ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ನಿರ್ವಹಣೆ: ಸರ್ಕಾರ ವಿಫಲ’

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಟೀಕೆ
Last Updated 7 ಜುಲೈ 2021, 4:16 IST
ಅಕ್ಷರ ಗಾತ್ರ

ಹಾವೇರಿ: ‘ಕೋವಿಡ್‌ ಎರಡನೇ ಅಲೆ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಅಗತ್ಯ ವೈದ್ಯಕೀಯ ಸೌಲಭ್ಯಗಳು ಮತ್ತು ಸಿದ್ಧತೆಯ ಕೊರತೆಯಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆ’ ಎಂದುವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆ, ವೆಂಟಿಲೇಟರ್‌ಗಳು ಸಿಗದೆ ಜನರು ಸಾವು–ನೋವು ಅನುಭವಿಸಿದ್ದಾರೆ. ತಜ್ಞರ ಶಿಫಾರಸುಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿತು. ಹೈಕೋರ್ಟ್‌ ಮತ್ತು ಸುಪ್ರಿಂಕೋರ್ಟ್‌ಗಳೇ ಜನರ ನೆರವಿಗೆ ಧಾವಿಸಬೇಕಾಯಿತು ಎಂದು ಹೇಳಿದರು.

ರೆಮ್‌ಡಿಸೀವರ್‌ ಕಾಳಸಂತೆಯಲ್ಲಿ ಮಾರಾಟವಾಯಿತು. ಬ್ಲ್ಯಾಕ್‌ ಫಂಗಸ್‌ಗೆ ಸೂಕ್ತ ಔಷಧ ಮತ್ತು ಶಸ್ತ್ರಚಿಕಿತ್ಸೆ ಸೌಲಭ್ಯ ಹಲವಾರು ಜಿಲ್ಲೆಗಳಲ್ಲಿ ಇಂದಿಗೂ ಇಲ್ಲ. ಮೂರನೇ ಅಲೆ ಬರುವ ಆತಂಕ ಕಾಡುತ್ತಿದ್ದು, ರಾಜ್ಯದಲ್ಲಿ ಖಾಲಿ ಇರುವ ಮಕ್ಕಳ ತಜ್ಞರ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಲಸಿಕೆಯ ತೀವ್ರ ಕೊರತೆಯಿಂದ ಎರಡು ಡೋಸ್‌ಗಳ ನಡುವಿನ ಅವಧಿಯನ್ನೇ ಸರ್ಕಾರ ಹೆಚ್ಚಳ ಮಾಡಿತು. ದೇಶದಲ್ಲಿ 100 ಕೋಟಿ ಜನ ಮತ್ತು ರಾಜ್ಯದಲ್ಲಿ 5 ಕೋಟಿ ಮಂದಿ ಲಸಿಕೆಗೆ ಅರ್ಹರಾಗಿದ್ದಾರೆ. ಆದರೆ, ಇದುವರೆಗೂ ಶೇ 5ರಿಂದ ಶೇ 7ರಷ್ಟು ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಇಷ್ಟು ಕೊರತೆಯಿದ್ದರು, ಮೋದಿ ಅವರು 195 ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಿ, ‘ವಿಶ್ವಗುರು’ ಆಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ತೈಲಬೆಲೆ, ದಿನಸಿ, ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿವೆ. ಡಬಲ್‌ ಎಂಜಿನ್‌ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿಸುತ್ತೇವೆ ಎಂದು ಹೇಳುತ್ತಿದ್ದವರು ನರಕ ಸೃಷ್ಟಿಸಿದ್ದಾರೆ. ರಫೆಲ್‌ ಹಗರಣದ ಬಗ್ಗೆ ಕೇಂದ್ರ ಸರ್ಕಾರ ತನಿಖೆಯನ್ನೇ ನಡೆಸಲಿಲ್ಲ. ಈಗ ಫ್ರಾನ್ಸ್‌ನಲ್ಲಿ ನ್ಯಾಯಾಧೀಶರಿಂದ ತನಿಖೆ ಶುರುವಾಗಿದೆ. ರಾಜ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಹಿಂದೆ, ದೇಶವನ್ನು ‘ಈಸ್ಟ್‌ ಇಂಡಿಯಾ ಕಂಪನಿ’ ಆಳ್ವಿಕೆ ನಡೆಸಿತ್ತು. ಹೀಗೆ ಮುಂದುವರಿದರೆ ಅಂಬಾನಿ, ಅದಾನಿ ಅವರ ‘ಕಂಪನಿ’ಗಳ ಆಡಳಿತ ಮತ್ತೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

‘40 ವರ್ಷದಿಂದ ಜನಸಂಪರ್ಕದಲ್ಲಿದ್ದೇವೆ’

‘ಹಾನಗಲ್‌ ವಿಧಾನಸಭಾ ಕ್ಷೇತ್ರದ 2018ರ ಚುನಾವಣೆಯಲ್ಲಿ ಸೋತ ಶ್ರೀನಿವಾಸ ಮಾನೆ ಅವರು ನಿರಂತರವಾಗಿ ಜನಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾವು 40 ವರ್ಷಗಳಿಂದ ಅದೇ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೇವೆ’ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ತಿರುಗೇಟು ನೀಡಿದರು.

ಸ್ಥಳೀಯ ಮುಖಂಡರಿಗೆ ಟಿಕೆಟ್‌ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದ್ದೇವೆ. ಹೈಕಮಾಂಡ್‌ ಎಲ್ಲರ ಜತೆ ಮಾತನಾಡಿ ನಿರ್ಣಯ ತೆಗೆದುಕೊಳ್ಳಲಿದೆ. ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಭರವಸೆ ಇದೆ. ಯಾವ ಸಮುದಾಯಕ್ಕಾದರೂ ಟಿಕೆಟ್‌ ಕೊಡಲಿ, ಒಟ್ಟಿನಲ್ಲಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂದು ನಮ್ಮ ಒತ್ತಾಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಕಾಶಗೌಡ ಪಾಟೀಲ, ಡಾ.ಸಂಜಯ ಡಾಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT