ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಮಾಜಿ ಸಂಸದ ಆರ್‌. ಧ್ರುವನಾರಾಯಣ ಹೇಳಿಕೆ

‘ಆರೋಗ್ಯ ಹಸ್ತ’ ಕಾರ್ಯಕ್ರಮಕ್ಕೆ ಚಾಲನೆ
Last Updated 14 ಸೆಪ್ಟೆಂಬರ್ 2020, 14:31 IST
ಅಕ್ಷರ ಗಾತ್ರ

ಹಾವೇರಿ: ‘ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ.ಕೋವಿಡ್‌ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ’ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ ಆರೋಪಿಸಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ಗೆ ಕಿಟ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಹದಗೆಟ್ಟ ಆರ್ಥಿಕ ಪರಿಸ್ಥಿತಿ:ದೇಶದಲ್ಲಿ ಜಿಡಿಪಿ ಕುಸಿಯುತ್ತಿದ್ದು, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.117 ದೇಶಗಳಲ್ಲಿ ಭಾರತದಲ್ಲಿ ಹಸಿವಿನ ಶ್ರೇಯಾಂಕ ಪ್ರಸ್ತುತ‌ 102ನೇ ಸ್ಥಾನದಲ್ಲಿದೆ. ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದ್ದಾಗ 85ನೇ ಸ್ಥಾನದಲ್ಲಿತ್ತು. ಕೋವಿಡ್‌ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಅವರು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಆರೋಗ್ಯ ಸಚಿವರು ಯಾರು ಎಂಬುದೇ ಗೊಂದಲವಾಗಿದೆ. ಸಚಿವರ ನಡುವೆ ಸಹಕಾರ, ಹೊಂದಾಣಿಕೆ ಕಾಣುತ್ತಿಲ್ಲ. ಕೋವಿಡ್‌ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡುವ ಮೂಲಕವಿರೋಧ ಪಕ್ಷವಾದ ಕಾಂಗ್ರೆಸ್‌ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದರು.

ಡೈವರ್ಟ್‌ ಅಂಡ್‌ ರೂಲ್‌:ಕೋಮು ಮತ್ತು ಜಾತಿಯ ಅಂಶಗಳಿಂದ ಬಿಜೆಪಿ ಮತಗಳನ್ನು ಸೆಳೆದಿರಬಹುದು. ಆದರೆ, ಬಡವರು ಮತ್ತು ಕಾರ್ಮಿಕರನ್ನು ಇಂದಿಗೂ ಕಾಪಾಡುತ್ತಿರುವುದು ಕಾಂಗ್ರೆಸ್‌ ಕಾರ್ಯಕ್ರಮಗಳೇ. ಉದ್ಯೋಗ ಖಾತ್ರಿ ಯೋಜನೆಯಿಂದ ಬಡವರಿಗೆ ಉದ್ಯೋಗ ಸಿಕ್ಕಿದೆ. ಹಸಿವಿನಿಂದ ನರಳುತ್ತಿರುವವರಿಗೆ ‘ಅನ್ನಭಾಗ್ಯ’ ನೆರವಾಗಿದೆ. ‘ಡಿವೈಡ್‌ ಅಂಡ್‌ ರೂಲ್’ ಎಂಬುದು ಬ್ರಿಟಿಷರ ತತ್ವ.‌ ‘ಡೈವರ್ಟ್‌ ಅಂಡ್‌ ರೂಲ್‌’ ಎಂಬುದು ಬಿಜೆಪಿಯವರ ತತ್ವವಾಗಿದೆ ಎಂದು ಟೀಕಿಸಿದರು.

ಆರೋಗ್ಯ ಹಸ್ತ:ರಾಜ್ಯದಾದ್ಯಂತ ಕಾಂಗ್ರೆಸ್‌ ವತಿಯಿಂದ ‘ಆರೋಗ್ಯ ಹಸ್ತ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 15 ಸಾವಿರ ಕಾರ್ಯಕರ್ತರನ್ನು ‘ಕೊರೊನಾ ವಾರಿಯರ್ಸ್‌’ ಎಂದು ಆಯ್ಕೆ ಮಾಡಿದ್ದೇವೆ. ಇವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ನೋಂದಣಿಯಾಗಿರುವ 320 ಖಾಸಗಿ ವೈದ್ಯರು ತರಬೇತಿ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯ್ತಿಗೆ ಇಬ್ಬರು ‘ಕೊರೊನಾ ವಾರಿಯರ್ಸ್‌’ಗಳನ್ನು ಆಯ್ಕೆ ಮಾಡಿ, ಪ್ರತಿ ಮನೆ–ಮನೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

₹6 ಕೋಟಿ ವೆಚ್ಚ:ಪ್ರತಿಯೊಂದು ಗ್ರಾಮ ಪಂಚಾಯ್ತಿಗೂ ಆರೋಗ್ಯ ಹಸ್ತದ ಕಿಟ್‌ ವಿತರಣೆ ಮಾಡಲಾಗುವುದು. ನಾಲ್ಕೂವರೆ ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಿಟ್‌ ಒಳಗೊಂಡಿದೆ. ಡಿಜಿಟಲ್‌ ಥರ್ಮಾಮೀಟರ್‌, ಆಕ್ಸಿಮೀಟರ್‌, ಶೀಲ್ಡ್‌, ಮಾಸ್ಕ್‌, ಸ್ಯಾನಿಟೈಸರ್‌, ಗ್ಲೌಸ್‌ ಮುಂತಾದ ಸಾಮಗ್ರಿ ಇರುತ್ತವೆ.ಈಗಾಗಲೇ ಎಂಟೂವರೆ ಸಾವಿರ ಕಿಟ್‌ ವಿತರಣೆ ಮಾಡಿದ್ದೇವೆ. ಕೊರೊನಾ ವಾರಿಯರ್ಸ್‌ ಸುರಕ್ಷತೆಗಾಗಿ ಒಂದು ಲಕ್ಷ ಮೌಲ್ಯದ ಗ್ರೂಪ್‌ ಇನ್ಸೂರೆನ್ಸ್‌ ಮಾಡಿಸಿದ್ದೇವೆ. ಒಟ್ಟಾರೆ ಸುಮಾರು ₹6 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪಕ್ಷದ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು ದೇಣಿಗೆ ನೀಡಿದ್ದಾರೆ ಎಂದರು.

ಆರೋಗ್ಯಹಸ್ತ ಸಮಿತಿಯ ಸಂಚಾಲಕರಾದ ಸದಾನಂದ ದಂಗಣ್ಣವರ. ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್‌, ರುದ್ರಪ್ಪ ಲಮಾಣಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ತಾಲ್ಲೂಕು ಬ್ಲಾಕ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT