ಗುರುವಾರ , ಮಾರ್ಚ್ 23, 2023
30 °C
‘ಜೀವ ಬಿಟ್ಟೇವು, ಜಮೀನು ಬಿಡುವುದಿಲ್ಲ’

ದಯಾಮರಣ ನೀಡಲು ಅಕ್ಕೂರು ಗ್ರಾಮದ ಸಾಗುವಳಿದಾರರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುತ್ತಲ (ಹಾವೇರಿ): ‘ಜೀವ ಬಿಟ್ಟೇವು ಜಮೀನು ಬಿಡುವುದಿಲ್ಲ’ ಎಂದು ಅಕ್ಕೂರ ಗ್ರಾಮದ 20ಕ್ಕೂ ಹೆಚ್ಚು ಸಾಗುವಳಿದಾರರು ಘೋಷಣೆ ಮೊಳಗಿಸಿದರು. ನಮಗೆ ನ್ಯಾಯ ಸಿಗದಿದ್ದರೆ, ದಯಾಮರಣಕ್ಕೆ ರಾಷ್ಟ್ರಪತಿ ಅವರು ಅನುಮತಿ ನೀಡಬೇಕು ಎಂದು ಒತ್ತಾಯಿಸಿ, ಜಮೀನಿನಲ್ಲಿ ಕುಟುಂಬಸ್ಥರೊಂದಿಗೆ ಶನಿವಾರ ಪ್ರತಿಭಟನೆ ನಡೆಸಿದರು. 

ಗ್ರಾಮದ ಸರ್ವೇ ನಂ.98/2–ಇ ಗೋಮಾಳದ ಸಾಗುವಳಿ ಜಮೀನಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಬಗರ್‌ಹುಕುಂ ಸಮಿತಿಗಳನ್ನು ರಚಿಸಿ, ಸಾಗುವಳಿದಾರರಿಗೆ ಪಟ್ಟ ವಿತರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ತಮಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. 

ಅಕ್ಕೂರ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರ ಜಾತಿಯ ಭೂರಹಿತ ಕೂಲಿ ಕಾರ್ಮಿಕರು ಗ್ರಾಮದ ಅರಣ್ಯ ಹುಲ್ಲುಗಾವಲು ಗೋಮಾಳದ ಜಾಗದಲ್ಲಿ 35 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಈ ಭೂಮಿ ಬಿಟ್ಟರೆ ತಮಗೆ ಜೀವನೋಪಾಯಕ್ಕೆ ಬೇರೆ ದಾರಿಯಿಲ್ಲ ಎಂದು ಅಳಲು ತೋಡಿಕೊಂಡರು. 

ಹಾವೇರಿ ಶಾಸಕ ನೆಹರು ಓಲೇಕಾರ ಅವರು ಅಧಿಕಾರಿಗಳ ಮೂಲಕ ಅಕ್ಕೂರ ಗ್ರಾಮದ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹಾವೇರಿ ತಹಶೀಲ್ದಾರ್‌ ಅವರು ಗುತ್ತಲದ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದು, ಸಾಗುವಳಿ ಜಮೀನಿನಿಂದ ರೈತರನ್ನು ಹೊರಹಾಕಲು ತಿಳಿಸಿದ್ದಾರೆ. ಜಮೀನು ಕಸಿಯಲು ಹೊಂಚು ಹಾಕುತ್ತಿದ್ದು, ಪ್ರತಿನಿತ್ಯ ಪೊಲೀಸರ ಮೂಲಕ ನಮಗೆ ಕಿರುಕುಳ, ಒತ್ತಡ ನೀಡುತ್ತಿದ್ದಾರೆ ಎಂದು ರೈತ ರಾಮನಗೌಡ ಹಾಗೂ ಇತರರು ಆರೋಪಿಸಿದರು. 

‘ಬಗರ್‌ಹುಕುಂ ಸಾಗುವಳಿ ಮಾಡಿದ ರೈತರು ಸಲ್ಲಿಸಿರುವ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಅಕ್ರಮ–ಸಕ್ರಮ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಮಂಜೂರಾದ ನಂತರ ವಿಚಾರಣೆ ಮಾಡಲಾಗುವುದು. ಯಾವ ರೈತರಿಗೂ ಅನ್ಯಾಯ ಮಾಡುವುದಿಲ್ಲ’ ಎಂದು ಹಾವೇರಿ ತಹಶೀಲ್ದಾರ್‌ ಗಿರೀಶ ಸ್ವಾದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಸವನಗೌಡ ರಾಮನಗೌಡ್ರ, ಯಲ್ಲನಗೌಡ ಮರಿಗೌಡ್ರ, ಪರಮೇಶ ಕೊಂಚಿಗೇರಿ, ಸೋಮಣ್ಣ ರಾಮನೌಡ್ರ, ಪವಿತ್ರಾ ಉದ್ದಣ್ಣನವರ, ಯಲ್ಲಪ್ಪ ಕೊಂಚಿಗೇರಿ, ಮುತ್ತಪ್ಪ ಹರಿಜನ, ರವಿಚಂದ್ರಗೌಡ ಮರಿಗೌಡ್ರ, ಮಂಜಪ್ಪ ಕೊಂಚಿಗೇರಿ, ದುರಗನಗೌಡ ಮರಿಗೌಡ್ರ, ಸಂತೋಷಗೌಡ ಮರಿಗೌಡ್ರ ಸೇರಿದಂತೆ 20 ಕುಟುಂಬಗಳು ತಹಶೀಲ್ದಾರ್‌ ಕಾರ್ಯಾಲಯದ ಮೂಲಕ ರಾಷ್ಟ್ರಪತಿಗೆ  ‘ಸಾಮೂಹಿಕ ದಯಾಮರಣ’ ಕೋರಿ ಮನವಿ ಸಲ್ಲಿಸಿದ್ದಾರೆ.

ರೈತರ ಆರೋಪ ಸುಳ್ಳು: ಓಲೇಕಾರ
‘ರೈತರು ಮಾಡುತ್ತಿರುವ ಆರೋಪ ಸುಳ್ಳು. ಯಾವ ರೈತರೂ 20 ವರ್ಷದಿಂದ ಉಳುಮೆ ಮಾಡಿಲ್ಲ. ಎಲ್ಲರೂ ಜಮೀನು ಇದ್ದವರೇ. ಜಮೀನು ಇಲ್ಲದವರಿಗೆ ಒಂದು ಎಕರೆ ಜಮೀನು ಕೊಡಲಾಗುವುದು. ಉಳುಮೆ ಮಾಡುವ ಸ್ಥಳವನ್ನು ಬಿಟ್ಟು, ಬೇರೆ ಕಡೆ ಸರ್ಕಾರ ನವೋದಯ ಶಾಲೆ ಮತ್ತು ಕಾಲೇಜು ನಿರ್ಮಾಣ ಮಾಡಲಾಗುವುದು’ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು