ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ಪರಿಹಾರಕ್ಕೆ ರೈತರ ಆಗ್ರಹ

ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ– ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
Published : 13 ಸೆಪ್ಟೆಂಬರ್ 2024, 15:54 IST
Last Updated : 13 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಹಾವೇರಿ: ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹಲವು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ವಿಮಾ ಕಂತು ತುಂಬಿರುವ ರೈತರಿಗೆ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಡಿ ಮಧ್ಯಂತರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ರೈತರು ಮನವಿ ಸಲ್ಲಿಸಿದ್ದಾರೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ನೇತೃತ್ವದಲ್ಲಿ ನಗರದಲ್ಲಿರುವ ಹಾವೇರಿ ತಹಶೀಲ್ದಾರ್ ಕಚೇರಿಗೆ ತೆರಳಿದ್ದ ರೈತರು, ಮನವಿ ಸಲ್ಲಿಕೆ ಮಾಡಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ರೈತರು ಬೆಳೆದಿರುವ ಗೋವಿನ ಜೋಳ, ಹತ್ತಿ, ಸೋಯಾಬೀನ್, ಶೇಂಗಾ ಹಾಗೂ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇಂಥ ರೈತರಿಗೆ ಮಧ್ಯಂತರ ಪರಿಹಾರವಾಗಿ ಶೇ 25ರಷ್ಟು ಹಣವನ್ನು ನೀಡಬೇಕು. ಈ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು’ ಎಂದು ಆಗ್ರಹಿಸಿದರು.

‘2023-24ನೇ ಸಾಲಿನಲ್ಲಾದ ಬೆಳೆ ಹಾನಿಗೆ ಇದುವರೆಗೂ ಪರಿಹಾರ ಬಂದಿಲ್ಲ. ಈ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಜಿಲ್ಲೆಯ ಕೆಲ ಬ್ಯಾಂಕ್‌ನವರು, ರೈತರಿಗೆ ಬರುವ ಬೆಳೆ ವಿಮೆ ಮತ್ತು ಬೆಳೆ ಪರಿಹಾರವನ್ನು ಸಾಲದ ಖಾತೆಗೆ ಜಮೆ ಮಾಡುತ್ತಿದ್ದಾರೆ. ಜೊತೆಗೆ, ಕೆಲ ಬ್ಯಾಂಕ್‌ನವರು ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಇಂಥ ಬ್ಯಾಂಕ್‌ನವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಹಾವೇರಿ ನಗರದಲ್ಲಿ ಹಳೇ ಪಿ.ಬಿ.ರಸ್ತೆ ಹಾಗೂ ಸುತ್ತಮುತ್ತ ಎಲ್ಲೆಂದರಲ್ಲಿ ರಸ್ತೆ ಅಗೆದು ಸಿಎನ್‌ಜಿ ಅನಿಲದ ಪೈಪ್‌ ಅಳವಡಿಸಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘6 ತಿಂಗಳಿನಿಂದ ಬಾಕಿ ಇರುವ ಹಾಲು ಹಾಗೂ ಪ್ರೋತ್ಸಾಹ ಧನವನ್ನು ಪಾವತಿ ಮಾಡಬೇಕು. ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಮೇಘಾ ಡೈರಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರೈತರ ಹೊಲಗಳಿಗೆ ಹೋಗುವ ರಸ್ತೆಗಳು ಹದಗೆಟ್ಟಿದ್ದು, ಅವುಗಳ ದುರಸ್ಥಿ ಮಾಡಿಸಬೇಕು’ ರೈತರು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಪ್ರತ್ಯೇಕ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆ ಮಾಡುವಂತೆ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಈ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಬೇಕು. ರೈತರಿಗೆ ₹ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸಿಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT