ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಚೀಟಿ ಮಾಡಿಸಲು ಸರದಿ: ಗಂಟೆಗಟ್ಟಲೇ ಕಾದು ನೋಂದಣಿ

ಜಿಲ್ಲಾಸ್ಪತ್ರೆ ಎದುರು ಜನರ ಪರದಾಟ
Published 18 ಜೂನ್ 2024, 14:20 IST
Last Updated 18 ಜೂನ್ 2024, 14:20 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಗೆ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ, ಒಳ ಹಾಗೂ ಹೊರ ರೋಗಿಗಳ ವಿಭಾಗಗಳ ಕೌಂಟರ್‌ಗಳಲ್ಲಿ ಚೀಟಿ ಮಾಡಿಸಲು ಪರದಾಡಿದರು. ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ನೋಂದಣಿ ಮಾಡಿಸಲು ಹರಸಾಹಸಪಟ್ಟರು.

ಜಿಲ್ಲೆಯ ಹಲವು ಗ್ರಾಮಗಳ ಜನರು, ಜ್ವರ, ಶೀತ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸುತ್ತಿರುವ ಸ್ಥಳೀಯ ವೈದ್ಯರು, ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳಿ ಕಳುಹಿಸುತ್ತಿದ್ದಾರೆ. ಜೂನ್ 16 ಹಾಗೂ 17ರಂದು ಜಿಲ್ಲಾಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳ ನೋಂದಣಿ ವಿಭಾಗಗಳಿಗೆ ರಜೆ ಇತ್ತು.

ಹೀಗಾಗಿ, ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಳಿಗ್ಗೆಯಿಂದಲೇ ಜಿಲ್ಲಾಸ್ಪತ್ರೆಗೆ ಆಗಮಿಸಿದರು. ಇದರಿಂದಾಗಿ ಒಳ ಹಾಗೂ ಹೊರ ರೋಗಿಗಳ ವಿಭಾಗಗಳ ನೋಂದಣಿ ಕೇಂದ್ರದ ಬಳಿ, ಜನರ ಸರದಿ ಸಾಲು ದೊಡ್ಡದಾಗಿತ್ತು. ವೃದ್ಧರು, ಮಕ್ಕಳು, ಅಂಗವಿಕಲರು ಹಾಗೂ ಹಲವರು ಸರದಿ ಸಾಲಿನಲ್ಲಿ ನಿಂತುಕೊಂಡು ಚೀಟಿ ಮಾಡಿಸಿದರು.

ರಕ್ತ, ಮೂತ್ರ ಪರೀಕ್ಷೆ ಮಾಡಿಸಲು ಬಂದಿದ್ದ ಜನರು ಸಹ ಅದೇ ಸರದಿ ಸಾಲಿನಲ್ಲಿ ನಿಂತು ಹಣ ಕಟ್ಟಿ ರಶೀದಿ ಪಡೆದುಕೊಂಡರು.

ಒಳ ಹಾಗೂ ಹೊರ ರೋಗಿಗಳ ನೋಂದಣಿ ಪ್ರಕ್ರಿಯೆ ಜಿಲ್ಲಾಸ್ಪತ್ರೆಯ ಒಳಭಾಗದಲ್ಲಿ ನಡೆಯುತ್ತಿತ್ತು. ಇದೀಗ, ಜಿಲ್ಲಾಸ್ಪತ್ರೆ ಆವರಣದಲ್ಲಿ ಜನೌಷಧಿ ಮಳಿಗೆ ಪಕ್ಕವೇ ಹೊಸದಾಗಿ ನೋಂದಣಿ ವಿಭಾಗಗಳನ್ನು ತೆರೆಯಲಾಗಿದೆ. ಜೊತೆಗೆ, ನಗದು ಕೌಂಟರ್ ಸಹ ಆರಂಭಿಸಲಾಗಿದೆ. ಇದೇ ಕೌಂಟರ್‌ಗಳ ಎದುರು ಸಾಮಾನ್ಯ ದಿನಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ, ಎರಡು ದಿನ ರಜೆ ಇದ್ದಿದ್ದರಿಂದ ಮಂಗಳವಾರ ಮಾತ್ರ ಜನರ ಸಂಖ್ಯೆ ಹೆಚ್ಚಿಗೆ ಇರುವುದು ಕಂಡುಬಂತು.

ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 1.45ರಿಂದ ಸಂಜೆ 4.30ರವರೆಗೆ ನೋಂದಣಿ ವಿಭಾಗ ತೆರೆಯಲಾಗಿತ್ತು. ಇದೇ ಸಮಯದಲ್ಲಿ ನೋಂದಣಿ ಮಾಡಿಸಲು ಜನರು, ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಯಿತು.
ಕೌಂಟರ್‌ನಲ್ಲಿದ್ದ ಸಿಬ್ಬಂದಿ ಸಹ ನಿಧಾನಗತಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಸಿದ್ದರಿಂದಲೂ ಸರದಿಯಲ್ಲಿ ಹೆಚ್ಚಿನ ಸಮಯ ನಿಲ್ಲುವಂತಾಯಿತು ಎಂದು ರೋಗಿಗಳು ಆರೋಪಿಸಿದರು.

‘ಕಿವಿ ನೋವು ಆಗಿದೆ. ಸ್ಥಳೀಯ ವೈದ್ಯರು ಹೇಳಿದ್ದರಿಂದ, ಆರೋಗ್ಯ ತಪಾಸಣೆಗೆಂದು ಜಿಲ್ಲಾಸ್ಪತ್ರೆಗೆ ಬೆಳಿಗ್ಗೆ 8ಕ್ಕೆ ಬಂದು ಚೀಟಿ ಮಾಡಿಸಲು ಸರದಿಯಲ್ಲಿ ನಿಂತಿದ್ದೆನೆ. ಮಧ್ಯಾಹ್ನ 12.30 ಗಂಟೆಗೆ ನನ್ನ ಸರದಿ ಬಂದಿದೆ. ಈಗ, ಚೀಟಿ ಪಡೆದು ವೈದ್ಯರಿಗೆ ತೋರಿಸಲು ಆಸ್ಪತ್ರೆ ಒಳಗೆ ಹೋಗುತ್ತಿದ್ದೇನೆ’ ಎಂದು ಇಂಗಳಗುಂದಿಯ ಬೂದೆಪ್ಪ ಅಳಲು ತೋಡಿಕೊಂಡರು.

‘ಒಳ ಹಾಗೂ ಹೊರ ರೋಗಿಗಳ ನೋಂದಣಿ ವಿಭಾಗದ ಕೌಂಟರ್‌ಗಳಿಗೆ ತಲಾ ಒಬ್ಬೊಬ್ಬ ಸಿಬ್ಬಂದಿ ಇದ್ದಾರೆ. ಆಧಾರ್ ಪರಿಶೀಲನೆ ಮಾಡುವ, ₹ 10 ಶುಲ್ಕ ಪಡೆಯುವ ಹಾಗೂ ಚೀಟಿ ಮುದ್ರಿಸುವ ಕೆಲಸವನ್ನು ಒಬ್ಬರೇ ಮಾಡುತ್ತಿದ್ದಾರೆ. ಇದರಿಂದಲೇ ನಾನು ನಾಲ್ಕೂವರೆ ಗಂಟೆ ಸರದಿಯಲ್ಲಿ ನಿಂತು ಕಾಯಬೇಕಾಯಿತು’ ಎಂದು ಹೇಳಿದರು.

ವೀರಾಪುರದ ಲಕ್ಷ್ಮಮ್ಮ, ‘ಮೂರು ದಿನಗಳಿಂದ ಜ್ವರವಿದೆ. ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಗೆ ಬಂದಿದ್ದೇನೆ. ಆದರೆ, ಇಲ್ಲಿ ಹೆಚ್ಚು ಜನರಿದ್ದಾರೆ. ಜ್ವರ ಇದ್ದರೂ ಚೀಟಿ ಮಾಡಿಸಲು ಸರದಿಯಲ್ಲಿ ನಿಂತಿದ್ದೇನೆ. ನಮ್ಮಂಥವರಿಗಾದರೂ ಪ್ರತ್ಯೇಕ ಕೌಂಟರ್ ಮಾಡಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಹೇಳಿದರು.

ಆಲದಕಟ್ಟಿಯ ಸೌಂದರ್ಯ, ‘ನನ್ನ ತಂದೆಗೆ ಹುಷಾರಿಲ್ಲ. ವೈದ್ಯರಿಗೆ ತೋರಿಸಲು ಕರೆದುಕೊಂಡು ಬಂದಿದ್ದೇನೆ. ಇಲ್ಲಿ ಚೀಟಿ ಮಾಡುವ ಕೌಂಟರ್‌ಗಳು ಕಡಿಮೆ ಇದ್ದು, ಜನ ಜಾಸ್ತಿ ಇದ್ದಾರೆ. ಎರಡು ದಿನ ರಜೆ ಇರುವುದು ಗೊತ್ತಿದ್ದರಿಂದ, ಆಸ್ಪತ್ರೆಯವರು ನೋಂದಣಿಗೆ ಮತ್ತಷ್ಟು ಕೌಂಟರ್ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ಹೀಗೆ, ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇರುತ್ತಿರಲಿಲ್ಲ’ ಎಂದು ತಿಳಿಸಿದರು.

ಆರೋಗ್ಯ ಸಮಸ್ಯೆ ಹೆಚ್ಚಳ: ‘ಜಿಲ್ಲೆಯ ಹಲವರು ಜ್ವರ, ಶೀತ, ಕೆಮ್ಮು, ಮೈ–ಕೈ ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಜೊತೆಯಲ್ಲಿಯೇ, ಡೆಂಗಿ, ಚಿಕ್ಯುನ್‌ ಗುನ್ಯಾ ಸೇರಿದಂತೆ ಹಲವು ರೋಗಗಳ ಆತಂಕವೂ ಇದೆ. ಹೀಗಾಗಿ, ಸಣ್ಣ ಲಕ್ಷಣವಿದ್ದರೂ ಜನರು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ’ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು.

‘ವೈದ್ಯರು ಹಾಗೂ ಸಿಬ್ಬಂದಿ ಕೊರತೆಯೂ ಇದೆ. ಇರುವ ಸಿಬ್ಬಂದಿ, ಕೌಂಟರ್‌ನಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ. ಜೊತೆಗೆ, ಕೌಂಟರ್‌ ಬಳಿಯೇ ಹೆಚ್ಚುವರಿ ಸಿಬ್ಬಂದಿ ಜನರ ಆಧಾರ್ ಪರಿಶೀಲಿಸಿ ನೋಂದಣಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ರಜೆ ಇದ್ದಿದ್ದರಿಂದ ಹೆಚ್ಚು ಜನ ಬಂದಿದ್ದಾರೆ. ನಾಳೆಯಿಂದ ಜನರ ಸಂಖ್ಯೆ ಕಡಿಮೆ ಇರುತ್ತದೆ. ನೋಂದಣಿಗೆ ಕಾಯಬೇಕಾದ ಸ್ಥಿತಿ ಬರುವುದಿಲ್ಲ’ ಎಂದು ತಿಳಿಸಿದರು.

ಜನರ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ. ಆರ್. ಹಾವನೂರು ಲಭ್ಯರಾಗಲಿಲ್ಲ.

ಜಿಲ್ಲಾಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳ ನೋಂದಣಿ ವಿಭಾಗದ ಕೌಂಟರ್ ಎದುರು ಸರದಿಯಲ್ಲಿ ಕಿಕ್ಕಿರಿದು ನಿಂತಿದ್ದ ಜನ

ಜಿಲ್ಲಾಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳ ನೋಂದಣಿ ವಿಭಾಗದ ಕೌಂಟರ್ ಎದುರು ಸರದಿಯಲ್ಲಿ ಕಿಕ್ಕಿರಿದು ನಿಂತಿದ್ದ ಜನ

ಮಹಿಳಾ–ಮಕ್ಕಳ ಆಸ್ಪತ್ರೆಯಲ್ಲೂ ಹರಸಾಹಸ

ಜಿಲ್ಲಾಸ್ಪತ್ರೆಯ ಬಳಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಕರೆತಂದಿದ್ದ ಪೋಷಕರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಚೀಟಿ ಮಾಡಿಸಿದರು. ಜಿಲ್ಲೆಯ ಹಲವು ತಾಲ್ಲೂಕುಗಳ ಜನರು ಆಸ್ಪತ್ರೆಯಲ್ಲಿದ್ದರು. ನವಜಾತ ಮಕ್ಕಳನ್ನು ತಾಯಂದಿರು ಎತ್ತಿಕೊಂಡು ಆವರಣದಲ್ಲಿ ಕುಳಿತುಕೊಂಡಿದ್ದರು. ಅವರ ಸಂಬಂಧಿಕರು ನೋಂದಣಿ ಮಾಡಿಸಲು ಸರದಿಯಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು. ಸರದಿಯಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು. ‘ಮಗುವಿಗೆ ಜ್ವರ ಬರುತ್ತಿದೆ. ಹೀಗಾಗಿ ತೋರಿಸಲು ಆಸ್ಪತ್ರೆಗೆ ಬಂದಿದ್ದೇನೆ. ಸರದಿ ದೊಡ್ಡದಿದ್ದು ತಾಯಿ ಸರದಿಯಲ್ಲಿ ನಿಂತಿದ್ದಾರೆ. ನಾನು ಇಲ್ಲೇ ಕಾಯುತ್ತ ಕುಳಿತಿದ್ದೇನೆ’ ಎಂದು ಸಂಗೂರಿನ ಮಹಿಳೆ ರೇಣುಕಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT