ಬ್ಯಾಡಗಿ: ಅಂಧರ ಬಾಳಿಗೆ ಬೆಳಕಾದ ತ್ರಿವಿಧ ದಾಸೋಹಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ವಿಶ್ವದ ಎಂಟನೇ ಅದ್ಬುತ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 13ನೇ ಪುಣ್ಯಸ್ಮರಣೆ ಹಾಗೂ ಹಾನಗಲ್ ಗುರು ಕುಮಾರೇಶ್ವರರ 156ನೇ ಜಯಂತ್ಯುತ್ಸವ ನಿಮಿತ್ಯ ಗುರುವಾರ ಏರ್ಪಡಿಸಿದ್ದ ಜನಜಾಗೃತಿ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಸೇವೆ, ಸಾಹಿತ್ಯ ಹಾಗೂ ಸಂಗೀತ ಲೋಕದ ದೃವತಾರೆಯಾಗಿ ಮೆರೆದಿದ್ದ ಪುಟ್ಟರಾಜರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಪುಣ್ಯ ಪುರುಷರ ಸ್ಮರಣೆಯಿಂದ ಹೃದಯದಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ ಎಂದರು.
ಈ ಹಿಂದಿನ ಕೃಷಿಯಲ್ಲಿ ಮನುಷ್ಯನಿಗೆ ಅಗತ್ಯವಿರುವ ಔಷಧಗಳು ದೊರೆಯುತಿದ್ದವು. ಆದರೆ ಈಗ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಆಹಾರ ವಿಷವಾಗುತ್ತಿದೆ. ಮಣ್ಣು ಫಲವತ್ತತೆ ಕಳೆದುಕೊಂಡು ಬರಡಾಗುತ್ತಿದೆ. ಜನರು ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಆರೋಗ್ಯವನ್ನು ಕಾಪಾಡುವಂತೆ ಸಲಹೆ ನೀಡಿದರು.
ತಾಲ್ಲೂಕಿನ ಕೆರೆಗಳನ್ನು ನದಿ ನೀರಿನಿಂದ ತುಂಬಿಸುವ ಯೋಜನೆ ಕಾರ್ಯಗತಗೊಳ್ಳು ಹೋರಾಟ ನಡೆಸಿದ ರೈತ ಮುಖಂಡರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಕಾರ್ಯಾಧ್ಯಕ್ಷ ಕಿರಣ ಗಡಿಗೋಳ, ಹಸಿರು ಸೇನೆಯ ಗಂಗಣ್ಣ ಎಲಿ, ಮುಖಂಡರಾದ ಕೆ.ವಿ.ದೊಡ್ಡಗೌಡ್ರ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಪರಮೇಶ್ವರಯ್ಯ ಮಠದ, ರುದ್ರಪ್ಪ ಬ್ಯಾಡಗಿ, ಮಲಕಪ್ಪ ಶಿಡೇನೂರ, ಸಿದ್ದಯ್ಯ ಪಾಟೀಲ, ಚನ್ನಬಸಪ್ಪ ಬ್ಯಾಡಗಿ, ಶಿವಪ್ಪ ಶಿಡೇನೂರ, ಈರಪ್ಪ ಬ್ಯಾಡಗಿ, ಮರಡೆಪ್ಪ ಶಿಡೇನೂರ, ಪುಟ್ಟಪ್ಪ ಅರಳಿಕಟ್ಟಿ, ದ್ಯಾಮಣ್ಣ ಶಿಡೇನೂರ, ಚಂದ್ರಪ್ಪ ಶಿಡೇನೂರ ಬಸವರಾಜಯ್ಯ ಹಿರೇಮಠ ಕುಮಾರಸ್ವಾಮಿ ಮಠದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.