ಕಸ ವಿಲೇವಾರಿ; ತಪ್ಪದ ಕಿರಿಕಿರಿ

ಹಂಸಭಾವಿ: ಇಲ್ಲಿನ ಬೆಂಗಳೂರು ಕ್ರಾಸ್ ಬಳಿ ನಾಡಕಚೇರಿ ಪಕ್ಕದ ರಾಜ್ಯ ಹೆದ್ದಾರಿಯ ಇಕ್ಕೆಲದಲ್ಲಿ ಕಸದ ರಾಶಿ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಇದರಿಂದ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಕಿರಿಕಿರಿಯಾಗಿದೆ.
ಬೆಂಗಳೂರು ವೃತ್ತದಲ್ಲಿ ಇರುವ ಎಗ್ ರೈಸ್ ಅಂಗಡಿಗಳ, ಬೇಕರಿ, ಹೋಟೆಲ್, ಚಿಕನ್ ಅಂಗಡಿಗಳ ತ್ಯಾಜ್ಯದಿಂದ ಈ ಸ್ಥಳದಲ್ಲಿ ಕಸ, ಕೊಳಚೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಹಂದಿ, ನಾಯಿಗಳ ಹಾವಳಿಯೂ ಹೆಚ್ಚಾಗಿದೆ.
ಸಮೀಪದಲ್ಲಿಯೇ ಖಾಸಗಿ ಶಿಕ್ಷಣ ಸಂಸ್ಥೆ ಇದ್ದು, ಅಲ್ಲಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಹಾದು ಹೋಗುತ್ತಾರೆ. ಈ ವೇಳೆ ಇಲ್ಲಿನ ದುರ್ನಾತ, ನಾಯಿ, ಹಂದಿಗಳು ಮಕ್ಕಳ ಮೇಲೆ ಎರಗಿ ಬರುತ್ತವೆ.
‘ನಮ್ಮ ವಿದ್ಯಾಲಯಕ್ಕೆ ಬರುವ ಮಕ್ಕಳಿಗೆ ಇಲ್ಲಿನ ವಾತಾವರಣ ಮುಜುಗುರ ಉಂಟು ಮಾಡುತ್ತಿದೆ. ಜೋರಾಗಿ ಗಾಳಿ ಬೀಸಿದರೆ ದುರ್ನಾತವೆಲ್ಲ ಶಾಲೆ ಆವರಣದೊಳಗೆ ಬರುತ್ತದೆ. ಕೂಡಲೇ ಗ್ರಾಮ ಪಂಚಾಯ್ತಿಯವರು ಈ ಕಸ ವಿಲೇವಾರಿ ಮಾಡಿ ಇಲ್ಲಿ ಸ್ವಚ್ಛ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಶಿವಯೋಗಿ ಕೆರೂಡಿ ತಿಳಿಸಿದರು.
ಫುಟ್‌ಪಾತ್ ಆಕ್ರಮಿಸಿದ ಅಂಗಡಿಗಳು:
ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಇಕ್ಕೆಲದಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಈ ಪುಟ್‌ಪಾತ್ ಮೇಲೆ ಈಗ ಎಗ್‌ರೈಸ್ ಅಂಗಡಿ, ಹೋಟೆಲ್, ಹಣ್ಣಿನ ಅಂಗಡಿ, ಗುಜರಿ ಅಂಗಡಿಗಳು ಸಾಲುಗಟ್ಟಿ ತಲೆ ಎತ್ತಿ ನಿಂತಿವೆ. ಹೀಗಾಗಿ ಪಾದಚಾರಿಗಳು ಫುಟ್‌ಪಾತ್ ಮೇಲೆ ಸಂಚರಿಸಲು ಅವಕಾಶ ಇಲ್ಲದಂತಾಗಿದೆ.
ಪ್ರಯಾಣಿಕರ ತಂಗುದಾಣ ನಿಮಾಣಕ್ಕೆ ಒತ್ತಾಯ
ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಎದುರು ಬಸ್‌ಗಾಗಿ ನಿತ್ಯ ನೂರಾರು ವಿದ್ಯಾರ್ಥಿಗಳು ರಸ್ತೆ ಬದಿ ನಿಂತು ಕಾಯುತ್ತಾರೆ. ಆದರೆ ಈ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣವೇ (ಶೆಲ್ಟರ್) ಇಲ್ಲ. ಹೀಗಾಗಿ ಕಳೆದೆರಡು ವರ್ಷದಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಈ ಜಾಗದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು ಎಂದು ಗ್ರಾಮದ ರಾಜು ತಿಳವಳ್ಳಿ ಒತ್ತಾಯಿಸಿದ್ದಾರೆ.
‘ಈ ರಸ್ತೆಯನ್ನು ಕೆ.ಆರ್.ಡಿ.ಸಿ.ಎಲ್ ಕಂಪನಿ ನಿರ್ಮಾಣ ಮಾಡಿದೆ. ಫುಟ್‌ಪಾತ್ ಮೇಲೆ ಅಂಗಡಿ ತೆರವು ಮಾಡಿಸಲು ಅವರಿಗೆ ಸೂಚಿಸಲಾಗಿದೆ. ರಸ್ತೆ ನಿರ್ವಹಣೆ ನಮಗೆ ಒಪ್ಪಿಸಿದ ಕೂಡಲೇ ಫುಟ್‌ಪಾತ್ ತೆರವುಗೊಳಿಸಲಾಗುವುದು. ಪ್ರಯಾಣಿಕರ ತಂಗುದಾಣ ನಿರ್ಮಾಣದ ಜವಾಬ್ದಾರಿ ಕಂಪನಿಗಿದೆ. ರಸ್ತೆ ಕಾಮಗಾರಿ ಮುಗಿಯುವ ವೇಳೆ ಅದನ್ನೂ ಮಾಡುತ್ತಾರೆ’ ಎನ್ನುತ್ತಾರೆ ಪಿಡಿಒ ರವಿ.ಬಿ.
***
ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ಜಾಗದ ಕೊರತೆಯಿದೆ. ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೂ ಜಾಗವಿಲ್ಲ. ಕಸ ತೆರವಿಗೆ ಕ್ರಮವಹಿಸುತ್ತೇವೆ
– ಗೀತಾ ಚಲವಾದಿ, ಗ್ರಾ.ಪಂ ಅಧ್ಯಕ್ಷೆ
***
ಕಸ ಹಾಕಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು. ಕೂಡಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕು. ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು
– ಸಂದೀಪ ಬಾಸೂರ, ಗ್ರಾಮಸ್ಥ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.