ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ| ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮಾಚರಣೆ

ನೆರೆ ಹೊರೆಯವರಿಗೆ– ಬಂಧು ಬಾಂಧವರಿಗೆ ಎಳ್ಳು ಬೆಲ್ಲ ವಿತರಿಸಿ ಶುಭಾಶಯ ಕೋರಿಕೆ
Last Updated 15 ಜನವರಿ 2020, 14:34 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ಬುಧವಾರ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ನೆರೆಹೊರೆಯವರಿಗೆ ಎಳ್ಳು– ಬೆಲ್ಲ ಹಂಚಿಕೊಂಡು ಶುಭ ಕೋರಿದರು.

ನಗರದ ಪುರಸಿದ್ದೇಶ್ವರ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳು, ಉದ್ಯಾನಗಳು, ಬಾಡ, ಕೂಡಲ, ಉತ್ಸವ ರಾಕ್‌ ಗಾರ್ಡನ್‌, ವರದಾ, ತುಂಗಭದ್ರಾ ನದಿ ತೀರ, ಹೆಗ್ಗೇರಿ ಕೆರೆ ಬಳಿ ಜನತೆ ಜಮಾಯಿಸಿ, ಕುಟುಂಬದ ಜೊತೆ ಹಬ್ಬ ಸಂಭ್ರಮಿಸಿದರು.

ದೇವಸ್ಥಾನಗಳಲ್ಲಿ ಪೂಜೆ:ಬುಧವಾರ ಬೆಳಿಗ್ಗೆಯೇ ಕುಟುಂಬ ಸಮೇತರಾಗಿ ದೇವಸ್ಥಾನ, ಪುಣ್ಯಕ್ಷೇತ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲದೇ, ರೈತರು ತಮ್ಮ ಹೊಲದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಸವಿದು ಸಂಭ್ರಮಿಸಿದರು.

ಶೇಂಗಾ, ಅವರೆಕಾಳು, ಗೆಣಸು, ಇತ್ಯಾದಿ ಪದಾರ್ಥವನ್ನು ಸೇವನೆ ಮಾಡಿದರು. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಕಾಳಿನ ಪಲ್ಲೆ, ಮುಳಗಾಯಿ ಪಲ್ಲೆ, ಹೋಳಿಗೆ, ಮಾದಲಿ, ಹುಗ್ಗಿ ಸೇರಿದಂತೆ ವಿವಿಧ ತರಹದ ಸಿಹಿ ತಿಂಡಿ ಆಹಾರಗಳನ್ನು ಸವಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ರೈತ ಕುಟುಂಬಗಳು ತಮ್ಮ ತಮ್ಮ ಹೊಲಗಳಿಗೆ ತೆರಳಿ ಆಚರಿಸಿದರು. ಇನ್ನೂ ಕೆಲವರು ಗೋಕರ್ಣ, ಮುರುಡೇಶ್ವರ ಕ್ಷೇತ್ರಗಳಿಗೆ ಪ್ರವಾಸ ಹೋಗುತ್ತಿರುವುದು ಕಂಡು ಬಂದಿತು.

‘ನಾವು ಚಿಕ್ಕವರಾಗಿದ್ದಾಗ ಮನೆಯವರೆಲ್ಲರೂ ಕೂಡಿ ಎತ್ತಿನ ಬಂಡಿಯಲ್ಲಿ ಹೊಲಕ್ಕೆ ಹೋಗುತ್ತಿದ್ದೆವು. ಅಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆದರೆ, ಈಗ ಎತ್ತಿನ ಬಂಡಿಗಳ ಸಂಖ್ಯೆ ಕಡಿಮೆಯಾಗಿದ್ದು, ಬೈಕ್‌, ಕಟಮ(ಟಂ ಟಂ), ಟ್ರಾಕ್ಟರ್‌ಗಳಲ್ಲಿ ಹೊಲಕ್ಕೆ ಅಥವಾ ಪ್ರವಾಸ ಹೋಗಿ ಊಟ ಮಾಡಿ ಬರುತ್ತವೆ ಎಂದು ರಾಜೂ ಮ್ಯಾಗೇರಿ ಹಾಗೂ ಗಣೇಶ ಬಡಿಗೇರ ತಿಳಿಸಿದರು.

ರೊಟ್ಟಿ ಖರೀದಿ ಜೋರು:ಮಾರುಕಟ್ಟೆಯಲ್ಲಿ ಹೂವು, ಹಣ್ಣು ಹಾಗೂ ತರಕಾರಿಗಳ ಖರೀದಿ ಸಾಧಾರಣವಾಗಿತ್ತು. ಅಂಗಡಿಗಳಲ್ಲಿ ತಯಾರಿಸಿ ಇಟ್ಟಿದ್ದ ಕಡಕ್ ರೊಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿತ್ತು.

‘ಮಂಗಳವಾರ ಸಂಜೆಯ ಹೊತ್ತಿಗೆ ಸುಮಾರು 2 ಸಾವಿರ ರೊಟ್ಟಿ, ಎಳ್ಳು ಹಾಗೂ ಶೇಂಗಾ ಹೋಳಿಗೆ, ಚಟ್ನಿಯನ್ನು ಮಾರಾಟ ಮಾಡಿದ್ದೇವೆ. ಅಲ್ಲದೆ,ಬುಧವಾರ ರೊಟ್ಟಿಯೊಂದಿಗೆ ಚಟ್ನಿಪುಡಿ, ಹಾಲು, ಮೊಸರು, ತುಪ್ಪ ಖರೀದಿ ಜೋರಾಗಿಯೇ ಇತ್ತು’ ಎನ್ನುತ್ತಾರೆ ವ್ಯಾಪಾರಿ ವೀರಭದ್ರೇಶ್ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT