ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಇಂದು ಶಿಕ್ಷಕರ ದಿನಾಚರಣೆ * ಒಂದೇ ಊರಿನಲ್ಲಿ 216 ಶಿಕ್ಷಕರು

ಕಿತ್ತೂರಿನ ಮನೆ ಮನೆಯಲ್ಲೂ ಶಿಕ್ಷಕರು!

Published:
Updated:
Prajavani

ಹಾವೇರಿ: ಸುಮಾರು 3,500 ಜನಸಂಖ್ಯೆ ಇರುವ ಕಿತ್ತೂರಿನಲ್ಲಿ ‘ಕಲಿಕಾ ವೃತ್ತಿ’ಯೇ ಜೀವನಾಧಾರ. ಇಲ್ಲಿನ ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬರಾದರೂ ಶಿಕ್ಷಕರು ಸಿಗುತ್ತಾರೆ. ತಲೆಮಾರುಗಳಿಂದಲೂ ಇದೇ ವೃತ್ತಿ ಮಾಡಿಕೊಂಡು ಬಂದ ಕುಟುಂಬಗಳೂ ಇಲ್ಲಿವೆ!

ಹಾವೇರಿ ತಾಲ್ಲೂಕಿನಲ್ಲಿರುವ ಈ ಊರು, ರಾಜ್ಯದ ಮೂಲೆ ಮೂಲೆಗೂ  ಶಿಕ್ಷಕರನ್ನು ಕೊಟ್ಟಿದೆ. ಇದೇ ಕಾರಣಕ್ಕೆ ಕಿತ್ತೂರನ್ನು ‘ಶಿಕ್ಷಕರ ಗ್ರಾಮ‌’ವೆಂದೇ ಕರೆಯಲಾಗುತ್ತದೆ. 1961ರಲ್ಲಿ ನೆರೆ ಹಾವಳಿಯಿಂದ ಇದು ಹೊಸ ಕಿತ್ತೂರು ಹಾಗೂ ಹಳೆ ಕಿತ್ತೂರು ಎಂದು ಇಬ್ಭಾಗವಾಯಿತು. ಗ್ರಾಮಸ್ಥರು ಈಗಲೂ ಒಟ್ಟಾಗಿಯೇ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ.

ಕಿತ್ತೂರಿನಲ್ಲೇ ಹುಟ್ಟಿ ಬೆಳೆದ, ಇಲ್ಲಿನ ಸರ್ಕಾರಿ ಶಾಲೆಗಳಲ್ಲೇ ಕಲಿತ 216 ಶಿಕ್ಷಕರು ಈಗ ಮಕ್ಕಳ ಭವಿಷ್ಯ ರೂಪಿಸುವ ಕಾಯಕದಲ್ಲಿ ತೊಡಗಿದ್ದಾರೆ. ದಶಕದಿಂದ ಈಚೆಗೆ ಇಲ್ಲಿನ 80ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತರಾಗಿದ್ದಾರೆ.‌

‘ನನ್ನ ತಂದೆ ಎಸ್‌.ಬಿ.ಭಗವಂತೇಗೌಡ್ರು. ಕಿತ್ತೂರಿನಲ್ಲಿ ಶಿಕ್ಷಕ ಸೇವೆ ಪ್ರಾರಂಭಿಸಿ ಹಂದಿಗನೂರು, ಕೂಡಲ, ನೆಗಳೂರ ಸೇರಿದಂತೆ ಹತ್ತಾರು ಗ್ರಾಮಗಳ ಮಕ್ಕಳಿಗೆ ಪಾಠ ಹೇಳಿಕೊಟ್ಟವರು. ನಾನೂ ಅವರ ಹಾದಿಯಲ್ಲೇ ಬೆಳೆದು, ಈಗ ಹಾವೇರಿ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಆಗಿದ್ದೇನೆ.‌ ಮಕ್ಕಳ ಭವಿಷ್ಯ ರೂಪಿಸುವ ಸೇವೆಯನ್ನು ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ’ ಎನ್ನುತ್ತಾರೆ ಸಿ.ಎಸ್.ಭಗವಂತೇಗೌಡ್ರು.

ಶಿಷ್ಯಂದಿರು ಉನ್ನತ ಹುದ್ದೆಯಲ್ಲಿ

‘ನಾವು ನಾಲ್ಕು ಜನ ಮಕ್ಕಳು. ಅವರಲ್ಲಿ ಮೂವರು ಶಿಕ್ಷಕರಾಗಿದ್ದೇವೆ. ಹೆಂಡತಿ ಕುಸುಮಾ ಕೂಡ ಶಿಕ್ಷಕಿ. ಆಕೆಯ ಪೋಷಕರದ್ದೂ ಅದೇ ವೃತ್ತಿ. ಹೀಗಾಗಿ, ನಮ್ಮದೊಂದು ಪರಿಪೂರ್ಣ ‘ಟೀಚರ್ಸ್‌ ಫ್ಯಾಮಿಲಿ’. ಮನುಷ್ಯನಿಗೆ ಯಾವ ವೃತ್ತಿ ತೃಪ್ತಿ ನೀಡುತ್ತದೋ ಆ ಕೆಲಸವನ್ನೇ ಆತ ಮಾಡಬೇಕು. ನಮಗೆ ಇದರಲ್ಲಿ ನೆಮ್ಮದಿ ಇದೆ. ದುಡಿಮೆಗಾಗಿ ಈ ವೃತ್ತಿ ಆಯ್ದುಕೊಂಡವರಲ್ಲ’ ಎನ್ನುತ್ತಾರೆ ಶಿಕ್ಷಕ ಕುಮಾರ ಮೆರಳಿಹಳ್ಳಿ. ಈ ಗ್ರಾಮದ ಎಂ.ಡಿ.ಕುಲಕರ್ಣಿ ಅವರ ಮಕ್ಕಳು, ಸೊಸೆಯಂದಿರೂ ಸೇರಿ ಒಂದೇ ಮನೆಯಲ್ಲಿ ಆರು ಮಂದಿ ಶಿಕ್ಷಕರಿದ್ದಾರೆ!

‘ನಾನು 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪಾಠ ಮಾಡುತ್ತೇನೆ. ನನ್ನ ವಿದ್ಯಾರ್ಥಿ ಶಿವರಾಜ್ ಹರಳಿ ಈಗ ಪದವೀಧರ ಸಹಾಯಕ ಶಿಕ್ಷಕನಾಗಿ ಹೊಸಕಿತ್ತೂರು ಶಾಲೆಗೇ ಬಂದಿದ್ದಾನೆ. ಧರ್ಮೇಗೌಡ ಪಾಟೀಲ ಎಂಬ ನನ್ನ ವಿದ್ಯಾರ್ಥಿ ಪಿಎಸ್‌ಐ ಆಗಿದ್ದಾನೆ. ನಾವು ಕಲಿಸಿದ ಹುಡುಗರು ಇವರು. ಜವಾಬ್ದಾರಿಯುತ ಶಿಕ್ಷಕನ ತಾಕತ್ತು ಇದು’ ಎಂದು ಹೆಮ್ಮೆಪಡುತ್ತಾರೆ ಅವರು.

1929ರ ಆ.15ರಂದು ಪ್ರಾರಂಭವಾದ ಕಿತ್ತೂರಿನ ಸರ್ಕಾರಿ ಶಾಲೆ, ಅಸಂಖ್ಯಾತ ಶಿಕ್ಷಕರನ್ನು ಹುಟ್ಟು ಹಾಕಿದೆ. ಈಗಲೂ ಅವರೆಲ್ಲ ಅದನ್ನು ‘ಕಲಿಕೆಯ ಗರ್ಭಗುಡಿ’ ಎಂದೇ ಕರೆಯುತ್ತಾರೆ.

ನಮ್ಮೂರನ್ನು ಗುರುತಿಸಬೇಕು

‘ಕಿತ್ತೂರಿನ ಜನ ಬ್ರಿಟಿಷರ ಕಾಲದಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಈ ಹಿಂದೆ ರಾಜ್ಯ ಮಟ್ಟದಲ್ಲಿ 2 ಹಾಗೂ ಜಿಲ್ಲಾ ಮಟ್ಟದಲ್ಲಿ 15 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿಗಳು ಬಂದಿದ್ದವು. ಸರ್ಕಾರ ನಮ್ಮೂರಿನ ಶಿಕ್ಷಕರ ಸೇವೆಯನ್ನು ಗುರುತಿಸಬೇಕು’ ಎಂದು ಕಿತ್ತೂರು ಶಾಲೆ ಮುಖ್ಯಶಿಕ್ಷಕ ಮೆಹಬೂಬ್ ಸಾಬ್ ಮುಂಡರಗಿ ಮನವಿ ಮಾಡುತ್ತಾರೆ.

Post Comments (+)