ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮ್ಮಿನಕಟ್ಟಿ: ನೂಲು ನೆಚ್ಚಿಕೊಂಡ ನೇಕಾರರ ಬದುಕು ಬೀದಿಪಾಲು

ಕೆಎಚ್‌ಡಿಸಿಯಿಂದ ಸಿಗದ ಸೂಕ್ತ ಪ್ರೋತ್ಸಾಹ l ರಾಟೆ ತಿರುವಿದ ಕೈಗಳಿಗೆ ಸಿಗುತ್ತಿಲ್ಲ ಕೈತುಂಬ ದುಡಿಮೆ l ನೇಕಾರರ ಸಂಕಷ್ಟ ಕೇಳೋರ‍್ಯಾರು?
Last Updated 3 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ‘ದುಡಿದು ತಿನ್ನು ಬೇಕಾದಷ್ಟು, ಬೇಡಿ ತಿನ್ನು ನೀಡಿದಷ್ಟು' ಎನ್ನುವ ಹಾಗೆ ಮಗ್ಗ ಮತ್ತು ರಾಟಿ ನಂಬಿಕೊಂಡು ನೂಲು ತೆಗೆಯುವ ಮೂಲಕ ರಾಜ್ಯದಲ್ಲಿಯೇ ಸೈ ಎನಿಸಿಕೊಂಡಿದ್ದ ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದೆ.

ಅಭಿವೃದ್ಧಿಯಲ್ಲಿ ಆರಕ್ಕೇರದ ಮೂರಕ್ಕಿಳಿಯದ ತುಮ್ಮಿನಕಟ್ಟಿ ಗ್ರಾಮ ಕೈಮಗ್ಗಗಳು ಸದ್ದು ಮಾಡದೆ ಮೂಲೆ ಸೇರಿವೆ. ಇದರ ಪರಿಣಾಮ ದುಬಾರಿ ಜೀವನಕ್ಕೆ ಎದುರಾಗಿ ಈಜಲಾಗದೆ ಕಷ್ಟಗಳ ಗಂಟನ್ನು ಗಂಟಲಿನಲ್ಲಿ ಇಟ್ಟುಕೊಂಡವರಂತೆ ನಿತ್ಯವೂ ಮೂಕ ವೇದನೆ ಅನುಭವಿಸುವಂತಾಗಿದೆ. ವಯಸ್ಸಾದ ತಂದೆ ತಾಯಂದಿರತ್ತ ಒಮ್ಮೆ ಕಿವಿಗೊಟ್ಟರೆ ಸಾಕು 20-30 ವರ್ಷಗಳ ಸಮಸ್ಯೆಯ ಕಂತೆ ಬಿಚ್ಚಿಡುತ್ತಾರೆ. ಅವರ ನೋವಿನ ಕಥೆಗಳಿಂದ ಕರುಳು ಚುರ್ರೆನ್ನದೆ ಇರಲಾರದು.

1977ರಿಂದಲೂ ನೇಯುವುದನ್ನೇ ಉಸಿರಾಗಿಸಿಕೊಂಡಿದ್ದ ನೇಕಾರರು ಕೈಯಲ್ಲಿ ಮಗ್ಗ ಹಿಡಿದು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಆದರೆ, ಆಧುನಿಕತೆಯ ಭರಾಟೆಯಿಂದ ಕೆಲವೇ ವರ್ಷಗಳ ಹಿಂದೆಯಷ್ಟೇ ವಿದ್ಯುತ್ ಮಗ್ಗಗಳು ಲಗ್ಗೆಯಿಟ್ಟು ಕೈಮಗ್ಗದಾರಿಗಳ ಕನಸುಗಳಿಗೆ ಕೊಳ್ಳಿ ಇಟ್ಟಂತಾಯಿತು. ಮಗ್ಗ ಹಿಡಿದು ನೇಯುತ್ತಿದ್ದವರ ಕೈಗೆ ಸೂತ್ರವಿಲ್ಲದ ಗಾಳಿಪಟ ಕೊಟ್ಟಂತಾಗಿದೆ ಎಂದು ನೊಂದ ನೇಕಾರ ಶಿವಶಂಕ್ರಪ್ಪ ಬೇಲೂರಪ್ಪನವರ ಹೇಳುತ್ತಾರೆ.

ಯಂತ್ರಚಾಲಿತ ಮಗ್ಗದಿಂದ ಉಳ್ಳವರಿಗೆ ವರದಾನವಾದರೆ, ಬಡವರಿಗೆ ಶಾಪವಾಗಿ ಪರಿಣಮಿಸಿದೆ. ನೇಯ್ಗೆ ಬಿಟ್ಟು ಇನ್ನೊಂದು ಉದ್ಯೋಗವನ್ನು ಕನಸಿನಲ್ಲೂ ಊಹಿಸಿಕೊಳ್ಳದೆ ದುಡಿಯುತ್ತಿದ್ದ ಕೈಗಳಿಗೆ ಇಂದು ಬೇಡಿ ತಿನ್ನುವಂಥ ಪರಿಸ್ಥಿತಿ ಬಂದಿದೆ. ರಟ್ಟೆಯಲ್ಲಿ ಶಕ್ತಿ ಕಳೆದುಕೊಂಡು ಭಾರವಾದ ವಸ್ತುಗಳನ್ನು ಎತ್ತಲಾಗದೆ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ ಎನ್ನುತ್ತಾರೆ ಅವರು.

ರಾಟೆ ತಿರುವಿದ ಕೈಗಳಿಗೆ ಜಮೀನಿನಲ್ಲಿ ಕೆಲಸ ಕೊಡುತ್ತಿಲ್ಲ. ಇನ್ನು ವಿಪರ್ಯಾಸ ಅಂದರೆ ನೇಕಾರಿಕೆ ಕೆಲಸ ಅಂದ ಕೂಡಲೇ ಅರೆ ನಿರುದ್ಯೋಗಿಗಳೆಂದು ಕನ್ಯೆ ಕೊಡಲು ಹಿಂದೇಟು ಹಾಕಿರುವ ಉದಾಹರಣೆಗಳಿವೆ. ಇದೇ ಕಾರಣದಿಂದ ಅನೇಕ ಯುವಕ ಯುವತಿಯರು ಮದುವೆಯಾಗದೇ ಉಳಿದಿದ್ದಾರೆ ಎಂದು ಜ್ಞಾನಮೂರ್ತಿ ಭಂಡಾರಿ ಹಾಗೂ ಮಂಜಪ್ಪ ಕುಂಬಾರ ಬೇಸರ ವ್ಯಕ್ತಪಡಿಸುತ್ತಾರೆ.

ಕೂತಲ್ಲೇ ಕೆಲಸ: ‘ಹಿಂದೆ ಒಂದು ಸೀರೆ ನೇಯಲು ₹2 ನಂತರ ₹5 ಕೊಡುತ್ತಿದ್ದರು ಎಂದು ಶಾಂತಮ್ಮ ಉಪ್ಪಿನ ಹೇಳಿದರೆ, ಅಪಘಾತದಲ್ಲಿ ಕಾಲು ಕಳೆದುಕೊಂಡು ಕುಳಿತಲ್ಲೆ ತಿಪ್ಪಮ್ಮ ಎಮ್ಮಿಗನೂರು ದಿನವಿಡೀ ರಾಟೆ ತಿರುಗಿದರೆ ₹50 ರಿಂದ ₹60 ಸಿಗುತ್ತದೆ. ಅದರೊಟ್ಟಿಗೆ ಕೋಳಿ ಸಾಕಾಣಿಕೆಯೂ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ.

‘60 ವರ್ಷಗಳಿಂದ ನೇಕಾರಿಕೆ ಕೈಬಿಟ್ಟಿಲ್ರಿ, ವಯಸ್ಸಿನ್ಯಾಗ ವಾರಕ್ಕೆ 100 ಮೀಟರ್ ನೇಯ್ತಿದ್ವಿ ಆದ್ರ ರೇಟ್ ಕಡಿಮೆ ಇತ್ತು. ಈಗ ನಿಗಮದಿಂದ ಪಾಲಿಸ್ಟರ್ ನೂಲ ಕೊಡ್ತಾರ್ರಿ. 50 ಮೀಟರ್ ಒಂದು ಗಂಟು ನೇಯಾಕ ₹615 ಕೊಡ್ತಾರಾ ನಮಗ ಶಕ್ತಿಯಿಲ್ಲ. ತಿಂಗಳಾಗ 2 ಗಂಟು ಅಷ್ಟೇ ಆಗುತ್ರಿ. ಬಂದ ರೊಕ್ಕ ದವಾಖಾನಿಗೆ ಸಾಲಂಗಿಲ್ಲ. ಒಪ್ಪತ್ತಿನ ಗಂಜಿಗೂ ಪರದಾಡ್ತೀವಿ. ಒಂದು ಮನಿ ಕಟ್ಟಿಕೊಳ್ಳಾಕ ಆಗವಲ್ದು, ಹೆಂಗೋ ಒಂಟೈತಿ ದೇವರಿದ್ದಾೆ’ ಎಂದು ಬಸಪ್ಪ ಬುಳ್ಳಾಪುರ ಹಾಗೂ ಪತ್ನಿ ರುದ್ರಮ್ಮ ಹೀಗೆ ಅಲವತ್ತುಕೊಂಡರು.

‘ನಮ್ಮ ಮನೇಲಿ ಗಂಡು ಮಕ್ಕಳಿಲ್ಲ, ಕೈಮಗ್ಗ ಕೂಡ ಮೂಲೆ ಸೇರಿದೆ. ಎರಡು ರಾಟೆಗಳೇ ಕುಟುಂಬಕ್ಕೆ ಆಧಾರ. ಒಂದು ಬಾಬಿನ್ ಸುತ್ತಿದರೆ ₹2 ಸಿಗುತ್ತೆ. ಇಬ್ಬರು ಸೇರಿ 40-50 ಬಾಬಿನ್ ಸುತ್ತಿ ನಿಗಮಕ್ಕೆ ಕೊಡುತ್ತೇವೆ ಎಂದು ನಾಗಮ್ಮ ಶಾಂತನವರ ಹಾಗೂ ರತ್ನಮ್ಮ ಶಾಂತನವರ ಹೇಳಿದರೆ, ಮಕ್ಕಳ ಓದು, ಮನೆ ಖರ್ಚು ನೋಡಿಕೊಳ್ಳಲು ನೇಯ್ಗೆ ಬಿಟ್ಟು ಹೊಲಕ್ಕೆ ಕೂಲಿ ಹೋಗುತ್ತೇನೆ’ ಎನ್ನುತ್ತಾರೆ ವನಜಾಕ್ಷಿ ಕೊಳ್ಳೇರ ಅವರು.

‘ಹತ್ತಕ್ಕೂ ಹೆಚ್ಚು ವಿದ್ಯುತ್ ಯಂತ್ರಗಳಿವೆ. ಕೈಮಗ್ಗ ಇಲ್ಲವೆ ಯಂತ್ರಾಧಾರಿತ ಮಗ್ಗ ನಡೆಸುವುದು ದುಸ್ತರವಾಗಿದೆ. ಹಾಕಿದ ಬಂಡವಾಳ ಬರುತ್ತಿಲ್ಲ. ಕಾರ್ಮಿಕರಿಗಾಗಿ ಹೊಲದಿಂದ ಬಂದ ಲಾಭವನ್ನು ತಂದು ಇಲ್ಲಿಗೆ ಹಾಕಲಾಗುತ್ತಿದೆ. ವಿದ್ಯಾವಿಕಾಸ ಯೋಜನೆಯಡಿ ಪಾಲಿಸ್ಟರ್ ನೂಲು ಮಾತ್ರ ಕೊಡುತ್ತಾರೆ. ಇದರ ಜೊತೆಗೆ ಇತರೆ ಇಲಾಖೆಗಳಿಗೆ ಕೈಮಗ್ಗದ ಬಟ್ಟೆ ಬಳಸುವಂತೆ ಕ್ರಮ ಆದೇಶಿಸಿ ಕೈತುಂಬ ಕೆಲಸ ಕೊಟ್ಟರೆ ನೇಕಾರರ ಕಸುಬು ಉಳಿಯಲಿದೆ. ನಿತ್ಯ ಧರಿಸುವ ಉಡುಪು ಸೇರಿದಂತೆ ಎಲ್ಲ ಬಗೆಯ ಬಟ್ಟೆಯನ್ನು ಸಿದ್ಧಪಡಿಸುತ್ತೇವೆ’ ಎಂದು ಬಸವರಾಜಪ್ಪ ಕೇಲಗಾರ ಹೇಳಿದರು.

ಸರ್ಕಾರ ಮತ್ತು ಕೈಮಗ್ಗ ನಿಗಮ ನೇಕಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ವಾರದಾಗೊಮ್ಮೆ ಬಂದು ಹೋಗ್ತಾರೆ. ನಮ್ಮ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. 1984ರಲ್ಲಿ 1,300 ಕೈಮಗ್ಗ ಮತ್ತು 28 ಸಹಕಾರ ಸಂಘಗಳು ಇದ್ದವು. ಈಗ ಕೆಎಚ್‌ಡಿಸಿ ಅಂಕಿಅಂಶದ ಪ್ರಕಾರ ಕೇವಲ 72 ಕೈಮಗ್ಗಗಳು ಮಾತ್ರ ಉಳಿದುಕೊಂಡಿವೆ. ನಿಗಮದಿಂದ ಕೊಡುತ್ತಿರುವ ಕೂಲಿ ಯಾವುದಕ್ಕೂ ಸಾಲುತ್ತಿಲ್ಲ. ಹಾಗಾಗಿ ಸರ್ಕಾರ ₹400 ರಿಂದ ₹500 ದಿನಗೂಲಿ ನಿಗದಿಪಡಿಸಿ ನೇಕಾರರ ಬದುಕಿಗೆ ಉಸಿರಾಗಬೇಕೆಂಬುದು ನೇಕಾರ ಕುಟುಂಬಗಳ ಒತ್ತಾಯವಾಗಿದೆ.

ಕುಟುಂಬದ ನಿರ್ವಹಣೆ ಬಲು ಕಷ್ಟ

ಬದಲಾವಣೆ ಬಯಸಿ ₹3 ಲಕ್ಷ ಖರ್ಚು ಮಾಡಿ ಬೆಳಗಾವಿ ಹಾಗೂ ಬೆಂಗಳೂರಿನಿಂದ ತಂದು 2 ವಿದ್ಯುತ್ ಮಗ್ಗ ಜೋಡಿಸಲಾಗಿದೆ. ಬೇರೆಯವರ ಯಂತ್ರಗಳನ್ನು ಜೋಡಿಸಿ ಕೊಡುತ್ತೇನೆ. ಕೂಡಿಟ್ಟ ಹಣದ ಜೊತೆಗೆ ಬ್ಯಾಂಕ್ ಸಾಲ ಪಡೆದು ಕಸುಬು ಮುಂದುವರಿಸಿದ್ದೇನೆ. ನಮ್ಮಲ್ಲಿ ತುಮ್ಮಿನಕಟ್ಟಿ ‘ಮಸರೈ ತೋಪು ಮುಸುಕಿನ ಸೀರೆ’ ತಯಾರಿಸುತ್ತೇವೆ. ಒಂದು ಸೀರೆಗೆ ಇತರೆ ಖರ್ಚು ಸೇರಿದಂತೆ ₹600 ರಿಂದ ₹700 ಖರ್ಚು ಬರಲಿದೆ. ಹುಬ್ಬಳ್ಳಿಯಿಂದ ಕೆ.ಜಿ ಲೆಕ್ಕದಲ್ಲಿ 100 ಸೀರೆ ತಯಾರಾಗುವಷ್ಟು ಕಚ್ಚಾ ನೂಲನ್ನು ₹70 ಸಾವಿರ ಕೊಟ್ಟು ತರಿಸುತ್ತೇವೆ. ಬಳಿಕ ತಂದಂಥ ನೂಲನ್ನು ₹200 ಕೂಲಿ ಕೊಟ್ಟು ಕಂಡಿಕೆ ಸಿದ್ಧಪಡಿಸಿ ಮಗ್ಗಕ್ಕೆ ಕೊಡುತ್ತೇವೆ. ಮೊದಲಿಗೆ ಬ್ಯಾಂಕಿನವರು ಸಾಲ ಸೌಲಭ್ಯ ಕೊಡುತ್ತಿದ್ದರು. ಈಗ ಸಾಲ ಕೊಡುವುದನ್ನು ನಿಲ್ಲಿಸಿದ್ದಾರೆ. ಮನೆಯವರೆಲ್ಲರೂ ನನ್ನ ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಹಾಗಾಗಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯ ಎಂದು ತಿರಕಪ್ಪ ದಾವಣಗೇರಿ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT