ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆಯಲ್ಲಿ ಲೋಪ; ನಿರ್ದಾಕ್ಷಿಣ್ಯ ಕ್ರಮ

48 ಗಂಟೆಯೊಳಗೆ ನೆರೆ ಪರಿಹಾರ ನೀಡಲು ಸೂಚನೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ
Last Updated 26 ಜುಲೈ 2021, 14:17 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿಯಾದ ಮನೆಗಳ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆಯಲ್ಲಿ ಕಳೆದ ವರ್ಷದಂತೆ ತಪ್ಪುಗಳು ಪುನರಾವರ್ತನೆಯಾಗಬಾರದು. ಸಮೀಕ್ಷೆಯಲ್ಲಿ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ ನೀಡಿದರು.

ಸೋಮವಾರ ಮಳೆಹಾನಿ ಹಾಗೂ ನೆರೆ ಹಾವಳಿ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳ ಕುರಿತಂತೆ ‘ವಿಡಿಯೊ ಸಂವಾದ’ ನಡೆಸಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮನೆಹಾನಿಗೆ ಒಳಗಾದ ಕುಟುಂಬಗಳಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 48 ತಾಸಿನೊಳಗಾಗಿ ತುರ್ತು ಪರಿಹಾರವಾಗಿ ₹3,800ಗಳನ್ನು ನೀಡಬೇಕಾಗಿದೆ. ಮನೆ ಪರಿಹಾರ ನೀಡಿಕೆಯ ವಿಳಂಬ ಅಕ್ಷಮ್ಯ. ಮಂಗಳವಾರ ಸಂಜೆಯೊಳಗಾಗಿ ತುರ್ತು ಪರಿಹಾರ ಪಾವತಿಸುವಂತೆ ತಾಲ್ಲೂಕು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮನೆ ಹಾನಿ ಸಮೀಕ್ಷೆಗಾಗಿ ರಚಿಸಲಾದ ತ್ರಿಸದಸ್ಯ ಸಮಿತಿ ಖುದ್ದಾಗಿ ಹಾನಿ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ನಿಖರವಾದ ಮಾಹಿತಿ ಸಂಗ್ರಹಿಸಿ ದೃಢೀಕರಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಎಂಜಿನಿಯರ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪರಿಶೀಲಿಸಿ ದೃಢೀಕರಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ಸಂಗ್ರಹಿಸಿ, ತಹಶೀಲ್ದಾರ್‌ಗಳಿಗೆ ಸಲ್ಲಿಸಿದ ತಕ್ಷಣ ನೇರ ವರ್ಗಾವಣೆ ಮೂಲಕ ಪರಿಹಾರ ಪಾವತಿಗೆ ಕ್ರಮವಹಿಸಬೇಕು. ಸೇರ್ಪಡೆ, ಮಾರ್ಪಾಡು ಸೇರಿದಂತೆ ತಪ್ಪು ಮಾಹಿತಿ ನೀಡಿದರೆ ತನಿಖೆಗೆ ನಿಯೋಜಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮನೆ ಪರಿಹಾರ:

ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ನೆರೆ ಹಾಗೂ ಅತಿವೃಷ್ಟಿಯಿಂದ ಸಂಪೂರ್ಣ ಹಾಗೂ ಭಾಗಶಃ ಮನೆಹಾನಿಗೆ ₹95,500, ಅಲ್ಪಸ್ವಲ್ಪ ಮನೆಹಾನಿಗೆ ₹5,200 ಪರಿಹಾರಕ್ಕೆ ಅವಕಾಶವಿದೆ. ತುರ್ತು ಪರಿಹಾರವಾಗಿ ಪಾತ್ರೆಗಳು ಹಾಗೂ ಬಟ್ಟೆ ಖರೀದಿಗಾಗಿ ₹3,800 ಮಾತ್ರ ನೀಡಲು ಅವಕಾಶವಿದೆ ಎಂದು ಹೆಚ್ಚುವರಿಜಿಲ್ಲಾಧಿಕಾರಿ ಯೋಗೇಶ್ವರ ಅವರು ತಹಶೀಲ್ದಾರಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ ರೋಷನ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರಕ್ತಿಮಠ, ತಹಶೀಲ್ದಾರ್‌ ಗಿರೀಶ ಸ್ವಾದಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT