ಹಳಿಯಾಳ: ಕನ್ನಡ ಭಾಷೆಯ ವಿಷಯದಲ್ಲಿ ಸಾಧನೆ ಮಾಡುವವರಿಗೆ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಸನ್ಮಾನ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್ ವಾಸರೆ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಕನ್ನಡ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಪತ್ರ ಪ್ರದಾನ ಮಾಡಿ ಮಾತನಾಡಿದರು.
‘ಯಾವುದೇ ಅನುದಾನ ಬರದಿದ್ದರೂ ಮಕ್ಕಳಲ್ಲಿ ಕನ್ನಡದ ಅಭಿಮಾನ ಬೆಳೆಯಲೆಂದು, ಇಂತಹ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಜಿಲ್ಲೆಯಾದ್ಯಂತ ಮಾಡಲಾಗುತ್ತಿದೆಯೆಂದು ವಿವರಿಸಿದರು. ಹದಿಯರೆಯದ ಈ ವಯಸ್ಸಿನಲ್ಲಿ ಮನಸ್ಸು ಬಹಳ ಚಂಚಲವಾಗುವುದು ಸಹಜ. ಅದಕ್ಕೆ ಅವಕಾಶ ಕೊಡದೇ ಸದಾ ಒಳ್ಳೆಯ ಮಾತುಗಳಿಂದ, ಒಳ್ಳೆಯವರ ಸಂಘದಿಂದ ಮಕ್ಕಳು ತಮ್ಮ ಭವಿಷ್ಯದ ಬದುಕನ್ನು ನಿರೂಪಿಸಬೇಕು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಮಾತನಾಡಿ, ಶಿಕ್ಷಕ ಕೆಲಸ ಅತ್ಯಂತ ಪವಿತ್ರವಾದದು. ನಮಗೆ ಸಿಕ್ಕ ಉದ್ಯೋಗವನ್ನು ಅತ್ಯಂತ ಪ್ರೀತಿ, ನಿಷ್ಠೆಯಿಂದ ನಿರ್ವಹಿಸುವುದು ಮಹತ್ವವಾದದು. ಕನ್ನಡಿಗರಿಗೆ ಕನ್ನಡದ ಭಾಷಾಭಿಮಾನ ಕಡಿಮೆಯೇ ಇದೆ. ಹಾಗೇ ಆಗಬಾರದು. ಪರಭಾಷೆಯ ಬಗ್ಗೆ ಗೌರವ, ಮಾತೃಭಾಷೆಯ ಬಗ್ಗೆ ಅಭಿಮಾನವಿರಬೇಕು. ಆದಷ್ಟು ಕನ್ನಡದಲ್ಲಿಯೇ ವ್ಯವಹರಿಸಬೇಕಿದೆ. ಕನ್ನಡ ಭಾಷೆಯನ್ನು ಅಭಿಮಾನದಿಂದ ಉಳಿಸಿ, ಬೆಳಸಲು ಇಂತಹ ಕಾರ್ಯಕ್ರಮಗಳು ಪ್ರೋತ್ಸಾಹದಾಯಕವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯ ಶ್ಲಾಘನೀಯವೆಂದರು. ಕಾರ್ಯಕ್ರಮವನ್ನು ಗ್ರೇಡ್ 2 ತಹಶೀಲ್ದಾರ್ ರತ್ನಾಕರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಘಟಕದ ಗೌರವ ಕೋಶಾಧ್ಯಕ್ಷ ಮುರ್ತುಜಾಹುಸೇನ ಆನೇಹೊಸೂರ, ಮುಖ್ಯಾದ್ಯಾಪಕರ ಸಂಘದ ಅಧ್ಯಕ್ಷೆ ಗೀತಾ ನಾಯ್ಕ ಮಾತನಾಡಿದರು. ಸಿದ್ದಪ್ಪಾ ಬಿರಾದಾರ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ತಾಲ್ಲೂಕು ಘಟಕದ ಅಧ್ಯಕ್ಷ ಜಾಕೀರ ಹುಸೇನ, ಜೇಮ್ಸ್ ಡಿಸೋಜಾ ಉಪಸ್ಥಿತರಿದ್ದು ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಹಳಿಯಾಳ ತಾಲ್ಲೂಕಿನಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಪಡೆದ 56 ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಪಾಠ ಮಾಡಿದ 19 ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆಯೆಂದು ವಿವರಿಸಿದರು.
ಕಸಾಪ ಕಾರ್ಯದರ್ಶಿ ಶಾಂತಾರಾಮ ಚಿಬ್ಬೂಲಕರ್,ಗೋಪಾಲ ಮೇತ್ರಿ, ಕಾಳಿದಾಸ ಬಡಿಗೇರರವನ್ನು ತಿಪ್ಪಣ್ಣ ಕಾಳೆಯವರಿಗೆ ಸನ್ಮಾನಿಸಲಾಯಿತು. ಬಸವರಾಜ ಇಟಗಿ, ಕಲ್ಪನಾ ಹುದ್ದಾರ, ಗೋಪಾಲ ಅರಿ, ಶ್ರೀಶೈಲ ಹುಲ್ಲೆಣ್ಣವರು, ಜಿ.ಡಿ ಗಂಗಾಧರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.