ಸೋಮವಾರ, ಅಕ್ಟೋಬರ್ 14, 2019
24 °C
ಒಂದೇ ಸ್ಥಳದಲ್ಲಿ ವಾರದಲ್ಲಿ ಎರಡು ಅವಘಡ * ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ

ಹಾವೇರಿ: ಬಲಿಗಾಗಿ ಕಾದಿವೆ ಚರಂಡಿ, ರಸ್ತೆ ಗುಂಡಿಗಳು!

Published:
Updated:
Prajavani

ಹಾವೇರಿ: ಮಳೆಯಾದಾಗ ಹಾನಗಲ್ ರಸ್ತೆ ಮೇಲೆ ಹರಿಯುತ್ತಿದ್ದ ನೀರು ಮೊದಲು ಹೆಗ್ಗೇರಿ ಕೆರೆಯ ಒಡಲು ಸೇರುತ್ತಿತ್ತು. ಆದರೀಗ, ಕಾಮಗಾರಿಯ ಕಾರಣದಿಂದ ಆ ನೀರಿನ ಹರಿವಿಗೆ ತಡೆಯೊಡ್ಡಿರುವುದರಿಂದ ಇಡೀ ರಸ್ತೆಯೇ ಅಪಾಯಕಾರಿ ಮಾರ್ಗವಾಗಿ ಮಾರ್ಪಟ್ಟಿದೆ. 

ನಗರದಲ್ಲಿ ವಾರದಿಂದೀಚಿಗೆ ಸುರಿದ ಮಳೆಗೆ ಹಾನಗಲ್ ರಸ್ತೆಯಲ್ಲೇ ದೊಡ್ಡ ಅನಾಹುತಗಳು ಸಂಭವಿಸಿವೆ. ಅ.4ರಂದು ಈ ರಸ್ತೆಯ ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳನ್ನು ಸ್ಥಳೀಯರು ರಕ್ಷಿಸಿದರೆ, ಬುಧವಾರದ ಮಳೆಗೆ ಇದೇ ಚರಂಡಿಯಲ್ಲಿ 10 ಕುರಿಗಳು ಅಸುನೀಗಿವೆ. ಅಲ್ಲದೇ ಬೈಕ್ ಸವಾರರೂ ಮಳೆಗಾಲದಲ್ಲಿ ನೆಲಕ್ಕುರುಳಿರುವ ನಿದರ್ಶನಗಳು, ಈ ರಸ್ತೆಯ ದುರವಸ್ಥೆಗೆ ಸಾಕ್ಷಿಯಾಗಿದೆ. 

‘ಚರಂಡಿ ತುಂಬಿಕೊಂಡು ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಅಂಗಡಿಗಳಿಗೂ ನುಗ್ಗುತ್ತದೆ. ಪಂಪ್‌ ಮೂಲಕ ನೀರನ್ನು ಹೊರಚೆಲ್ಲಿದರೂ, ಮತ್ತೆ ರಾತ್ರಿ ವೇಳೆಗೆ ಮಳೆಯಾಗಿ ಅಂಗಡಿಗಳು ಜಲಾವೃತವಾಗುತ್ತಿವೆ. ಪ್ರತಿದಿನ ನೀರನ್ನು ಖಾಲಿ ಮಾಡುವುದೇ ಕೆಲಸವಾಗಿದೆ’ ಎಂದು ಇಲ್ಲಿನ ವ್ಯಾಪಾರಿಗಳು ಹೇಳುತ್ತಾರೆ.

‘ತುಳಸಿ ಐಕಾನ್‌, ವೈಭವಲಕ್ಷ್ಮೀ ಪಾರ್ಕ್, ಭಾರತಿನಗರ, ಶಿವಾಜಿನಗರ ಹಾಗೂ ಅಶ್ವಿನಿ ನಗರದಿಂದಲೂ ಹೆಗ್ಗೇರಿ ಕೆರೆಗೆ ಮಳೆ ನೀರು ಹೋಗುತ್ತಿತ್ತು. ಈಗ ಕೆರೆ ಸಮೀಪ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ನೀರು ಎಲ್ಲ ಕಡೆ ನುಗ್ಗುತ್ತಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ನೀರು ಹರಿದು ರಸ್ತೆಯ ಮಧ್ಯದ ಹೊಂಡಗಳು, ಸಿಡಿ ಪಕ್ಕದ ರಸ್ತೆಯೂ ಕುಸಿದಿದೆ. ಈ ಬಗ್ಗೆ ಅಧಿಕಾರಿಗಳು ಬಂದಾಗ ಅವರಲ್ಲಿಯೂ ಮನವಿ ಮಾಡಿದ್ದೇವೆ. ಆದರೂ, ಈವರೆಗೆ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ಸ್ಥಳೀಯರೇ ಸೇರಿ ಅವುಗಳನ್ನು ಮುಚ್ಚಿದ್ದೇವೆ’ ಎಂದು ಅಶ್ವಿನಿ ನಗರದ ಸಂತೋಷ ದೇವಗಿರಿ ಹೇಳಿದರು.

‘ಆಗಸ್ಟ್‌ನಲ್ಲಿ ಮಳೆಯಾದಾಗಲೇ ಈ ರಸ್ತೆಯ ತುಂಬ ಗುಂಡಿಗಳು ಬಿದ್ದಿವೆ. ನಿತ್ಯ ಒಂದಿಬ್ಬರು ಸವಾರರು ಇಲ್ಲಿ ಬೀಳುತ್ತಲೇ ಇದ್ದಾರೆ. ಬುಧವಾರ ಸಂಜೆ ಕೂಡ ಬೈಕ್‌ ಸವಾರನೊಬ್ಬ ಬಿದ್ದಿದ್ದ. ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾಮಗಾರಿ ಸ್ಥಳದಲ್ಲಿ ನಿರ್ಮಿಸಿರುವ ಒಡ್ಡನ್ನು ತಕ್ಷಣ ತೆರವುಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ಮಾರುತಿ ಮನವಿ ಮಾಡಿದರು.‌

Post Comments (+)