ಬುಧವಾರ, ಆಗಸ್ಟ್ 17, 2022
27 °C

ವಿದ್ಯುತ್ ತಂತಿ ಸ್ಪರ್ಶ: ಹುಲ್ಲು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದಲ್ಲಿ ಭತ್ತದ ಮೇವು ತುಂಬಿ ಬರುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್‌ ತಂತಿ ಸ್ಪರ್ಶವಾಗಿ ಮೇವು ಧಗಧಗನೆ ಉರಿಯಿತು.

ಜನರ ಸಮಯಪ್ರಜ್ಞೆಯಿಂದ ಚಾಲಕ ಪಾರಾಗಿ, ದೊಡ್ಡ ಅವಘಡ ತಪ್ಪಿತು. ಹಾವೇರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಹಾನಗಲ್‌ ಘಟನೆ:

ಹಾನಗಲ್‌ ತಾಲ್ಲೂಕಿನ ಅರಸಿನಗುಪ್ಪೆ ಗ್ರಾಮದ ಸಮೀಪ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್‌ ತಂತಿ ಸ್ಪರ್ಶವಾಗಿ ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿದೆ.

ರಾಮಪ್ಪ ಬಾರ್ಕಿ ಎಂಬುವರಿಗೆ ಈ ಹುಲ್ಲು ಸೇರಿದ್ದಾಗಿದೆ. ಚಾಲಕ ಕೂಡಲೇ ಟ್ರಾಕ್ಟರ್‌ನಲ್ಲಿದ್ದ ಹುಲ್ಲನ್ನು ಕೆಳಗೆ ಇಳಿಸಿದ ಪರಿಣಾಮ, ದೊಡ್ಡ ಅವಘಡ ತಪ್ಪಿತು. ಗ್ರಾಮಸ್ಥರು ಹುಲ್ಲಿಗೆ ಹತ್ತಿದ್ದ ಬೆಂಕಿಯನ್ನು ನೀರು ಹಾಕಿ ನಂದಿಸಿದರು. 

***

ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ

ಹಾವೇರಿ: ನಗರದಲ್ಲಿ ಗುರುವಾರ ತಡರಾತ್ರಿ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಸಿಸಿಟಿವಿ ದೃಶ್ಯಾವಳಿ ನೋಡಿದ ಮಳಿಗೆ ಮಾಲೀಕರು ದೂರು ನೀಡಿದ ಮೇರೆಗೆ ಹಾವೇರಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

****

ವಿಷಸೇವಿಸಿ ರೈತ ಆತ್ಮಹತ್ಯೆ

ಹಾವೇರಿ: ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ಜಮೀನಿನಲ್ಲಿ ರೈತ ಚಂದ್ರಪ್ಪ ಬಣಕಾರ (46) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬ್ಯಾಂಕ್‌ ಮತ್ತು ಕೈಸಾಲ ಸೇರಿದಂತೆ ಒಟ್ಟು ₹2 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

****

ಮಹಾಸಭೆ ನಾಳೆ 

ಹಾವೇರಿ: ಛಲವಾದಿ ಮಹಾಸಭಾದ ಪೂರ್ವಭಾವಿ ಮಹಾಸಭೆಯನ್ನು ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಡಿ.13ರಂದು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು ಎಂದು ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಶಂಭು ಕಳಸದ ಹೇಳಿದರು.

ಛಲವಾದಿ ಸಮುದಾಯದ ಆಗುಹೋಗುಗಳು, ಕುಂದುಕೊರತೆಗಳು, ಸಮುದಾಯದ ಸಂಘಟನೆ, ಸಮಗ್ರ ಅಭಿವೃದ್ಧಿ, ಸಮುದಾಯದವರಿಗೆ ಸರ್ಕಾರದಿಂದ ದೊರೆಯಬೇಕಾದ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುವುದೆಂದು ಅವರು ಹೇಳಿದರು.

ಈ ಸಭೆಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಶಿವಮೊಗ್ಗ, ಹುಬ್ಬಳಿ-ಧಾರವಾಡ, ಗದಗ ಜಿಲ್ಲೆಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಸಮುದಾಯ ಹಿತಚಿಂತಕರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.