ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | 'ಡೆಂಗಿ: 272 ಮಂದಿಯಲ್ಲಿ 267 ಮಂದಿ ಗುಣಮುಖ'

ಇಬ್ಬರು ಮಕ್ಕಳು ಸಾವು; ಮೂವರಿಗೆ ಚಿಕಿತ್ಸೆ ಮುಂದುವರಿಕೆ
Published 12 ಜೂನ್ 2024, 16:04 IST
Last Updated 12 ಜೂನ್ 2024, 16:04 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಬ್ಬರು ಬಾಲಕರು ಮೃತಪಟ್ಟಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಡೆಂಗಿಗೆ ತುತ್ತಾದ ಬಹುತೇಕರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದು, ಭಯಪಡುವ ಅಗತ್ಯವಿಲ್ಲವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ ಜನವರಿಯಿಂದ ಜೂನ್ 11ರವರೆಗೆ 272 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 267 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜೊತೆಗೆ, ಮೂವರು ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಬಾಲಕರು ಮೃತಪಟ್ಟಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡೆಂಗಿ ತಡೆಗೆ ಇಲಾಖೆಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಡೆಂಗಿ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಜ್ವರ ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ಹಾವೇರಿ ತಾಲ್ಲೂಕಿನ ಸಂಗೂರಿನ ಬಾಲಕ ಯಶವಂತ ಹಾಗೂ ಬ್ಯಾಡಗಿಯ ಬಾಲಕರೊಬ್ಬರು ಡೆಂಗಿಯಿಂದಾಗಿ ಇತ್ತೀಚೆಗೆ ಮೃತಪಟ್ಟಿದ್ದರು. ಉಳಿದಂತೆ ಮೂವರು, ಹುಬ್ಬಳ್ಳಿ ಕಿಮ್ಸ್ ಹಾಗೂ ಹಾವೇರಿಯ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾರ್ವಾ ಸಮೀಕ್ಷೆಗೆ ಸೂಚನೆ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ‘ಡೆಂಗಿ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

‘ಡೆಂಗಿ ಶಂಕಿತರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಿ. ಡೆಂಗಿ ಪ್ರಕರಣಗಳು ಹೆಚ್ಚಿರುವ ಗ್ರಾಮಗಳಿಗೆ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ. ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ. ಲಾರ್ವಾಗಳ ಸಮೀಕ್ಷೆ ನಡೆಸಿ’ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಜಿ.ಪಂ. ಸಿಇಒ ಸಭೆ: ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಭೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ್ ಶ್ರೀಧರ್, ‘ಡೆಂಗಿ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಿ. ಯಾವುದಾದರೂ ಲೋಪಗಳು ಕಂಡುಬಂದರೆ, ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಚಿಕಿತ್ಸೆಯಿಂದ ಗುಣಮುಖವಾದ ಡೆಂಗಿ ಪೀಡಿತರು ಜ್ವರ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವಹಿಸಲು ಸೂಚನೆ

ನಿರ್ವಹಣೆ ಕೊರತೆ ಗಲೀಜು ‘ಹಾವೇರಿ ಪಟ್ಟಣ ಹಾಗೂ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಎಲ್ಲೆಂದರಲ್ಲಿ ನೀರು ನಿಂತುಕೊಂಡು ಗಲೀಜು ಆಗುತ್ತಿದೆ. ಇಂಥ ವಾತಾವರಣದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿಗೆ ಕಾರಣವಾಗುತ್ತಿವೆ’ ಎಂದು ಸಂಗೂರು ಗ್ರಾಮಸ್ಥರು ದೂರಿದರು. ‘ಅಧಿಕಾರಿಗಳು ಮೇಲ್ನೋಟಕ್ಕೆ ಮಾತ್ರ ಜಾಗೃತಿಯೆಂದು ಹೇಳುತ್ತಾರೆ. ಆದರೆ ಸ್ಥಳ ಪರಿಶೀಲನೆ ಹಾಗೂ ಸ್ವಚ್ಛತೆ ವಿಚಾರದಲ್ಲಿ ಮೌನ ವಹಿಸಿದ್ದಾರೆ. ದೂರು ನೀಡಿದರೂ ಸ್ಥಳಕ್ಕೆ ಬರುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT