ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಉಪಚುನಾವಣೆ: ಗೆದ್ದ ಕಾಂಗ್ರೆಸ್‌ ಹಟ, ಶ್ರೀನಿವಾಸ ಮಾನೆಗೆ ಭರ್ಜರಿ ಗೆಲುವು

Last Updated 3 ನವೆಂಬರ್ 2021, 2:16 IST
ಅಕ್ಷರ ಗಾತ್ರ

ಹಾವೇರಿ: ಬಿಜೆಪಿ–ಕಾಂಗ್ರೆಸ್ ನಡುವಿನ ತೀವ್ರ ಜಿದ್ದಾಜಿದ್ದಿ ಕಣವಾಗಿದ್ದ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು 7,373 ಮತಗಳ ಅಂತರದಿಂದ ಸಮೀಪ ಸ್ಪರ್ಧಿ ಬಿಜೆಪಿಯ ಶಿವರಾಜ ಸಜ್ಜನರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಹಾನಗಲ್‌ ಕ್ಷೇತ್ರದ 2,04,564 ಮತದಾರರ ಪೈಕಿ 1,71,264 ಮಂದಿ ಮತ ಚಲಾಯಿಸುವ ಮೂಲಕ ಶೇ 83.76ರಷ್ಟು ದಾಖಲೆಯ ಮತದಾನವಾಗಿತ್ತು. 87,490 ಮತಗಳನ್ನು ಪಡೆದ ಶ್ರೀನಿವಾಸ ಮಾನೆ ಅವರಿಗೆ ಶೇ 50.95 ಹಾಗೂ 80,117 ಮತಗಳನ್ನು ಪಡೆದ ಶಿವರಾಜ ಸಜ್ಜನರಿಗೆ ಶೇ 46.65 ಮತಗಳು ಲಭಿಸಿವೆ. 927 ಮತಗಳನ್ನು ಪಡೆದ ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಠೇವಣಿ ಕಳೆದುಕೊಂಡಿದ್ದಾರೆ.

ಫಲಿಸದ ಬಿಜೆಪಿ ತಂತ್ರ:ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಅಬ್ಬರದ ಪ್ರಚಾರ ನಡೆಸಿದ್ದವು. ಬಿಜೆಪಿ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಏಳೆಂಟು ಸಚಿವರ ದಂಡು ಕ್ಷೇತ್ರದಾದ್ಯಂತ ಓಡಾಡಿ ಗೆಲುವಿಗೆ ಕಸರತ್ತು ನಡೆಸಿತ್ತು. ಸಿಎಂ ಪಾಲಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಹಾನಗಲ್‌ ಅನ್ನು ಉಳಿಸಿಕೊಳ್ಳಬೇಕು ಎಂದು ಬಿಜೆಪಿ ರಣತಂತ್ರ ರೂಪಿಸಿತ್ತು.

‘ಡಬಲ್‌ ಎಂಜಿನ್‌ ಸರ್ಕಾರ, ಹಾನಗಲ್‌ ಅಳಿಯ, ಕ್ಷೇತ್ರಕ್ಕೆ ಅನುದಾನದ ಹೊಳೆ, ಸಿ.ಎಂ.ಉದಾಸಿ ನಿಧನದ ಅನುಕಂಪ.. ಈ ಯಾವ ಅಸ್ತ್ರಗಳೂ ಬಿಜೆಪಿಗೆ ಗೆಲುವು ತಂದುಕೊಡಲಿಲ್ಲ. ವಿವಿಧ ಜಾತಿಗಳ ಮುಖಂಡರನ್ನು ಸೇರಿಸಿ ಬೊಮ್ಮಾಯಿ ಅವರು ಸಭೆ ನಡೆಸಿದರೂ, ಮೇಲ್ನೋಟಕ್ಕೆ ಮುಖಂಡರಿಂದ ಒಪ್ಪಿಗೆ ಸಿಕ್ಕಿದರೂ, ಅದು ಮತಗಳಾಗಿ ಪರಿವರ್ತನೆಯಾಗಲಿಲ್ಲ.

ಕಾರ್ಯಕರ್ತರ ಕೊರತೆ:ಬಿಜೆಪಿಗೆ ಸ್ಥಳೀಯ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿತ್ತು. ಹಾನಗಲ್‌ಗಿಂತ ಶಿಗ್ಗಾವಿ–ಬ್ಯಾಡಗಿ ಕಾರ್ಯಕರ್ತರೇ ಹೆಚ್ಚಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಉದಾಸಿ ಕುಟುಂಬಕ್ಕೆ ಟಿಕೆಟ್‌ ನೀಡಲಿಲ್ಲ ಎಂಬ ಕಾರ್ಯಕರ್ತರ ಬೇಗುದಿ ಮೇಲ್ನೋಟಕ್ಕೆ ಮಾತ್ರ ಶಮನವಾಗಿತ್ತು. ಈ ಎಲ್ಲ ಕಾರಣಗಳು ಬಿಜೆಪಿಗೆ ಗೆಲುವಿಗೆ ತೊಡಕಾಗಿವೆ.

ಗೆದ್ದ ಕಾಂಗ್ರೆಸ್‌ ಹಟ:ಇತ್ತ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ‘ಜೋಡೆತ್ತು’ಗಳಂತೆ ಕ್ಷೇತ್ರದಾದ್ಯಂತ ಅಡ್ಡಾಡುತ್ತಾ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ಬಾರಿ ‘ಕೈ’ ತಪ್ಪಿದ್ದ ಕ್ಷೇತ್ರವನ್ನು ಈ ಬಾರಿ ‘ಕೈ’ ವಶ ಮಾಡಿಕೊಂಡು ಸೇಡು ತೀರಿಸಿಕೊಳ್ಳಬೇಕು ಎಂಬ ಹಟದಲ್ಲಿ ಕಾಂಗ್ರೆಸ್‌ ಗೆದ್ದಿದೆ.

ಬಿಜೆಪಿಯ ಬಿ–ಟೀಮ್‌ ಎಂಬ ಗಂಭೀರ ಆರೋಪ ಎದುರಿಸಿದ ಜೆಡಿಎಸ್‌, ಎಷ್ಟು ಅಲ್ಪಸಂಖ್ಯಾತರ ಮತಗಳನ್ನು ಗಳಿಸುತ್ತದೋ, ಅಷ್ಟು ಕಾಂಗ್ರೆಸ್‌ಗೆ ನಷ್ಟ, ಬಿಜೆಪಿಗೆ ಲಾಭ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಮತದಾರರು ಈ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ‘ಜೆಡಿಎಸ್‌ ದಳಪತಿ’ಗಳು ಹಾನಗಲ್‌ ಕ್ಷೇತ್ರದ ಪ್ರಚಾರಕ್ಕೆ ಮನ್ನಣೆ ನೀಡದ ಕಾರಣ ‘ತೆನೆ ಹೊತ್ತ ಮಹಿಳೆ’ ಮತದಾರರನ್ನು ಮನವೊಲಿಸುವಲ್ಲಿ ಸಫಲವಾಗಲಿಲ್ಲ.

ವಿಜಯೋತ್ಸವ:ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ನೆರೆದಿದ್ದರು. ಎಲ್ಲ ಸುತ್ತುಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನಿಧಾನವಾಗಿ ಸ್ಥಳದಿಂದ ನಿರ್ಗಮಿಸಿದರು. ‘ಕೈ’ ಕಾರ್ಯಕರ್ತರು ಬಣ್ಣ ಬಳಿದುಕೊಂಡು, ನೃತ್ಯ ಮಾಡುತ್ತಾ ಹರ್ಷೋದ್ಗಾರ ಮಾಡಿದರು. ಕಾಂಗ್ರೆಸ್‌ ಬಾವುಟವನ್ನು ಬೀಸುತ್ತಾ, ಶಿಳ್ಳೆ, ಚಪ್ಪಾಳೆ ಹಾಕುತ್ತಾ ಮಾನೆ ಅವರಿಗೆ ಜೈಕಾರ ಹಾಕಿದರು.

ಕಾಂಗ್ರೆಸ್‌ ಗೆಲುವಿಗೆ ಕಾರಣವಾದ ಅಂಶಗಳು

* ಕೋವಿಡ್‌ ಕಾಲದಲ್ಲಿ ಮಾನೆ ಅವರ ಮಾನವೀಯ ನೆರವು

* 2018ರಲ್ಲಿ ಸೋತರೂ ಜನರೊಂದಿಗೆ ನಿಕಟ ಸಂಪರ್ಕ

* ಕಾಂಗ್ರೆಸ್‌ ಸರ್ಕಾರದ ‘ಭಾಗ್ಯ’ದ ಯೋಜನೆಗಳು

* ಡಿಕೆಶಿ–ಸಿದ್ದರಾಮಯ್ಯ ಅಬ್ಬರದ ಪ್ರಚಾರ

* ‘ಬೆಲೆ ಏರಿಕೆ’ ವಿರುದ್ಧದ ಅಸ್ತ್ರ ಬಳಕೆ

ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳು

* ಸಿ.ಎಂ‌. ಉದಾಸಿ ಅವರ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದ್ದು

* ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ

* ಕ್ಷೇತ್ರದ ಹೊರಗಿನ ಅಭ್ಯರ್ಥಿಗೆ ಬಿಜೆಪಿ ಟಿಕೆಟ್

* ತಳಮಟ್ಟದಲ್ಲಿ ಪಕ್ಷ ಸಂಘಟಿಸದಿರುವುದು

* ಸ್ಥಳೀಯ ಕಾರ್ಯಕರ್ತರ ಕೊರತೆ

ಎರಡನೇ ಉಪಚುನಾವಣೆ

ಪಕ್ಷೇತರ ಅಭ್ಯರ್ಥಿ ಬಿ.ಆರ್‌.ಪಾಟೀಲ್‌ ನಿಧನದಿಂದ 1968ರಲ್ಲಿ ಹಾನಗಲ್‌ ಕ್ಷೇತ್ರದಲ್ಲಿ ಮೊದಲ ಉಪಚುನಾವಣೆ ನಡೆದಿತ್ತು. ಬಿಜೆಪಿ ಶಾಸಕ ಸಿ.ಎಂ.ಉದಾಸಿ ಅಸ್ತಂಗತರಾದ ಹಿನ್ನೆಲೆಯಲ್ಲಿ ಈ ಬಾರಿ ಎರಡನೇ ಉಪಚುನಾವಣೆ ನಡೆಯಿತು. ಸಿ.ಎಂ.ಉದಾಸಿ ಮತ್ತು ಶ್ರೀನಿವಾಸ ಮಾನೆ ಈ ಸಾಂಪ್ರದಾಯಿಕ ಎದುರಾಳಿಗಳ ಸೌಮ್ಯ ಹೋರಾಟವನ್ನು ಕಂಡಿದ್ದ ಕ್ಷೇತ್ರದ ಮತದಾರರು, ಈ ಬಾರಿ ಬಿಜೆಪಿ–ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ–ಪ್ರತ್ಯಾರೋಪಗಳಿಗೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT