ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೇ ಟಿಕೆಟ್ ಕೊಟ್ಟರೂ ಬಿಜೆಪಿಗೇ ಲಾಭ!

ಹಿರೇಕೆರೂರು ಕ್ಷೇತ್ರ: ಹೊಸ ಲೆಕ್ಕಾಚಾರದಲ್ಲಿ ಬಣಕಾರ ಪಕ್ಷೇತರ
Last Updated 1 ಡಿಸೆಂಬರ್ 2019, 13:13 IST
ಅಕ್ಷರ ಗಾತ್ರ

ಹಾವೇರಿ:ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ.ಪಾಟೀಲ ಬಿಜೆಪಿಯಿಂದ ಸ್ಪರ್ಧಿಸಿ ಚುನಾವಣೆ ಗೆದ್ದರೂ, ಯು.ಬಿ.ಬಣಕಾರ ಪಕ್ಷೇತರ ಅಭ್ಯರ್ಥಿಯಾಗಿ ವಿಜಯ ಪತಾಕೆ ಹಾರಿಸಿದರೂ ಲಾಭವಾಗುವುದು ಬಿಜೆಪಿಗೇ...

ಕ್ಷೇತ್ರದ ಈ ಹೊಸ ಲೆಕ್ಕಾಚಾರವನ್ನು ಕಮಲ ಪಾಳಯದ ಹಿರಿಯ ಮುಖಂಡರೂ ಒಪ್ಪಿಕೊಳ್ಳುತ್ತಾರೆ. ‘ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದರೆ, ಯಾವುದೇ ಮುಲಾಜಿಲ್ಲದೆ ಬಿ.ಸಿ.ಪಾಟೀಲ ಅವರಿಗೆ ನಮ್ಮ ಪಕ್ಷದಿಂದಟಿಕೆಟ್ ಸಿಗುತ್ತದೆ. ಆಗ ಅದೇ ಕ್ಷೇತ್ರದ ಬಿಜೆಪಿ ಮುಖಂಡ ಬಣಕಾರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಯಾರೇ ಗೆದ್ದರೂ ಕ್ಷೇತ್ರದಲ್ಲಿ ಅರಳುವುದು ಕಮಲವೇ’ ಎನ್ನುತ್ತಾರೆ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು.‌

‘ವ್ಯಕ್ತಿ ಹಾಗೂ ಜಾತಿಯೇ ಇಲ್ಲಿ ಫಲಿತಾಂಶ ನಿರ್ಧರಿಸುತ್ತದೆ’ ಎಂಬುದುಹಿರೇಕೆರೂರು ಕ್ಷೇತ್ರದ ರಾಜಕೀಯ ಇತಿಹಾಸ ಹೇಳುತ್ತದೆ.ಬಿ.ಸಿ.ಪಾಟೀಲ ಹಾಗೂ ಬಣಕಾರ ಇಬ್ಬರೂ ಸಾದರ ಲಿಂಗಾಯತರೇ. ಹೀಗಾಗಿಯೇ, ಕಳೆದ ಚುನಾವಣೆಯಲ್ಲಿ ಅವರು ತಲಾ 70 ಸಾವಿರಕ್ಕಿಂತ ಅಧಿಕ ಮತಗಳನ್ನು ಗಳಿಸಿದ್ದರು. ಬೇರೆ ಇನ್ಯಾವ ಅಭ್ಯರ್ಥಿ ಸಹ ಅವರ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿರಲಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಕೂಡ ಈಗ ಅದೇ ಜಾತಿಯ ಬಲಾಢ್ಯ ಅಭ್ಯರ್ಥಿಯ ಹುಡುಕಾಟದಲ್ಲಿದೆ.

‘ಬಿಜೆಪಿಯಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ’ ಎಂದು ಬಿ.ಸಿ.ಪಾಟೀಲರಿಗೆ ನೇರವಾಗಿ ಹೇಳುವ ಸ್ಥಿತಿಯಲ್ಲಿ ಬಿಜೆಪಿ ನಾಯಕರಿಲ್ಲ. ಅದೇ ಕಾರಣದಿಂದ, ‘ಅನರ್ಹ ಶಾಸಕರನ್ನು ತುಂಬ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ’ ಎಂದೇ ಹೇಳಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ಬಣಕಾರ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ, ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗುವುದಿಲ್ಲ. ಈ ನಂಬಿಕೆಯಲ್ಲೇ ಈಗಪಾಟೀಲರಿಗೆ ಅಥವಾ ಅವರು ಸೂಚಿಸಿದ ವ್ಯಕ್ತಿಗೇ ಮಣೆ ಹಾಕುತ್ತಾರೆ ಎನ್ನಲಾಗುತ್ತಿದೆ.‌

ಈ ಲೆಕ್ಕಾಚಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಣಕಾರ, ‘ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಕಣದಲ್ಲಿ ನಾನಿರಬೇಕು ಎಂಬುದು ಕ್ಷೇತ್ರದ ಜನರ ಆಶಯ. ಕೋರ್ಟ್ ಆದೇಶ ಹಾಗೂ ಪಕ್ಷದ ತೀರ್ಮಾನವನ್ನು ಎದುರು ನೋಡುತ್ತಿದ್ದೇನೆ’ ಎಂದರು.‌

ದೂರ ಉಳಿಯುವ ಎಚ್ಚರಿಕೆ: ಇನ್ನು ರಾಣೆಬೆನ್ನೂರು ಕ್ಷೇತ್ರದಲ್ಲಿ ಆರ್. ಶಂಕರ ವಿರುದ್ಧ ಕಮಲ ಪಾಳಯದ ಟಿಕೆಟ್ ಆಕಾಂಕ್ಷಿಗಳೇ ನೇರವಾಗಿ ಗುಡುಗುತ್ತಿದ್ದಾರೆ. ‘ಶಂಕರ್ ಈ ಕ್ಷೇತ್ರದವರಲ್ಲ. ತಟ್ಟೆ–ಲೋಟ ಹಂಚಿಕೊಂಡೇ ಶಾಸಕರಾದ ಅವರು, ಕಳೆದ 14 ತಿಂಗಳಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಮತ್ತೆ ಅವರಿಗೆ ಟಿಕೆಟ್ ಕೊಟ್ಟರೆ, ಪಕ್ಷ ಸಂಘಟನೆ ಕೆಲಸದಿಂದ ದೂರ ಉಳಿಯುತ್ತೇವೆ’‌ ಎಂದು ಎಚ್ಚರಿಕೆ ನೀಡಿದ್ದಾರೆ.

‘ಶಂಕರ್‌ ಕಣದಲ್ಲಿದ್ದರೆ ಸ್ಥಳೀಯ ಕಾರ್ಯಕರ್ತರು ಗೊಂದಲಕ್ಕೀಡಾಗುತ್ತಾರೆ. ಬಿಜೆಪಿ ಮೇಲೆ ಜನರಿಗಿರುವ ವಿಶ್ವಾಸವೂ ಕಡಿಮೆ ಆಗುತ್ತದೆ. ಅವರ ಋಣಭಾರವಿದ್ದರೆ ಮಂತ್ರಿ ಸ್ಥಾನ ಕೊಡಿ. ನಿಗಮ ಮಂಡಳಿ ನೀಡಿ. ಆದರೆ, ಮತ್ತೆ ಕಣಕ್ಕಿಳಿಸುವುದು ಬೇಡ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಬಸವರಾಜ ಕೇಲಗಾರ ಮನವಿ ಮಾಡಿದ್ದಾರೆ.

ಶಂಕರ್ ಬಂದ್ರೆ ಡ್ಯಾಮೇಜ್

‘ಅನರ್ಹ ಶಾಸಕರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ನಿಜ. ಆದರೆ, ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆಸೆ–ಆಕಾಂಕ್ಷೆ ಇಟ್ಟುಕೊಂಡೇ ಬಂದವರು. ಬಿಜೆಪಿ ಹೈಕಮಾಂಡ್ ರಾಣೆಬೆನ್ನೂರು ಕ್ಷೇತ್ರದಲ್ಲಿ ಶಂಕರ್‌ಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗುತ್ತದೆ’ ಎಂದುಬಸವರಾಜ ಕೇಲಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT