ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದು ನೀರು ನಿರ್ವಹಣಾ ವ್ಯವಸ್ಥೆ; ಕೊಳಚೆ ನೀರು ಸಂಸ್ಕರಣೆಗೆ ಕ್ರಮ

ಕಾಮಗಾರಿ ಪರಿಶೀಲಿಸಿದ ಎಲ್‌.ಕೆ.ಅತೀಕ್‌
Last Updated 17 ಜೂನ್ 2021, 15:17 IST
ಅಕ್ಷರ ಗಾತ್ರ

ಹಾವೇರಿ: ಹಳ್ಳಿಗಳ ಕೊಳಚೆ ನೀರು ನದಿ ಹಾಗೂ ಜಲ ಮೂಲಗಳಿಗೆ ಸೇರುವ ಮುನ್ನ ಸಂಸ್ಕರಿಸಿ ಹರಿಸುವ ವಿನೂತನ ‘ಬೂದು ನೀರು ನಿರ್ವಹಣಾ ವ್ಯವಸ್ಥೆ’ ಅನುಷ್ಠಾನದ ಜಿಲ್ಲೆಯ ಕಾಮಗಾರಿ ಸ್ಥಳಗಳಿಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ವಿನೂತನವಾಗಿ ಸುಸ್ಥಿರ ಬೂದು ನೀರು ನಿರ್ವಹಣೆಗೆ ಮೊದಲ ಹೆಜ್ಜೆಯಾಗಿ ರಾಣೇಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣ ಸಮೀಪದ ಕೋಡಿಹಾಳ ಹಾಗೂ ಬ್ಯಾಡಗಿ ಮತ ಕ್ಷೇತ್ರ ವ್ಯಾಪ್ತಿಯ ಬೆನಕಕೊಂಡ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲ್ಲಿನ ತೊಟ್ಟಿ ನಿರ್ಮಾಣ:

ಗ್ರಾಮಗಳಲ್ಲಿ ಪಾತ್ರೆ ತೊಳದೆ ನೀರು, ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸೇರಿದಂತೆ ಕಲುಷಿತ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಮಾಡಲಾಗಿದೆ. ಸಿಮೆಂಟ್‍ ಕಾಲುವೆಗಳಲ್ಲಿ ನೀರು ಹರಿದು ಈ ಕಾಲುವೆಗೆ ಸಂಪರ್ಕ ಹೊಂದಿದಂತೆ ಕೆಳಹಂತದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿದ ಚರಂಡಿ ಮೂಲಕ ಹರಿದು, ದೊಡ್ಡ ಕಲ್ಲಿನ ತೊಟ್ಟಿಗಳಲ್ಲಿ ಸೇರಿ ಸಂಸ್ಕರಣಗೊಳ್ಳುತ್ತದೆ.

ನಂತರ ಈ ತೊಟ್ಟಿಯಿಂದ ನದಿಗೆ ಹರಿಸಲು ಕಲ್ಲಿನಿಂದಲೇ ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನದಿಗೆ ಕಲುಷಿತ ನೀರು ಸೇರುವ ಮುನ್ನವೇ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿತ ನೀರು ನದಿ ಸೇರಿದಂತೆ ಜಲಮೂಲಗಳಿಗೆ ಸೇರುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ.

ನದಿ ಕಲುಷಿತಗೊಳ್ಳದಂತೆ ವ್ಯವಸ್ಥೆ:

ಕೋಡಿಹಾಳ ಗ್ರಾಮದ ಪುಣ್ಯಕೋಟಿ ಮಠದ ಹತ್ತಿರ ನದಿಗೆ ಹರಿದು ಹೋಗುವ ಸುಮಾರು 360 ಮನೆಗಳಿಂದ (1622 ಜನಸಂಖ್ಯೆ) ಹರಿದು ಹೋಗುವ ಮಾರ್ಗದಲ್ಲಿ ಅಂದಾಜು 56,770 ಲೀಟರ್ ಬೂದು ನೀರನ್ನು ಸಂಸ್ಕರಿಸಲು ಸುಮಾರು 85,000 ಲೀಟರ್‌ನಷ್ಟು ಸಾಮರ್ಥ್ಯದ ‘ಸೆಡಿಮೆಂಟೇಶನ್‌ ಪಾಂಡ್‌, ಸ್ಟೆಬಲೈಜೇಷನ್‌ ಪಾಂಡ್‌ ಹಾಗೂ ಕನ್ಸಟ್ರಕ್ಟೆಡ್‌ ವೆಟ್‌ ಲ್ಯಾಂಡ್‌’ನಿರ್ಮಾಣ ಮಾಡಿ ಕಲುಷಿತ ನೀರು ಸಂಸ್ಕರಣೆಗೊಳಿಸಿ ಶುದ್ಧ ನೀರನ್ನು ನದಿಗೆ ಹರಿಸುವ ಯೋಜನೆ ಸಿದ್ಧವಾಗಿದೆ. ಈ ನೀರು ಸಂಸ್ಕರಣೆಗೊಂಡು ತುಂಗಭದ್ರಾ ನದಿಗೆ ಶುದ್ಧ ನೀರು ಹರಿಸುವುದರ ಮೂಲಕ ನದಿ ಕಲುಷಿತಗೊಳ್ಳದಂತೆ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕೋಡಿಹಾಳ ಮತ್ತು ಬೆನಕನಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT