ಶುಕ್ರವಾರ, ಮೇ 29, 2020
27 °C
ಮೇ ಮತ್ತು ಜೂನ್‌ ತಿಂಗಳ ಪಡಿತರ ವಿತರಣೆಗೆ ಕ್ರಮ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

ವಲಸಿಗರಿಗೆ ಆಹಾರ ಧಾನ್ಯ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿರುವ 12,219 ವಲಸಿಗ ಫಲಾನುಭವಿಗಳಿಗೆ ಮೇ ಹಾಗೂ ಜೂನ್ ತಿಂಗಳ ಆಹಾರಧಾನ್ಯವನ್ನು ಮೇ 26ರಿಂದ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ವಲಸಿಗರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ಆತ್ಮ ನಿರ್ಭರ್ ಭಾರತ ಯೋಜನೆ’, ‘ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ’ ಹಾಗೂ ‘ಸಾರ್ವಜನಿಕ ವಿತರಣಾ ಪದ್ಧತಿ’ ಅಡಿ ಪಡಿತರ ಚೀಟಿ ಇಲ್ಲದಿರುವ ವಲಸಿಗರಿಗೆ ಮೇ ಮತ್ತು ಜೂನ್ ಎರಡು ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಮೇ 2020ರ ತಿಂಗಳ ಪಡಿತರವನ್ನು ಮೇ 26ರಿಂದ 31ರವರೆಗೆ ಹಾಗೂ ಜೂನ್ ತಿಂಗಳ ಪಡಿತರವನ್ನು ಜೂನ್ 1ರಿಂದ 10ರವರೆಗೆ ವಿತರಣೆ ಮಾಡಲಾಗುವುದು.

ಪ್ರತಿ ವ್ಯಕ್ತಿಗೆ ಐದು ಕೆ.ಜಿ. ಅಕ್ಕಿ ಹಾಗೂ ಕೇಂದ್ರ ಸರ್ಕಾರ ಹಂಚಿಕೆ ಪ್ರಮಾಣದಂತೆ ಕಡಲೆಕಾಳನ್ನು ವಿತರಿಸಲಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿನ ವಲಸಿಗರಿಗೆ ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ. ಕಡಲೆಕಾಳು ವಿತರಣೆಗೆ ಸರ್ಕಾರದ ಸೂಚನೆಗಳನ್ವಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಉಚಿತವಾಗಿ ಐದು ಕೆ.ಜಿ.ಅಕ್ಕಿ ಹಾಗೂ ಕೇಂದ್ರ ಸರ್ಕಾರದ ಹಂಚಿಕೆಗನುಗುಣವಾಗಿ ಕಡಲೆಕಾಳನ್ನು ವಿತರಣೆ ಮಾಡಲಾಗುವುದು. ಮೇ ತಿಂಗಳಲ್ಲಿ ಆಹಾರಧಾನ್ಯಗಳನ್ನು ಪಡೆಯದೇ ಇದ್ದಲ್ಲಿ ಒಟ್ಟಿಗೆ ಜೂನ್ ಮಾಹೆಯಲ್ಲಿ ಎರಡು ತಿಂಗಳ ಅಕ್ಕಿ (10 ಕೆಜಿ) ಹಾಗೂ ಕಡಲೆಕಾಳು ಪಡೆಯಬಹುದು. ಜಿಲ್ಲೆಯಲ್ಲಿನ 12,219 ವಲಸಿಗ ಫಲಾನುಭವಿಗಳಿಗೆ 1221.90 ಕ್ವಿಂಟಲ್ ಅಕ್ಕಿಯನ್ನು ಹಂಚಿಕೆ ಮಾಡಲು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಮತ್ತು ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿನ ವಲಸಿಗ ಫಲಾನುಭವಿಯು ‘ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ’ ಅಡಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಯಾಗಿರಬಾರದು. ಆಹಾರಧಾನ್ಯ ಪಡೆಯಬಯಸುವ ಫಲಾನುಭವಿ ತನ್ನ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಬೇಕು ಎಂದು ಸೂಚಿಸಿದ್ದಾರೆ. 

ನ್ಯಾಯಬೆಲೆ ಅಂಗಡಿಯವರು ತಂತ್ರಾಂಶದನ್ವಯ ಪರಿಶೀಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲಿದ್ದಾರೆ. ಒಂದು ವೇಳೆ ವಲಸಿಗ ಫಲಾನುಭವಿಯು ಪಡಿತರ ಚೀಟಿಯನ್ನು ಹೊಂದಿರದಿದ್ದಲ್ಲಿ ಸದರಿಯವರ ಮೊಬೈಲ್ ಸಂಖ್ಯೆಗೆ ತಂತ್ರಾಂಶದ ಮೂಲಕ ಆಧಾರ್ ಸಂಖ್ಯೆ ಆಧಾರಿತ ಓಟಿಪಿ ಕಳುಹಿಸಲಾಗುವುದು. ಸದರ ಓಟಿಪಿ ಸಂಖ್ಯೆಯನ್ನು ಆಧರಿಸಿ ಪಡಿತರ ಹಂಚಿಕೆಯನ್ನು ನೀಡಲಾಗುವುದು. ಜಿಲ್ಲೆಯ ವಲಸಿಗ ಫಲಾನುಭವಿಯು ಸ್ವಂತ ಮನೆ ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿಸುವವರಾಗಿರಬಾರದು ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಲಾಕ್‍ಡೌನ್ ಹಿನ್ನಲೆಯಲಿ ವಲಸಿಗರಿಗೆ ಒದಗಿಸುವ ಸೌಲಭ್ಯವನ್ನು ತಪ್ಪು ಮಾಹಿತಿ ನೀಡಿ, ಆಹಾರಧಾನ್ಯ ಪಡೆದುಕೊಂಡಲ್ಲಿ ‘ವಿಪತ್ತು ನಿರ್ವಹಣಾ ಕಾಯ್ದೆ-205ರ ಸೆಕ್ಷನ್ 25ರಡಿ ದಂಡ ಅಥವಾ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು