ಹಾವೇರಿ: ಗಣಪತಿ ಹಬ್ಬದ ಆಚರಣೆಗೆ ದಿನಗಣನೆ ಶುರುವಾಗಿದ್ದು, ಇದರ ನಡುವೆಯೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳು ನಗರಕ್ಕೆ ಕಾಲಿಟ್ಟಿವೆ. ನಿಷೇಧದ ನಡುವೆಯೂ ಪಿಒಪಿ ಮೂರ್ತಿ ಮಾರಾಟ ನಡೆಯುತ್ತಿದ್ದು, ಅದನ್ನು ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಮೂರ್ತಿಗಳ ತಯಾರಿಕೆ, ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯನ್ನು ಸರ್ಕಾರ ನಿಷೇಧಿಸಿದೆ. ಇದರ ನಡುವೆಯೂ ನಗರದ ಕೆಲವೆಡೆ ಪಿಒಪಿ ಮೂರ್ತಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು, ಮಾರಾಟ ಮಾಡಲಾಗುತ್ತಿದೆ. ನಗರಸಭೆ ಅಥವಾ ತಾಲ್ಲೂಕು ಆಡಳಿತದ ಅಧಿಕಾರಿಗಳು ಮಾತ್ರ, ತಮಗೆ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ.
ಹಬ್ಬದ ದಿನಗಳು ಹತ್ತಿರವಾಗುತ್ತಿದ್ದಂತೆ ಲಾರಿಗಳು ಹಾಗೂ ಕಂಟೇನರ್‌ಗಳಲ್ಲಿ ಬೃಹತ್ ಗಾತ್ರದ ಪಿಒಪಿ ಮೂರ್ತಿಗಳನ್ನು ನಗರಕ್ಕೆ ತರಲಾಗಿದೆ. ನಗರದ ಹೊರವಲಯ ಹಾಗೂ ಜನರು ಹೆಚ್ಚು ಓಡಾಡದ ಜಾಗಗಳಲ್ಲಿ ಪಿಒಪಿ ಮೂರ್ತಿಗಳನ್ನು ಇರಿಸಲಾಗಿದೆ. ಮೂರ್ತಿಗಳ ಬಗ್ಗೆ ಅಪರಿಚಿತರಿಗೆ ತಿಳಿಯಬಾರದೆಂದು, ಅವುಗಳ ಮೇಲೆ ಪ್ಲಾಸ್ಟಿಕ್ ಹೂದಿಕೆ ಹೂದಿಸಲಾಗಿದೆ.
ಜನರು ತಮ್ಮ ಮನೆಗಳಲ್ಲಿ ಮಣ್ಣಿನ ಗಣಪತಿಗಳನ್ನು ಹೆಚ್ಚಾಗಿ ಕೂರಿಸುತ್ತಾರೆ. ಇವರು ಪಿಒಪಿ ಮೂರ್ತಿಗಳನ್ನು ಖರೀದಿಸುವುದು ಕಡಿಮೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಕೂರಿಸುವ ಕೆಲವರು, ಪಿಒಪಿ ಮೂರ್ತಿಗಳ ಮೊರೆ ಹೋಗುತ್ತಿದ್ದಾರೆ. ಇಂಥವರಿಗಾಗಿಯೇ ಕೆಲವರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪಿಒಪಿ ಮೂರ್ತಿಗಳನ್ನು ತಂದು ಮಾರಾಟಕ್ಕೆ ಇರಿಸುತ್ತಿದ್ದಾರೆ.
ಬೃಹತ್ ಗಾತ್ರದ ಮೂರ್ತಿಗಳನ್ನು ಅಚ್ಚುಗಳಲ್ಲಿ ಸಿದ್ಧಪಡಿಸಿ ತರಲಾಗಿದೆ. ಇವುಗಳಿಗೆ ಸದ್ಯ ಬಿಳಿ ಬಣ್ಣ ಮಾತ್ರ ಹಚ್ಚಲಾಗಿದೆ. ಮೂರ್ತಿಗಳನ್ನು ಯಾರಾದರೂ ಖರೀದಿಸಿದರೆ, ಅವರ ಬೇಡಿಕೆಗೆ ತಕ್ಕಂತೆ ಬಣ್ಣ ಹಚ್ಚಿ ಸಿದ್ಧಪಡಿಸಲಾಗುತ್ತದೆ.
ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಕೂರಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಪಿಒಪಿ ಮೂರ್ತಿ ಪ್ರತಿಷ್ಠಾಪಿಸುತ್ತಿರುವ ಮಾಹಿತಿ ಇದ್ದು, ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
‘30 ವರ್ಷಗಳಿಂದ ಶಿಸ್ತುಬದ್ಧವಾಗಿ ಪದ್ಧತಿಯಂತೆ ಮಣ್ಣಿನ ಗಣಪತಿ ತಯಾರಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪಿಒಪಿ ಮೂರ್ತಿಗಳ ಹಾವಳಿ ಹೆಚ್ಚಾಗಿದೆ. ಇದು ಪರಿಸರಕ್ಕೂ ಹಾನಿ ಉಂಟು ಮಾಡುತ್ತಿದೆ. ಪಿಒಪಿ ಮೂರ್ತಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರತಿ ವರ್ಷವೂ ದೂರು ನೀಡಲಾಗುತ್ತಿದೆ’ ಎಂದು ನಗರದ ಮೂರ್ತಿ ತಯಾರಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಣ್ಣಿನ ಮೂರ್ತಿ ತಯಾರಿ ಮಾಡಲು ಹೆಚ್ಚು ಸಮಯ ಹಾಗೂ ತಾಳ್ಮೆ ಬೇಕು. ಆದರೆ, ಪಿಒಪಿ ಮೂರ್ತಿ ತಯಾರಿ ಸುಲಭ. ಬೇಗನೇ ಮೂರ್ತಿ ತಯಾರಿಸಿ ವಿತರಿಸಬಹುದು. ಇದೇ ಕಾರಣಕ್ಕೆ ಹಲವರು, ಪಿಒಪಿ ಮೂರ್ತಿ ತಯಾರಿಸಲು ಹೋಗುತ್ತಿದ್ದಾರೆ’ ಎಂದರು.
ಅಧಿಕಾರಿಗಳ ಮೇಲೆ ಒತ್ತಡ: ಹಾವೇರಿಯಲ್ಲಿ ಪಿಒಪಿ ಮೂರ್ತಿಗಳನ್ನು ಸಂಗ್ರಹಿಸಿ, ಅಕ್ಕ–ಪಕ್ಕದ ತಾಲ್ಲೂಕು ಹಾಗೂ ಜಿಲ್ಲೆಗಳಿಗೆ ಕಳುಹಿಸುತ್ತಿರುವ ಮಾಹಿತಿ ಇದೆ. ಇದನ್ನು ತಡೆಯಲು ಹೋಗುವ ಅಧಿಕಾರಿಗಳ ಮೇಲೆಯೇ ಕೆಲ ರಾಜಕಾರಣಿಗಳು ಒತ್ತಡ ಹೇರುತ್ತಿರುವ ಆರೋಪಗಳು ಇವೆ.
ಪಿಒಪಿ ಮೂರ್ತಿ ಸಂಗ್ರಹಿಸಿಟ್ಟಿರುವ ಜಾಗಗಳ ಬಗ್ಗೆ ಅಧಿಕಾರಿಗಳಿಗೆ ಕೆಲವರು ಮಾಹಿತಿ ನೀಡಿದ್ದಾರೆ. ಆದರೆ, ಅಂಥ ಸ್ಥಳಗಳಿಗೆ ಹೋಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ, ಒತ್ತಡ ಇರುವುದಾಗಿ ಹೇಳಿ ಮೌನವಾಗುತ್ತಿದ್ದಾರೆ.
‘ಪಿಒಪಿ ಮೂರ್ತಿ ಮಾರುವುದು ಕಾನೂನುಬಾಹಿರ’ ಎಂಬುದಾಗಿ ಪತ್ರಿಕಾ ಪ್ರಕಟಣೆ ಹಾಗೂ ಜಾಹೀರಾತು ನೀಡುವ ಅಧಿಕಾರಿಗಳು, ಮೂರ್ತಿ ಮಾರಾಟ ತಡೆಗೆ ಮಾತ್ರ ಯಾವುದೇ ಕಾರ್ಯಾಚರಣೆ ನಡೆಸುತ್ತಿಲ್ಲ. ಮೂರ್ತಿ ತಯಾರಿಕೆ ಮಾಡುವವರು ಹಾಗೂ ಮೂರ್ತಿ ಸಂಗ್ರಹಿಸಿಟ್ಟಿರುವ ಜಾಗಕ್ಕೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಪಿಒಪಿ ಮೂರ್ತಿ ಮಾರಾಟಗಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.
ಹೊರ ಜಿಲ್ಲೆ–ರಾಜ್ಯಗಳಿಂದ ಆಮದು ಪಿಒಪಿ ಮೂರ್ತಿಗಳ ಅಕ್ರಮ ಸಂಗ್ರಹ ಅಧಿಕಾರಿಗಳ ಮೇಲೆ ಒತ್ತಡ
ಹಬ್ಬ ಹತ್ತಿರವಾಗುತ್ತಿದ್ದಂತೆ ಪಿಒಪಿ ಮೂರ್ತಿ ಮಾರಾಟ ಹೆಚ್ಚಾಗುತ್ತದೆ. ಅಧಿಕಾರಿಗಳು ವಿಶೇಷ ತಂಡ ರಚಿಸಿ ಪಿಒಪಿ ಮೂರ್ತಿ ಮಾರಾಟ ತಡೆಯಬೇಕುರಾಮು ಮೂರ್ತಿ ತಯಾರಕ ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.