ಬುಧವಾರ, ಸೆಪ್ಟೆಂಬರ್ 22, 2021
21 °C
ಕರಾಳ ಕಾನೂನು ಹಿಂಪಡೆಯಲು ಆಗ್ರಹ: ಮೀಟರ್‌ ಅಳವಡಿಕೆಗೆ ತೀವ್ರ ಆಕ್ರೋಶ

ಹಾವೇರಿ: ಜಿಲ್ಲಾಡಳಿತ ಭವನಕ್ಕೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್‌ ಖಾಸಗೀಕರಣ ಈ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಕರಾಳ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ, ದೇವಗಿರಿಯ ಜಿಲ್ಲಾಡಳಿತ ಭವನಕ್ಕೆ ರೈತಸಂಘ ಮತ್ತು ಹಸಿರು ಸೇನೆಯ ನೂರಾರು ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿದರು.

ಮೊದಲಿಗೆ, ನಗರದ ಕಾಗಿನೆಲೆ ಕ್ರಾಸ್‌ನಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ, ಘೋಷಣೆ ಕೂಗಿದರು. ನಂತರ ರೈತರು ವಾಹನಗಳ ಮೂಲಕ ಬಂದು, ದೇವಗಿರಿಯಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದರು.

ಜಿಲ್ಲಾಡಳಿತದ ಭವನದ ಗೇಟ್‌ನಲ್ಲಿ ಬ್ಯಾರಿಕೇಡ್‌ ಹಾಕಿ, ಸಿಬ್ಬಂದಿ ನಿಯೋಜಿಸಿ ಸನ್ನದ್ಧರಾಗಿದ್ದ ಪೊಲೀಸ್‌ ಅಧಿಕಾರಿಗಳು ರೈತರು ಕಚೇರಿ ಒಳಗೆ ನುಗ್ಗದಂತೆ ತಡೆದರು. ಮಧ್ಯಾಹ್ನದಿಂದ ಸಂಜೆಯವರೆಗೂ ರೈತರು ಅಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ಬೆಳೆ ವಿಮೆ ಪರಿಹಾರ ನೀಡಿ: ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ‘ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆದ ರೈತರಿಗೆ ‘ಸಿಬಿಲ್‌’ ನೆಪದಲ್ಲಿ ಸಾಲ ಕೊಡುವುದನ್ನು ನಿಲ್ಲಿಸಿದ್ದು, ಆ ರೈತರಿಗೆ ಕೂಡಲೇ ಸಾಲ ಸಿಗುವ ವ್ಯವಸ್ಥೆಯಾಗಬೇಕು. ರಾಷ್ಟ್ರೀಯ ಹೆದ್ದಾರಿ–4 ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ಗ್ರಾಮಗಳಿಗೆ ಸರ್ವಿಸ್‌ ರಸ್ತೆಯನ್ನು ಶೀಘ್ರ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.  

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಐದು ವರ್ಷಗಳಿಂದ ಸಮರ್ಪಕವಾಗಿ ಬೆಳೆವಿಮೆ ಹಾಗೂ ಬೆಳೆ ಪರಿಹಾರ, ಅತಿವೃಷ್ಟಿ ಪರಿಹಾರ ವಿತರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಸಿಗುತ್ತಿಲ್ಲ. ಕಳೆದ 6 ತಿಂಗಳಿನಿಂದ ಬಾಕಿ ಉಳಿದ ಹಾಲಿನ ಸಹಾಯಧನ ಕೂಡಲೇ ಪಾವತಿಸಬೇಕು’ ಎಂದು ಆಗ್ರಹಿಸಿದರು. 

ರೈತರಿಗೆ ಭಯೋತ್ಪಾದಕರ ಹಣೆಪಟ್ಟಿ: ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ಮಾತನಾಡಿ, ‘ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ದೇಶವನ್ನು ‘ಗುಜರಾತೀಕರಣ’ ಮಾಡಲು ಹೊರಟಿದ್ದಾರೆ. ನವದೆಹಲಿಯಲ್ಲಿ 8 ತಿಂಗಳುಗಳಿಂದ ಅನ್ನದಾತರು ಹೋರಾಟ ನಡೆಸುತ್ತಿದ್ದರೂ, ಪ್ರಧಾನ ಮೋದಿ ಅವರು ಸೌಜನ್ಯಕ್ಕೂ ಮಾತುಕತೆ ನಡೆಸಿಲ್ಲ. ರೈತರನ್ನು ಭಯೋತ್ಪಾದಕರು, ‘ಕಾಂಗ್ರೆಸ್‌ ರೈತರು’ ಎಂದು ಹಣೆಪಟ್ಟಿ ಹಚ್ಚಿ ಅವಮಾನ ಮಾಡುತ್ತಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು. ಪ್ರತಿಭಟನೆಯಲ್ಲಿ ಅಡಿವೆಪ್ಪ ಆಲದಕಟ್ಟಿ, ಗಂಗಣ್ಣ ಎಲಿ, ಹನುಮಂತಪ್ಪ ಹುಚ್ಚಣ್ಣನವರ, ಮಂಜುಳಾ ಎಸ್‌.ಅಕ್ಕಿ, ಮರಿಗೌಡ್ರ ಪಾಟೀಲ, ರುದ್ರಗೌಡ ಕಾಡನಗೌಡ್ರ, ಎಂ.ಎನ್‌. ನಾಯಕ, ನೂರ್‌ ಅಹಮದ್ ಮುಲ್ಲಾ, ಗೋಣೆಪ್ಪ ಬಿ.ಕರಿಗಾರ, ದಿಳ್ಳೆಪ್ಪ ಮಣ್ಣೂರ, ಶಿವಬಸಪ್ಪ ಗೋವಿ, ಪ್ರಭುಗೌಡ ಪ‍್ಯಾಟಿ ಮುಂತಾದವರು ಪಾಲ್ಗೊಂಡಿದ್ದರು. 

ಅಧಿಕಾರಿಗಳಿಗೆ ರೈತರಿಂದ ತರಾಟೆ
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಜತೆ ಕೃಷಿ, ತೋಟಗಾರಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಧಾರವಾಡ ಹಾಲು ಒಕ್ಕೂಟದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದರು. ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತ ಮುಖಂಡರು, ನಿಮ್ಮ ಭರವಸೆಯ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ನಮ್ಮ ಬೇಡಿಕೆ ಯಾವಾಗ ಈಡೇರಿಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಹೇಳಿ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರಿಗಳು ಇಲಾಖೆ ವತಿಯಿಂದ ಕೈಗೊಂಡ ಕ್ರಮಗಳನ್ನು ತಿಳಿಸಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ವಿವಿಧ ಬೇಡಿಕೆಗಳನ್ನು ನಿಗದಿತ ಸಮಯದೊಳಗೆ ಈಡೇರಿಸಬೇಕು ಎಂದು ರೈತ ಮುಖಂಡರು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

***

ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಬರುವ ಹೆಸ್ಕಾಂ ಸಿಬ್ಬಂದಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಪಾಠ ಕಲಿಸುತ್ತೇವೆ.
– ಮಾಲತೇಶ ಪೂಜಾರ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

***

ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಮತ್ತು ಹಾಲು ಒಕ್ಕೂಟ ಸ್ಥಾಪಿಸಲು ಹಾವೇರಿ ಜಿಲ್ಲೆಯವರೇ ಆದ ಸಿ.ಎಂ ಬೊಮ್ಮಾಯಿ ಕ್ರಮ ಕೈಗೊಳ್ಳಬೇಕು.
– ರಾಮಣ್ಣ ಕೆಂಚಳ್ಳೇರ, ಅಧ್ಯಕ್ಷ, ಜಿಲ್ಲಾ ರೈತ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು