ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರದಲ್ಲಿ ಸೂಚಕರ ನಕಲಿ ಸಹಿ: ಪಕ್ಷೇತರ ಅಭ್ಯರ್ಥಿ ವಿರುದ್ಧ ಎಫ್‌ಐಆರ್‌

Published 20 ಏಪ್ರಿಲ್ 2024, 6:54 IST
Last Updated 20 ಏಪ್ರಿಲ್ 2024, 6:54 IST
ಅಕ್ಷರ ಗಾತ್ರ

ಹಾವೇರಿ: ಲೋಕಸಭಾ ಚುನಾವಣೆ 2024ರ ನಾಮಪತ್ರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಸೂಚಕರ ನಕಲಿ ಸಹಿ ಮಾಡಿಸಿ, ಸುಳ್ಳು ಸೂಚಕರ ಪ್ರಮಾಣಪತ್ರವನ್ನು ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಅವರು ಹಾವೇರಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಹಾನಗಲ್‌ ತಾಲ್ಲೂಕಿನ ಬಮ್ಮನಹಳ್ಳಿಯ ಸಿದ್ದಪ್ಪ ಕಲ್ಲಪ್ಪ ಪೂಜಾರ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರದೊಂದಿಗೆ ಸುಳ್ಳು ಸೂಚಕರ ಪ್ರಮಾಣಪತ್ರ ಸಲ್ಲಿಸಿದ ಆರೋಪಿ.

ನಾಮಪತ್ರವನ್ನು ಪರಿಶೀಲನೆ ಮಾಡಿದಾಗ ಸೂಚಕರ ವಿವರಗಳು ಮತ್ತು ಅವರ ಸಹಿಯ ಬಗ್ಗೆ ಸಂಶಯ ಮೂಡಿತು. ಈ ಬಗ್ಗೆ ಸೂಚಕರ ಸಹಿಯನ್ನು ಖಚಿತಪಡಿಸಿಕೊಳ್ಳಲು, ಸೂಚಕರ ಮನೆಗೆ ಹೋಗಿ ಪರಿಶೀಲನೆ ಮಾಡುವಂತೆ ಹಾನಗಲ್‌ ತಾಲ್ಲೂಕಿನ ತಹಶೀಲ್ದಾರ್‌ ಆರ್‌.ಎನ್‌. ಕೊರವರ ಮತ್ತು ಹಾನಗಲ್‌ ಪೊಲೀಸ್‌ ಠಾಣೆಯ ಸಿಪಿಐ ವೀರೇಶ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ ನೀಡಿದ್ದರು. 

‘ಅಭ್ಯರ್ಥಿ ಸಹಿ ಮಾಡಿಸಿದ ನಮೂನೆ ಕ್ರಮ ಸಂಖ್ಯೆ 2,3,4,5,6,8ನೇ ಸೂಚಕರನ್ನು ಖುದ್ದಾಗಿ ಭೇಟಿ ಮಾಡಿ ವಿಚಾರಿಸಿದಾಗ ‘ನಾವು ಸಹಿ ಮಾಡಿರುವುದಿಲ್ಲ. ಇವು ನಮ್ಮ ಸಹಿಗಳಲ್ಲ’ ಎಂದು ತಿಳಿಸಿ, ನಿಜವಾದ ಸಹಿಗಳನ್ನು ತಂಡದ ಅಧಿಕಾರಿಗಳ ಮುಂದೆ ಮಾಡಿಕೊಟ್ಟಿದ್ದಾರೆ. ಇದು ಚುನಾವಣಾ ನಿಯಮದ ಸ್ಪಷ್ಟ ಉಲ್ಲಂಘನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ, ಸಿದ್ದಪ್ಪ ಪೂಜಾರ ವಿರುದ್ಧ ವಿಚಾರಣೆ ಮಾಡಿ’ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ. 

‘ಆಯೋಗದ ಮಾಗ೯ಸೂಚಿಯಂತೆ ಪಕ್ಷೇತರ ಅಭ್ಯಥಿ೯ಯಾಗಿ ನಾಮಪತ್ರ ಸಲ್ಲಿಸಲು 10 ಜನ ಸೂಚಕರು ಬೇಕು. ಈ ಕ್ಷೇತ್ರದವರಾಗಿರಬೇಕು. ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ, ಕ್ರಮಸಂಖ್ಯೆ ಕ್ರಮಬದ್ಧವಾಗಿ ನಮೂದಿಸಿ ಖುದ್ದಾಗಿ ಸೂಚಕರೇ ಸಹಿ ಮಾಡಿರಬೇಕು’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT