ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ಉಪಚುನಾವಣೆ: ಶೇ 83.44ರಷ್ಟು ಮತದಾನ

ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರ
Last Updated 30 ಅಕ್ಟೋಬರ್ 2021, 16:31 IST
ಅಕ್ಷರ ಗಾತ್ರ

ಹಾವೇರಿ: ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿ ಕಣವಾದ ಹಾನಗಲ್‌ ವಿಧಾನಸಭಾ ಕ್ಷೇತ್ರ–82ರ ಉಪಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಶಾಂತಿಯುತ ಮತ್ತು ಸುಗಮವಾಗಿ ನಡೆಯಿತು.

ಕೋವಿಡ್‌ ಹಿನ್ನೆಲೆಯಲ್ಲಿ 12 ಗಂಟೆಗಳ ಕಾಲ (ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ) ನಡೆದ ಪ್ರಕ್ರಿಯೆಯಲ್ಲಿ, ಪ್ರಾಥಮಿಕ ಮಾಹಿತಿ ಪ್ರಕಾರ ಶೇ 83.44ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ದಾಖಲೆಯ ಮತದಾನ ಮಾಡಿದರು.

ಮುಂಜಾನೆಯಿಂದಲೇ ಮತಗಟ್ಟೆಗಳತ್ತ ಮತದಾರರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಕೋವಿಡ್‌ ಮಾರ್ಗಸೂಚಿ ಪ್ರಕಾರ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಥರ್ಮಲ್ ಸ್ಕ್ಯಾನರ್‌ ಮೂಲಕ ಮತದಾರರ ದೇಹದ ಉಷ್ಣಾಂಶ ಪರೀಕ್ಷಿಸಿ, ಕೈಗಳಿಗೆ ಸ್ಯಾನಿಟೈಸರ್‌ ಹಾಕಿದ ನಂತರ ಮತಗಟ್ಟೆಗಳಿಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಬೆಳಿಗ್ಗೆ 9ಕ್ಕೆ ಶೇ 10.1, ಬೆಳಿಗ್ಗೆ 11ಕ್ಕೆ ಶೇ 24.31ರಷ್ಟು ಮತದಾನ ನಡೆಯಿತು. ಮಧ್ಯಾಹ್ನದವರೆಗೂ ಮತಗಟ್ಟೆಗಳ ಸರದಿ ಸಾಲಿನಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿ ಕಂಡು ಬಂದಿತು. ಪುಟ್ಟ ಮಕ್ಕಳೊಂದಿಗೆ ಬಾಣಂತಿಯರು, ವಯೋವೃದ್ಧರು, ಅಂಗವಿಕಲರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು.

ಮಧ್ಯಾಹ್ನದ ನಂತರ ಮತದಾನ ಮತ್ತಷ್ಟು ಚುರುಕುಗೊಂಡಿತು. ಮಧ್ಯಾಹ್ನ 1ರ ವೇಳೆಗೆ ಶೇ 44.59, ಮಧ್ಯಾಹ್ನ 3ರ ವೇಳೆಗೆ ಶೇ 62.72 ಹಾಗೂ ಸಂಜೆ 5ರ ವೇಳೆಗೆ 77.9ರಷ್ಟು ಮತದಾನವಾಯಿತು. ಕ್ಷೇತ್ರದಾದ್ಯಂತ 1,05,525 ಪುರುಷರು, 98,953 ಮಹಿಳೆಯರು ಹಾಗೂ ಇತರೆ 3 ಸೇರಿ 2,04,481 ಮತದಾರರ ಪೈಕಿ ಸಂಜೆ 5ರ ವೇಳೆಗೆ ಶೇ 77.90ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಶೇ 76.44 ರಷ್ಟು ಪುರುಷರು, ಶೇ 79.45ರಷ್ಟು ಮಹಿಳೆಯರು, ಶೇ 33.33ರಷ್ಟು ಇತರರು ತಮ್ಮ ಹಕ್ಕು ಚಲಾಯಿಸಿದರು.

ವಿವಿಧ ಮತಗಟ್ಟೆಗಳಲ್ಲಿ ಅಂಗವಿಕಲರ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರ್‍ಯಾಂಪ್‌ ವ್ಯವಸ್ಥೆ ಹಾಗೂ ತ್ರಿಚಕ್ರ ಸೈಕಲ್ ವಾಹನ ವ್ಯವಸ್ಥೆ ಮಾಡಲಾಗಿತ್ತು. ಹಾನಗಲ್ ಪಟ್ಟಣದ ಮತಗಟ್ಟೆ 79 ಅನ್ನು ಸಖಿ ಮತಗಟ್ಟೆಯಾಗಿ ರೂಪಿಸಲಾಗಿತ್ತು. ‘ಸೆಲ್ಫಿ ಕಾರ್ನರ್’ ಸೇರಿದಂತೆ ಮಹಿಳಾ ಸಿಬ್ಬಂದಿಗಳನ್ನು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಹಾನಗಲ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು263 ಮತಗಟ್ಟೆಗಳಿಗೆ 1155 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ಒಂದು ‘ಅಂಗವಿಕಲಸ್ನೇಹಿ’ ಮತಗಟ್ಟೆ ಹಾಗೂ ಎರಡು ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಕೋವಿಡ್‌ ಮಾರ್ಗಸೂಚಿ ಪಾಲನೆ:ಪ್ರತಿ ಮತಗಟ್ಟೆಗಳಲ್ಲೂ ಕೋವಿಡ್ ಮಾರ್ಗಸೂಚಿಯಂತೆ ಮತಗಟ್ಟೆ ಪ್ರವೇಶ ದ್ವಾರಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಆಶಾ, ಆರೋಗ್ಯ, ಕಂದಾಯ ಸಿಬ್ಬಂದಿಗಳು ಮತದಾರರಿಗೆ ಸ್ಯಾನಿಟೈಸರ್ ಸಿಂಪಡಣೆ, ಥರ್ಮಸ್ಕ್ಯಾನ್ ಬಳಸಿ ಜ್ವರ ತಪಾಸಣೆ, ಮಾಸ್ಕ್ ಧರಿಸಲು ಜಾಗೃತಿ, ಅಂತರ ಕಾಯ್ದುಕೊಳ್ಳಲು ಮತಗಟ್ಟೆ ಆವರಣದಲ್ಲಿ ನಿರ್ಮಾಣ ಮಾಡಲಾದ ಬಾಕ್ಸ್‌ಗಳಲ್ಲಿ ನಿಲ್ಲುವಂತೆ ಸೂಚನೆ ನೀಡುತ್ತಿದ್ದರು. ಕೆಲವು ಮತದಾರರು ಮಾಸ್ಕ್‌ ಧರಿಸದೇ ಸರದಿಯಲ್ಲಿ ನಿಂತ ದೃಶ್ಯ ಕಂಡು ಬಂದಿತು.

ಕೇಂದ್ರ ಚುನಾವಣಾ ಆಯೋಗ ನಿಯೋಜಿತ ಸಾಮಾನ್ಯ ವೀಕ್ಷಕರಾದ ಡಾ.ಮಾಧವಿ ಖೋಡೆ ಚವಾರೆ ಅವರು ಸಮ್ಮಸಗಿ ಮತಗಟ್ಟೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳು ಹಾಗೂ ಮತದಾನ ಪ್ರಕ್ರಿಯೆ ಕುರಿತಂತೆ ವೀಕ್ಷಣೆ ನಡೆಸಿದರು.

ಕೇಂದ್ರ ಪೊಲೀಸ್ ವೀಕ್ಷಕರಾದ ಐ.ಪಿ.ಎಸ್. ಅಧಿಕಾರಿ ಮಹೇಶ ಘುರೆ ಅವರು ಸೂಕ್ಷ್ಮ ಮತಗಟ್ಟೆ ಹಾಗೂ ದುರ್ಬಲ ಮತಗಟ್ಟೆಗಳಿಗೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣವರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಅವರು ಅಕ್ಕಿಆಲೂರ, ಕಲಕೇರಿ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಗಮನಸೆಳೆದ ‘ಸಖಿ’ ಮತಗಟ್ಟೆ
ಆಡೂರಿನ ಮತಗಟ್ಟೆ ಸಂಖ್ಯೆ 63ರಲ್ಲಿ ಮಾದರಿ ಮತಗಟ್ಟೆಯಾಗಿ ರೂಪಿಸಲಾಗಿತ್ತು. ವೃದ್ಧರಿಗೆ, ಹಿರಿಯರಿಗೆ, ಮಹಿಳೆಯರಿಗೆ ಆಸನ ವ್ಯವಸ್ಥೆ, ಶ್ಯಾಮಿಯಾನ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಅಕ್ಕಿಆಲೂರಿನ 122ರ ಮತಗಟ್ಟೆಯನ್ನು ‘ಸಖಿ’ ಮತಗಟ್ಟೆಯಲ್ಲಿ ಚಿಣ್ಣರಿಗಾಗಿ ಆಟಿಕೆ ವ್ಯವಸ್ಥೆ ಹಾಗೂ ಸೆಲ್ಫಿ ಕಾರ್ನರ್ ವ್ಯವಸ್ಥೆ ಮಾಡಲಾಗಿತ್ತು. ಪಿಂಕ್ ಬಣ್ಣದಿಂದ ಅಲಂಕಾರಗೊಳಿಸಿದ್ದು ವಿಶೇಷ ಗಮನ ಸೆಳೆಯಿತು.

121 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌
ಸುಗಮ ಮತದಾನಕ್ಕಾಗಿ ಕ್ಷೇತ್ರದಾದ್ಯಂತ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 121 ಮತಟ್ಟೆಗಳಲ್ಲಿ ‘ವೆಬ್‍ಕಾಸ್ಟಿಂಗ್’ ವ್ಯವಸ್ಥೆ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳು ಮತಗಟ್ಟೆಯ ಚುಟವಟಿಕೆಗಳ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸುಗಮ ಮತದಾನ ಪ್ರಕ್ರಿಯೆಗಾಗಿ 1155 ಸಿಬ್ಬಂದಿ ನಿಯೋಜಿಸಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT