ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಲಕ್ಷ ಪರಿಹಾರ ಘೋಷಣೆಯಾದ ನಂತರ ರೈತರ ಆತ್ಮಹತ್ಯೆ ಹೆಚ್ಚಳ: ಶಿವಾನಂದ ಪಾಟೀಲ

Published 5 ಸೆಪ್ಟೆಂಬರ್ 2023, 13:08 IST
Last Updated 5 ಸೆಪ್ಟೆಂಬರ್ 2023, 13:08 IST
ಅಕ್ಷರ ಗಾತ್ರ

ಹಾವೇರಿ: ‘ರೈತರ ಆತ್ಮಹತ್ಯೆ ಪ್ರಕರಣಗಳು 2015ಕ್ಕೂ ಮುನ್ನ ಕಡಿಮೆ ಇದ್ದವು. ₹5 ಲಕ್ಷ ಪರಿಹಾರ ಕೊಡಲು ಆರಂಭವಾದ ನಂತರ ಪ್ರಕರಣಗಳು ವರದಿಯಾಗುವುದು ಜಾಸ್ತಿಯಾಯಿತು’ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ವೀರೇಶ್‌ ಕಮಿಟಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು ₹2 ಲಕ್ಷ ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಮಾಡಿಕೊಂಡ ಎಲ್ಲವನ್ನೂ ಪರಿಹಾರದ ಆಸೆಗಾಗಿ ‘ರೈತ ಆತ್ಮಹತ್ಯೆ’ ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಹೀಗೆ ದಾಖಲಾದ ಪ್ರಕರಣಗಳಲ್ಲಿ ಸತ್ಯಾಂಶ ಕಡಿಮೆ ಇರುವುದು ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.

’ರಾಜ್ಯದಲ್ಲಿ 2020ರಲ್ಲಿ 500, 2021ರಲ್ಲಿ 595, 2022ರಲ್ಲಿ 651 ಹಾಗೂ 2023ರಲ್ಲಿ 412 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಿಜವಾದ ರೈತ ಆತ್ಮಹತ್ಯೆ ಪ್ರಕರಣಗಳಿಗೆ, ಪರಿಹಾರ ಕೊಡಲು ಸರ್ಕಾರ ಸಿದ್ಧವಿದೆ. ಹಾವೇರಿ ಜಿಲ್ಲೆಯಲ್ಲಿ 2022–23ನೇ ಸಾಲಿನಲ್ಲಿ 122 ಪ್ರಕರಣಗಳು ಹಾಗೂ 2023–24ನೇ ಸಾಲಿನಲ್ಲಿ 33 ಪ್ರಕರಣಗಳು ವರದಿಯಾಗಿವೆ. ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಇವತ್ತು ನಿನ್ನೆಯದಲ್ಲ. ಹಿಂದೆಯೂ ಆಗಿವೆ’ ಎಂದರು.

ಎರಡು ವರ್ಷಗಳಲ್ಲಿ 53 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ರೈತ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡುತ್ತಿದ್ದೇವೆ. ಎಫ್‌ಐಆರ್‌ ಆದ ತಕ್ಷಣ ರೈತ ಆತ್ಮಹತ್ಯೆ ಎಂದು ವರದಿ ಮಾಡುವುದು ತಪ್ಪು. ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಕಾಯದೇ, ವರದಿ ಮಾಡಿದರೆ ರೈತರಲ್ಲಿ ಆತಂಕ ಹೆಚ್ಚಾಗುತ್ತದೆ. ನೀವು ಜನರಿಗೆ ತಪ್ಪು ಮಾಹಿತಿ ನೀಡಬೇಡಿ' ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದರು.

ತನಿಖೆಗೆ ಆದೇಶ

ಸೈಲೊ ಘಟಕಗಳು ನಿರುಪಯುಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ನೋಡಿದ್ದೇನೆ. ಈಗಾಗಲೇ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಿಂದಿನ ಸರ್ಕಾರದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ನಬಾರ್ಡ್‌ ಹಣ ಬಂದಾಗ ಇಂಥ ಲೋಪಗಳು ಆಗಿವೆ. ಸೈಲೊ ಘಟಕಗಳು ಹೆಚ್ಚಿನ ರೈತರಿಗೆ ಉಪಯುಕ್ತವಾಗುವಂತೆ ಮಾರ್ಪಾಡು ಮಾಡಲು ಸಹ ತಿಳಿಸಿದ್ದೇನೆ ಎಂದರು.

ಹಾವೇರಿ ತಾಲ್ಲೂಕಿನ ಆಲದಕಟ್ಟಿ ಸಮೀಪ ನಡೆದ ಪಟಾಕಿ ಅವಘಡದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡಲೇ ಆರೋಪಿ ವಿಜಯ ಯರೇಶೀಮಿಯನ್ನು ಬಂಧಿಸಬೇಕು ಎಂದು ಎಸ್ಪಿಯವರಿಗೆ ತಿಳಿಸಿದ್ದೇನೆ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಸಚಿವರಿಗೆ ರೈತರ ಮುತ್ತಿಗೆ

ಹಾವೇರಿಯ ಗುರುಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದ ಸಚಿವ ಶಿವಾನಂದ ಪಾಟೀಲ ಅವರಿಗೆ ರೈತ ಮುಖಂಡರು ಮುತ್ತಿಗೆ ಹಾಕಿದರು. ಪರಿಹಾರ ಆಸೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂಬ ಸಚಿವರ ಹೇಳಿಕೆಯನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು ಮತ್ತು ರೈತರಲ್ಲಿ ಕ್ಷಮೆ ಕೇಳಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದರು. ಆಗ ಸಚಿವರು ‘ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತಪ್ಪು ಗ್ರಹಿಕೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ನಾನು ರೈತರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ರೈತರ ಬಗ್ಗೆ ನಿಜವಾದ ಕಾಳಜಿ ಇದೆ’ ಎಂದು ಹೇಳಿ ರೈತ ಮುಖಂಡರನ್ನು ಸಮಾಧಾನ ಪಡಿಸಿದರು.

ಜಿಲ್ಲೆಯಾದ್ಯಂತ ರೈತ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ, ಮಧ್ಯಾಹ್ನ 3 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದ ಸಚಿವರು, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ರೈತ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಹಾರ ಮೊತ್ತ ಜಾಸ್ತಿಯಾದ ನಂತರ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಹೇಳಿದ್ದೇನೆ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.

‘ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಇತರ ಜಿಲ್ಲೆಗಳಲ್ಲೂ ಪ್ರಕರಣಗಳು ದಾಖಲಾಗುತ್ತಿವೆ. ಬೆಳೆವಿಮೆ, ಬರಗಾಲಕ್ಕೆ ಸಂಬಂಧಿಸಿದಂತೆ ರೈತರಿಗೆ ನೆರವು ನೀಡಲು ಬದ್ಧರಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT