ಬುಧವಾರ, ಏಪ್ರಿಲ್ 21, 2021
32 °C

ವಿರಕ್ತ ಪರಂಪರೆಯ ಗೌರಿ ಶಿಖರ ಶಿವಲಿಂಗಶ್ರೀ: ಹೊಸರಿತ್ತಿಯ ಗುದ್ಧಲೀಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ತಪಸ್ಸಿನ ಶಕ್ತಿಯ ಮೂಲಕ ಗಳಿಸಿದ ಶಿವಯೋಗ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಧಾರೆಯೆರೆದು ಅವರನ್ನು ಅಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಿ ಆ ಮೂಲಕ ಸಮಷ್ಟಿಯ ಹಿತವನ್ನು ಕಾಯ್ದ ಹುಕ್ಕೇರಿಮಠದ ಶಿವಲಿಂಗ ಶ್ರೀಗಳು ಕನ್ನಡ ನಾಡಿನ ವಿರಕ್ತ ಪರಂಪರೆಯ ಗೌರಿಶಿಖರವಾಗಿದ್ದಾರೆ’ ಎಂದು ಹೊಸರಿತ್ತಿಯ ಗುದ್ಧಲೀಶ್ವರಮಠದ ಗುದ್ಧಲೀಶ್ವರ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದ ಶಿವಾನುಭವದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗ ಸ್ವಾಮಿಗಳ 104ನೇ ಜಯಂತಿ ಹಾಗೂ ಶಿವಬಸವ ಸ್ವಾಮಿಗಳ ‘ಬೆಳ್ಳಿ ಮೂರ್ತಿ ಅನಾವರಣ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ಧ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಮಹಾತ್ಮರ ಆಚರಣೆ ಕೇವಲ ಸಮಾರಂಭಕ್ಕೆ ಸೀಮಿತಗೊಳಿಸಲು ಅಲ್ಲ. ಅದು ಅವರ ಆದರ್ಶ ಮತ್ತು ಜೀವನ ಸಂದೇಶವನ್ನು ಪರಿಪಾಲಿಸಲು ಹಾಕಿಕೊಳ್ಳುವ ಮಾರ್ಗವಾಗಿದೆ. ಶಿವಲಿಂಗ ಶ್ರೀಗಳ ಜೀವನವು ಒಂದು ದಾರಿದೀಪವಾಗಿದೆ ಎಂದು ಹೇಳಿದರು.

ಮಠವನ್ನೇ ಆಸ್ತಿಯನ್ನಾಗಿಸಿದರು

ಶಿವಲಿಂಗ ಶ್ರೀಗಳು ಆಸ್ತಿ ಇರುವ ಮಠಕ್ಕೆ ಸ್ವಾಮಿಯಾಗಲಿಲ್ಲ. ಮಠವನ್ನೇ ಸಮಾಜದ ಆಸ್ತಿಯಾಗಿ ಪರಿವರ್ತಿಸಿದರು. ಅನ್ನ, ಅರಿವು, ಆಶ್ರಯ ನೀಡಿ ಲಿಂಗಾಂಗ ಸಾಮರಸ್ಯ ಸಾಧಿಸಿ ಭಕ್ತರ ಪಾಲಿಗೆ ಕಾಮಧೇನು ಕಲ್ಪವೃಕ್ಷವಾಗಿ ನಡೆದಾಡುವ ದೇವರಾಗಿದ್ದರು ಎಂದು ಹೇಳಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ‘ನಾನು ಮೊದಲ ಬಾರಿಗೆ ಶಾಸಕನಾಗಲು ಶಿವಲಿಂಗ ಶ್ರೀಗಳ ಆಶೀರ್ವಾದವೇ ಕಾರಣವಾಗಿದೆ. ಸಮಾಜ ನಮ್ಮನ್ನು ಗೌರವದಿಂದ, ಆದರದಿಂದ ಕಾರಣಬೇಕಾದರೆ ನಾವು ಮಾಡುವ ಕಾರ್ಯಗಳೇ ಶ್ರೀರಕ್ಷೆಯಾಗುತ್ತವೆ. ಅಂತಹ ಕಾಯಕದ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾದ ಶಿವಲಿಂಗ ಶ್ರೀಗಳು ಉನ್ನತ ಸ್ಥಾನದಲ್ಲಿದ್ದಾರೆ’ ಎಂದು ಹೇಳಿದರು.

ಹಾವೇರಿ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಲಿಂಗ ವೃತ್ತವನ್ನು ಹೆಸರಿಸಿ ಅವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ನುಡಿ ನಮನ ಸಲ್ಲಿಸಿದ ರೂಪಾ ಸಜ್ಜನರ ಮಾತನಾಡಿ, ಶಿವಲಿಂಗ ಶ್ರೀಗಳು ಜನಿಸಿ ಸ್ವಾಮಿಗಳಾದವರಲ್ಲ, ಸ್ವಾಮಿಯಾಗಲು ಜನಿಸಿದವರು. ಮಠಕ್ಕೆ ಆಸ್ತಿ ಮಾಡದೇ ಮಠವನ್ನು ಆದರ್ಶವನ್ನಾಗಿ ಮಾಡಿದರು. ಬಟ್ಟೆ ಬಂಗಾರವನ್ನು ಒಂದೇ ರೀತಿಯಾಗಿ ನೋಡಿದ ಶ್ರೀಗಳು ವೈರಾಗ್ಯದ ತಪೋನಿಧಿಯಾಗಿದ್ದರು ಎಂದು ಹೇಳಿದರು.

ಬೆಳ್ಳಿ ಮೂರ್ತಿ ಅನಾವರಣ

ಶಿವಬಸವ ಸ್ವಾಮಿಗಳ 75ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶಿವಬಸವ ಶ್ರೀಗಳ ಬೆಳ್ಳಿ ಮೂರ್ತಿಯನ್ನು ಅನಾವರಣಗೊಳಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಪಿ.ಆರ್. ಭಗವಂತಗೌಡರ ಹಾಗೂ ನಿವೃತ್ತ ಶಿಕ್ಷಕ ಎಸ್.ಆರ್. ಮಾಗನೂರು ಅವರನ್ನು ಸನ್ಮಾನಿಸಲಾಯಿತು.

ಹಾವೇರಿ ನಗರಾಭಿವೃದ್ಧಿ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಉದ್ಯಮಿ ಕೆ.ಮಂಜಪ್ಪ, ಪಿ.ಡಿ.ಶಿರೂರ, ವೀರಣ್ಣ ಅಂಗಡಿ, ಶಿವಯೋಗಪ್ಪ ಅರಣಿ, ಎಸ್.ಎಂ ಹಾಲಯ್ಯನವರಮಠ, ಶಿವಬಸಪ್ಪ ಹುರಳಿಕುಪ್ಪಿ, ಪ್ರಭು ಹಿಟ್ನಳ್ಳಿ, ಶಿವಯೋಗಿ ವಾಲಿಶೆಟ್ಟರ, ಬಿ.ಬಸವರಾಜ, ಜಗದೀಶ ತುಪ್ಪದ, ಜಿ.ಕೆ.ಹೂಗಾರ. ಶಿವಕುಮಾರ ಮುದಗಲ್ಲ ಇದ್ದರು.

ಸವಿತಾ ಕಲಬುರ್ಗಿ ಪ್ರಾರ್ಥಿಸಿದರು. ಎಸ್‌.ಎಸ್. ಮುಷ್ಠಿ ಸ್ವಾಗತಿಸಿದರು. ಪುಷ್ಪಾ ಶಲವಡಿಮಠ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ. ನಾಶೀಪುರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು