ಭಾನುವಾರ, ಫೆಬ್ರವರಿ 23, 2020
19 °C
ನೆರೆ ಪರಿಹಾರ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳಿಗೆ ನೋಟಿಸ್‌

ಮನೆ ನಿರ್ಮಾಣ ವಾರದೊಳಗೆ ಆರಂಭಿಸಿ: ಮನೋಜ್‍ಕುಮಾರ್ ಮೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳ ಪುನರ್‌ ನಿರ್ಮಾಣ ಕಾರ್ಯವನ್ನು ವಾರದೊಳಗೆ ಆರಂಭವಾಗಲೇಬೇಕು. ಈ ವಿಚಾರವನ್ನು ನಿರ್ಲಕ್ಷ್ಯ ಮಾಡುವ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‍ಕುಮಾರ್ ಮೀನಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪುನರ್ ವಸತಿ, ಪರಿಹಾರ ಕಾರ್ಯ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮನೆ ಕಳೆದುಕೊಂಡು ಐದಾರು ತಿಂಗಳಾದರೂ, ಒಂದು ಮನೆಯೂ ಪೂರ್ಣಗೊಂಡಿಲ್ಲ. ತಳಪಾಯ ಹಾಕಲು ಮೊದಲ ಕಂತಾಗಿ ₹1 ಲಕ್ಷವನ್ನು ಪಾವತಿಸಲಾಗಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಕಾರ್ಯನಿರ್ವಹಿಸಬೇಕು’ ಎಂದರು.

‘ದೇಶದ ಯಾವುದೇ ರಾಜ್ಯಗಳಲ್ಲಿ ₹5 ಲಕ್ಷದಷ್ಟು ದೊಡ್ಡ ಮೊತ್ತದ ಪರಿಹಾರ ಘೋಷಣೆಯಾಗಿಲ್ಲ. ಪರಿಹಾರ ಪಡೆದು ಮನೆ ನಿರ್ಮಾಣಕ್ಕೆ ಮುಂದಾಗದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಿ. ಅಗತ್ಯವಿದ್ದವರಿಗೆ ಮನೆ ನಿರ್ಮಾಣ ಮಾಡಿಕೊಡಿ. ಮನೆ ಹಾನಿಯಾದ ನಿವೇಶನದ ಬದಲು ಬೇರೆಡೆ ನಿರ್ಮಾಣ ಮಾಡಲು ಬೇಡಿಕೆ ಸಲ್ಲಿಸಿದರೆ ಕಾನೂನು ಬದ್ಧವಾದ ನಿವೇಶನವಿದ್ದರೆ ಜಿಲ್ಲಾಧಿಕಾರಿಗಳೇ ಅನುಮತಿ ನೀಡುತ್ತಾರೆ’ ಎಂದು ಸೂಚಿಸಿದರು.

ಶಾಶ್ವತ ನೀರಿನ ಮೂಲಗಳು ದೊರೆತರೆ ಮಾತ್ರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವ ಸಲ್ಲಿಸಿ. ಶುದ್ಧ ನೀರಿನ ಘಟಕಗಳ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಘಟಕಗಳ ಸಮರ್ಪಕ ನಿರ್ವಹಣೆ ಕುರಿತು ಎಲ್ಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಸಾಂಪ್ರದಾಯಿಕ ಕೃಷಿಗಿಂತ ರೈತರಿಗೆ ಸುಸ್ಥಿರ ಆದಾಯ ತರುವ ಬೆಳೆಗಳಿಗೆ ಪ್ರೋತ್ಸಾಹ ನೀಡಿ. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆಯತ್ತ ಚಟುವಟಿಕೆಗಳಿಗೆ ಉತ್ತೇಜನ ನೀಡಿ. ಈ ಕುರಿತು ಕೋಲಾರ ಜಿಲ್ಲೆಯ ರೈತರು ಮಾದರಿ ಕೃಷಿಯನ್ನು ಅಧ್ಯಯನ ಮಾಡಿ ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜಿಲ್ಲೆಯಲ್ಲಿ ಅಪೌಷ್ಟಿಕತೆ, ಹೆರಿಗೆ ಸಮಯದಲ್ಲಿ ತಾಯಿ-ಮಗುವಿನ ಮರಣ ಪ್ರಮಾಣವನ್ನು ಪರಿಶೀಲನೆ ನಡೆಸಿ, ಅಂಗನವಾಡಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಅಪೌಷ್ಟಿಕ ಮಕ್ಕಳು ಕಂಡುಬಂದರೆ ಕಾಳಜಿಯಿಂದ ಅವರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು.

ಕಂದಾಯ ಇಲಾಖೆಯಲ್ಲಿ ಆರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಪ್ರಕರಣಗಳು ಬಾಕಿ ಉಳಿಸಿಕೊಳ್ಳಬಾರದು. ತ್ವರಿತವಾಗಿ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು