ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಮನೆಯ ದೀಪ ಆರಿಸಿದ ಪಟಾಕಿ

Published 31 ಆಗಸ್ಟ್ 2023, 3:15 IST
Last Updated 31 ಆಗಸ್ಟ್ 2023, 3:15 IST
ಅಕ್ಷರ ಗಾತ್ರ

ಸಿದ್ದು ಆರ್‌.ಜಿ.ಹಳ್ಳಿ

ಹಾವೇರಿ: ‘ಕೆಲಸಕ್ಕೆ ಹೋಗಿ ಬರುವೆ‌‌‌ ಎಂದು ಹೇಳಿಹೋದ ಮಗ ಶವವಾಗಿ ಹಿಂದಿರುಗಿದ್ದಾನೆ. ಸಂಭ್ರಮಕ್ಕೆ ಸಾಕ್ಷಿಯಾಗಬೇಕಾದ ಪಟಾಕಿಗಳು ನಮ್ಮ ಮನೆಯ ದೀಪವನ್ನೇ ಆರಿಸಿವೆ. ನಮಗೆ ಇನ್ಯಾರು ಗತಿ’

ತಾಲ್ಲೂಕಿನ ಆಲದಕಟ್ಟಿ ಸಮೀಪ ಮಂಗಳವಾರ ಸಂಭವಿಸಿದ ಪಟಾಕಿ ಅವಘಡದಲ್ಲಿ ಮಗ ದ್ಯಾಮಪ್ಪ ಓಲೇಕಾರ ಅವರನ್ನು ಕಳೆದುಕೊಂಡ ತಾಯಿ ಶೇಖವ್ವ ಮತ್ತು ಚಿಕ್ಕಮ್ಮ ಜಯವ್ವ ಅವರು ಬುಧವಾರ ಕಾಟೇನಹಳ್ಳಿಯ ತಮ್ಮ ಮನೆಯ ಎದುರು ಕೂತು ರೋದಿಸಿದರು. 

‘ಎಸ್ಸೆಸ್ಸೆಲ್ಸಿ ಓದಿದ್ದ ದ್ಯಾಮಪ್ಪ 4 ವರ್ಷಗಳಿಂದ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೆಳಿಗ್ಗೆ 8ಕ್ಕೆ ಮನೆ ಬಿಟ್ಟರೆ, ರಾತ್ರಿ 9ಕ್ಕೆ ಬರುತ್ತಿದ್ದ. ನಿಯತ್ತಿನ ಕೆಲಸಗಾರನೆಂದು ಮಾಲೀಕನೇ ಓಡಾಡಲು ಬೈಕ್‌ ಕೊಡಿಸಿದ್ದ. 8 ತಿಂಗಳ ಹಿಂದೆ ಅಕ್ಕನ ಲಗ್ನ ಮಾಡಿದ್ದ. ಮುಂದಿನ ಬೇಸಿಗೆಗೆ ಅವನಿಗೂ ಲಗ್ನ ಮಾಡಲು ತಯಾರಿ ನಡೆಸಿದ್ದೆವು. ಈಗ ಮಗನೇ ಕರಕಲಾಗಿ ಹೋಗಿದ್ದಾನೆ’ ಎಂದು ತಂದೆ ಶಿವಪ್ಪ ಓಲೇಕಾರ ಕಣ್ಣೀರು ಸುರಿಸಿದರು. 

ಸಾವಿನ ಸುದ್ದಿ ತಿಳಿಸಲಿಲ್ಲ

‘ಪಟಾಕಿ ದುರಂತದಲ್ಲಿ ಮಗ ರಮೇಶ ಬಾರ್ಕಿ ಸತ್ತಿದ್ದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ನಂಬಿಸಿದರು. ಬುಧವಾರ ಮನೆ ಬಾಗಿಲಿಗೆ ಶವ ಬಂದಾಗಲೇ ನನ್ನ ಕೂಸು ಇನ್ನಿಲ್ಲ ಎಂಬುದು ಗೊತ್ತಾಯಿತು. ಮಳೆ–ಬೆಳೆ ಸರಿಯಾಗಿ ಆಗದ್ದಕ್ಕೆ 6 ಎಕರೆ ಜಮೀನಿದ್ದರೂ, ಪಟಾಕಿ ಕೆಲಸಕ್ಕೆ ಹೋಗಿ ನಿತ್ಯ ₹ 300 ಪಗಾರ ತರುತ್ತಿದ್ದ. ಐವರು ಸಹೋದರಿಯರನ್ನು ಮದುವೆ ಮಾಡಿಕೊಟ್ಟು, ಕುಟುಂಬ ನಿರ್ವಹಣೆಯ ನೊಗ ಹೊತ್ತಿದ್ದ ಮಗನನ್ನೇ ದೇವರು ಕಿತ್ತುಕೊಂಡ’ ಎಂದು ತಾಯಿ ಗಂಗಮ್ಮ ಬಾರ್ಕಿ ಸಂಕಟ ತೋಡಿಕೊಂಡರು. 

ತಂದೆ ಶಿವಬಸಪ್ಪ ಅಕ್ಕಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಮನೆಯ ಜವಾಬ್ದಾರಿ ಹೊತ್ತಿದ್ದ ಮಗ ಶಿವಲಿಂಗ ಅಕ್ಕಿ ಶವವಾಗಿದ್ದಾನೆ. ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಅಶೋಕ ಹರನಗಿರಿ, ಮಾಜಿ ಸದಸ್ಯ ತಾಲ್ಲೂಕು ಪಂಚಾಯಿತಿ ಕಾಟೇನಹಳ್ಳಿ

ಕಾಟೇನಹಳ್ಳಿಯ ಮೂವರು ಯುವಕರು ಪಟಾಕಿ ದುರಂತದಲ್ಲಿ ಮೃತಪಟ್ಟ ಕಾರಣ ಇಡೀ ಗ್ರಾಮದಲ್ಲಿ ಶೋಕ ಆವರಿಸಿದೆ. ಗ್ರಾಮದ ಅಂಗಡಿಗಳು ಬಾಗಿಲು ಮುಚ್ಚಿದ್ದರೆ, ಜನರ ಓಡಾಟವಿಲ್ಲದೇ ಬೀದಿಗಳು ಬಿಕೋ ಎಂದವು. ಮನೆಯ ಎದುರು ಸೇರಿದ ಕುಟುಂಬ ಸದಸ್ಯರು, ಗ್ರಾಮಸ್ಥರು, ‘ನಮ್ಮೂರಿನ ಮಕ್ಕಳನ್ನು ಕಳೆದುಕೊಂಡಿದ್ದೇವೆ’ ಎಂದು ಕಣ್ಣೀರು ಹಾಕಿದರು.

ಒಡೆದ ದುಃಖದ ಕಟ್ಟೆ

ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರದಿಂದ ಕಾಟೇನಹಳ್ಳಿಗೆ ಬುಧವಾರ ಮಧ್ಯಾಹ್ನ ವಾಹನಗಳಲ್ಲಿ ಮೂವರು ಯುವಕರ ಮೃತದೇಹಗಳು ಬರುತ್ತಿದ್ದಂತೆ, ಗ್ರಾಮಸ್ಥರ ದುಃಖದ ಕಟ್ಟೆ ಒಡೆಯಿತು. ಸುಟ್ಟು ಕರಕಲಾದ ದೇಹಗಳನ್ನು ಬಟ್ಟೆಯಿಂದ ಪೂರ್ಣ ಮುಚ್ಚಲಾಗಿತ್ತು. 

ಕುಟುಂಬಸ್ಥರು ಮಕ್ಕಳ ಮುಖವನ್ನು ಒಮ್ಮೆ ತೋರಿಸಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಮನೆಯ ಬಾಗಿಲಿಗೆ ಬಂದ ಮೃತದೇಹಗಳಿಗೆ 5 ನಿಮಿಷದಲ್ಲೇ ಪೂಜೆಯ ಶಾಸ್ತ್ರ ಮುಗಿಸಿ, ಸ್ಮಶಾನದತ್ತ ಗ್ರಾಮಸ್ಥರು ಶವದ ಮೆರವಣಿಗೆಯೊಂದಿಗೆ ಭಾರದ ಹೆಜ್ಜೆ ಹಾಕಿದರು. 

ದುರಂತದಲ್ಲಿ ಮೃತಪಟ್ಟ ದಾವಣಗೆರೆಯ ಕೆ.ಬಿ.ಜಯಣ್ಣ ಅವರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಸಾವಿನಲ್ಲೂ ಒಂದಾದ ಗೆಳೆಯರು

‘ಗೆಳೆಯರಾದ ದ್ಯಾಮಪ್ಪ ಓಲೇಕಾರ ರಮೇಶ ಬಾರ್ಕಿ ಮತ್ತು ಶಿವಲಿಂಗ ಅಕ್ಕಿ ನಿತ್ಯ ಜೊತೆಯಲ್ಲೇ ಪಟಾಕಿ ಅಂಗಡಿ ಕೆಲಸಕ್ಕೆ ಹೋಗುತ್ತಿದ್ದರು. ಸಜೀವ ದಹನಗೊಂಡ ಈ ಮೂವರು ಸಾವಿನಲ್ಲೂ ಒಂದಾಗಿದ್ದಾರೆ’ ಎಂದು ಕಾಟೇನಹಳ್ಳಿ ಗ್ರಾಮಸ್ಥರು ಮಮ್ಮಲ ಮರುಗಿದರು. ಕಾಟೇನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಬುಧವಾರ ಮೂವರ ಮೃತದೇಹಗಳನ್ನು ಸಾಲಾಗಿ ಜೋಡಿಸಿ ಅಗ್ನಿಸ್ಪರ್ಶ ಮಾಡಲಾಯಿತು.

ದ್ಯಾಮಪ್ಪ ಓಲೇಕಾರ
ದ್ಯಾಮಪ್ಪ ಓಲೇಕಾರ
ರಮೇಶ ಬಾರ್ಕಿ
ರಮೇಶ ಬಾರ್ಕಿ
ಶಿವಲಿಂಗ ಅಕ್ಕಿ
ಶಿವಲಿಂಗ ಅಕ್ಕಿ
ಕೆ.ಬಿ.ಜಯಣ್ಣ ದಾವಣಗೆರೆ
ಕೆ.ಬಿ.ಜಯಣ್ಣ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT