IST
ಅಕ್ಷರ ಗಾತ್ರ

ಹಾವೇರಿ: 2023ರ ವಿಧಾನಸಭಾ ಚುನಾವಣೆ ಅಂಗವಾಗಿ ಪೂರ್ವ ಸಮೀಕ್ಷೆ (Pre- Poll) ಮಾಡಲು ಅನಾಮಧೇಯ ಯುವತಿಯೊಬ್ಬಳು (ಮೊ:8546883487) ಹಾವೇರಿ ಜಿಲ್ಲೆಯ ಮತದಾರರಿಗೆ ‘ಪ್ರಜಾವಾಣಿ’ ಹೆಸರಿನಲ್ಲಿ ನಕಲಿ ಕರೆ ಮಾಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

‘ಪ್ರಜಾವಾಣಿ ನ್ಯೂಸ್‌ ಚಾನಲ್‌ನಿಂದ ಕರೆ ಮಾಡುತ್ತಿದ್ದೇವೆ’ ಎಂದು ಹೇಳುವ ಯುವತಿ, ಈ ಬಾರಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಯಾರು ಬಂದರೆ ಚೆನ್ನಾಗಿರುತ್ತದೆ ನಿಮ್ಮ ಪ್ರಕಾರ; ಸಿದ್ದರಾಮಯ್ಯ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ... ಯಾರು ಬಂದರೆ ಚೆನ್ನಾಗಿರುತ್ತದೆ? ಎಂದು ಬ್ಯಾಡಗಿ ಕ್ಷೇತ್ರದ ಮತದಾರರೊಬ್ಬರಿಗೆ ಕೇಳುತ್ತಾರೆ.

5 ವರ್ಷದ ಹಿಂದೆ ಎಂಎಲ್‌ಎ ಎಲೆಕ್ಷನ್‌ನಲ್ಲಿ ಓಟು ಹಾಕಿದ್ರಾ? ಯಾವ ಪಕ್ಷಕ್ಕೆ ಸಪೋರ್ಟ್‌ ಮಾಡಿದ್ರಿ? ಎಂದು ಯುವತಿ ಕೇಳಿದಾಗ, ‘ಚುನಾವಣಾ ಆಯೋಗವೇ ಯಾರಿಗೆ ಓಟು ಹಾಕಿದ್ರಿ ಎಂದು ಕೇಳುವುದಿಲ್ಲ. ನೀವ್ಯಾಕೆ ಕೇಳ್ತೀರಿ?’ ಎಂದು ಮತದಾರ ತಿರುಗೇಟು ನೀಡುತ್ತಾರೆ.

ಮಾತು ಮುಂದುವರಿಸುವ ಯುವತಿ, ನಿಮ್ಮ ಹೆಸರೇನು, ನಿಮ್ಮ ವಯಸ್ಸೆಷ್ಟು, ನಿಮ್ಮದು ಯಾವ ಜಾತಿ, ಈ ಬಾರಿ ಯಾರಿಗೆ ಸಪೋರ್ಟ್‌ ಮಾಡ್ತೀರಿ, ನಿಮ್ಮ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಾರೆ.

‘ಪ್ರಜಾವಾಣಿ ಪತ್ರಿಕೆ ಹೆಸರಿನಲ್ಲಿ ನಕಲಿ ಕರೆ ಮಾಡಿ, ಮತದಾರರ ಮನದಾಳವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಅಥವಾ ಕೆಲವು ಏಜೆನ್ಸಿಗಳು ಮಾಡುತ್ತಿರಬಹುದು. ಆದರೆ, ಈ ಅಡ್ಡದಾರಿ ಸರಿಯಾದುದಲ್ಲ. ತಮ್ಮ ಪಕ್ಷ ಅಥವಾ ಸಂಸ್ಥೆ ಹೆಸರು ಹೇಳಿ ನೇರವಾಗಿ ಸಮೀಕ್ಷೆ ಮಾಡಲಿ. ವಿಶ್ವಾಸಾರ್ಹ ಪತ್ರಿಕೆ ಹೆಸರನ್ನು ಹಾಳು ಮಾಡುವುದನ್ನು ಖಂಡಿಸುತ್ತೇವೆ’ ಎಂದು ಓದುಗ ಅಸ್ಗರ್‌ ಅಲಿ ಕಿಲ್ಲೇದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT