ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಕಬ್ಬಾರ ರೈತರಿಗೆ ಅನುಕೂಲ ತಂದ ಚೆಕ್ ಡ್ಯಾಂ

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣ
Published 14 ಆಗಸ್ಟ್ 2024, 4:50 IST
Last Updated 14 ಆಗಸ್ಟ್ 2024, 4:50 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ತಾಲ್ಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ₹10 ಲಕ್ಷ ವೆಚ್ಚದಲ್ಲಿ 17 ಲಕ್ಷ ಲೀಟರ್ ಸಾಮರ್ಥ್ಯದ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ಸಹಸ್ರಾರು ಪ್ರದೇಶದ ಜಮೀನಿಗೆ ನೀರೊದಗಿಸುವ ಮಹತ್ತರ ಯೋಜನೆ ಸಾಕಾರಗೊಂಡಿದೆ.

ಜೊತೆಗೆ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಖಡುವ ಮೂಲಕ ಅವರ ಬದುಕಿನ ಭರವಸೆಯಾಗಿ ಯೋಜನೆ ಅನುಷ್ಠಾನಗೊಂಡಿದೆ.

ನರೇಗಾ ಯೋಜನೆಯಡಿ ಅತಿ ಕಡಿಮೆ ವೆಚ್ಚದಲ್ಲಿ 17 ಲಕ್ಷ ಲೀಟರ್ ಸಾಮರ್ಥ್ಯದ ಈ ಚೆಕ್ ಡ್ಯಾಂ ಈ ಭಾಗದ ನೂರಾರು ನಿಷ್ಕ್ರೀಯಗೊಂಡ ಕೊಳವೆ ಬಾವಿಗಳಿಗೆ ಜೀವಕಳೆ ತುಂಬಿದೆ. ಕಾಡು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಕ್ಯಾಚ್ ದಿ ರೇನ್ ಎಂಬ ಘೋಷಣೆಯೊಂದಿಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಸದಸ್ಯರು ಪಿಡಿಒ ಹಾಗೂ ಗ್ರಾಮಸ್ಥರ ಸಹಕಾರದಿಂದ ಕ್ರಿಯಾಯೋಜನೆ ತಯಾರಿಸಿ 2024-25ನೇ ಸಾಲಿನ ನರೇಗಾ ಯೋಜನೆಯಡಿ ನಿರ್ಮಿಸಲಾಗಿದೆ. ಅದಕ್ಕಾಗಿ 1445 ಮಾನವ ದಿನಗಳನ್ನು ಸೃಜನೆ ಮಾಡಿ ₹5.5 ಲಕ್ಷ ಕೂಲಿ ಪಾವತಿಸಲಾಗಿದೆ. ಚೆಕ್ ಡ್ಯಾಂ 14 ಮೀಟರ್ ಉದ್ದವಿದ್ದು, ಡ್ಯಾಂ ನಿರ್ಮಾಣಕ್ಕೆ ಕಚ್ಚಾ ಸಾಮಗ್ರಿಗಳಿಗೆ ₹4.64 ಲಕ್ಷ ವೆಚ್ಚ ಭರಿಸಲಾಗಿದೆ. ಇದು ಬೇಸಿಗೆಯಲ್ಲೂ ರೈತರ ಜಲ ಮೂಲವಾಗಲಿದೆ ಎಂಬುದು ಅನ್ನದಾತರ ಅಭಿಪ್ರಾಯ.

‘ಗ್ರಾಮದ ಹಳ್ಳದ ನೀರು ಮಳೆಗಾಲದಲ್ಲಿ ಹರಿದು ಪೋಲಾಗುತ್ತಿತ್ತು. ಗ್ರಾಮ ಪಂಚಾಯ್ತಿಯಿಂದ ನರೇಗಾ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದರಿಂದ ಸದಾ ಕಾಲ ನೀರು ದೊರೆತು ರೈತರು ಉತ್ತಮ ಫಸಲು ಪಡೆಯಲಬಹುದಾಗಿದೆ’ ಎಂದು ಚಿಕ್ಕಕಬ್ಬಾರ ಗ್ರಾಮದ ರೈತ ಮೌಲಾಸಾಬ ದೊಡ್ಡಮನಿ ಹೇಳಿದರು.

ರೈತರು ಆರ್ಥಿಕ ಸದೃಡತೆಗೆ ನರೇಗಾ ಯೋಜನೆಯ ಇಂತಹ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಬಹಳಷ್ಟು ಉಪಯುಕ್ತವಾಗಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಇಒ ಲಕ್ಷ್ಮೀಕಾಂತ ಬೊಮ್ಮಣ್ನನವರ.

ಜಲಸಂರಕ್ಷಣೆ ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದ್ದು, ನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ, ಕೃಷಿ ಹೊಂಡ, ನೀರು ಕಾಲುವೆ ರೈತರಿಗೆ ಸಾಕಷ್ಟು ಆರ್ಥಿಕ ಚೈತನ್ಯ ಒದಗಿಸಲಿವೆ
-ಅಕ್ಷಯ ಶ್ರೀಧರ, ಜಿ.ಪಂ. ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT