ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹಕ್ಕೆ ವಿಷದ ಕಲಾಯಿ, ಧ್ವನಿಪೆಟ್ಟಿಗೆಗೂ ಹಾನಿ! 

ವಿಷಾನಿಲಕ್ಕೆ ಮೈಬಣ್ಣವೂ ಬದಲು * ಆರೋಗ್ಯ ಹದಗೆಟ್ಟರೂ ಜಾಗ ಬಿಡಲೊಪ್ಪದ ಜನ
Last Updated 19 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹಾವೇರಿ: ‘ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ (ಗಿಲೀಟು) ಮಾಡಿಸಿದ್ರೆ ಹೆಂಗೆ ಆಗ್ತದೋ, ವಿಷಾನಿಲ ಕುಡಿದು ನಮ್ಮ ದೇಹವೂ ಹಂಗೇ ಆಗಿದೆ. ಒಳಗಿನ ಎಲ್ಲ ಅಂಗಾಂಗಗಳ ಮೇಲೂ ಹೊಗೆಯ ಕಲಾಯಿ ಬಿದ್ದು ತುಂಬ ಕಾಲವೇ ಆಗಿದೆ. ನಮ್ಮ ಜಾಗಕ್ಕಾಗಿ ಮೂರ್ನಾಲ್ಕು ದಶಕಗಳಿಂದ ವಿಷಾನಿಲಕ್ಕೂ ಸಡ್ಡು ಹೊಡೆದು ಬದುಕುತ್ತಿರುವ ನಾವು, ಈಗ ಆ ವಾಸನೆಗೇ ಹೊಂದಿಕೊಂಡುಬಿಟ್ಟಿದ್ದೇವೆ...’

ರಾಣೆಬೆನ್ನೂರು ತಾಲ್ಲೂಕಿನಹಳೆನಲವಾಗಲಗ್ರಾಮಸ್ಥರ ಅಸಹಾಯಕತೆಯ ಹಾಗೂ ನೋವಿನ ಮಾತುಗಳಿವು. ‘ಗ್ರಾಸಿಂ’ ಕಾರ್ಖಾನೆ ಹೊರ ಸೂಸುತ್ತಿರುವ ಹೊಗೆಯಿಂದ ಇವರ ಆರೋಗ್ಯ ಪೂರ್ತಿ ಹದಗೆಟ್ಟಿದ್ದು, ಬಹುತೇಕ ಮಂದಿ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಮೈ ಬಣ್ಣವೂ ಕಡುಕಪ್ಪು ಬಣ್ಣಕ್ಕೆ ತಿರುಗಿದೆ. ಆ ಗ್ರಾಮಕ್ಕೆ ತೆರಳಿದ್ದ ‘ಪ್ರಜಾವಾಣಿ’ ಪ್ರತಿನಿಧಿಯ ಬಳಿ ಗ್ರಾಮಸ್ಥರು ಸಮಸ್ಯೆಗಳನ್ನು ಎಳೆಎಳೆಯಾಗಿ ಹಂಚಿಕೊಂಡರು.

‘ನಾವು ಚಿಕ್ಕವರಿದ್ದಾಗ ಅಥವಾ ಹುಟ್ಟುವ ಮೊದಲೇ ಗ್ರಾಮದಲ್ಲಿ ಎಲ್ಲ ಜಮೀನುಗಳಮಾರಾಟ ಕುರಿತು ಮಾತುಕತೆ ನಡೆದಿತ್ತಂತೆ. ಆ ಕಾಲದಲ್ಲಿ ಗ್ರಾಸಿಂ ಕಂಪನಿ ಜತೆ ನಮ್ಮ ಪೂರ್ವಜರುಏನೇನು ಒಪ್ಪಂದ ಮಾಡಿಕೊಂಡಿದ್ರೋ ಗೊತ್ತಿಲ್ಲ. ಅವರಿಂದಾಗಿ ಈಗ ನಾವು ನರಕ ಅನುಭವಿಸುವಂತಾಗಿದೆ’ ಎನ್ನುತ್ತ ದುಃಖತಪ್ತರಾದರು ಗ್ರಾಮಸ್ಥರು.

‘ಬಾಯಿದ್ದವರು ಬಾಚ್ಕೊಂಡ್ರು. ದುಡ್ಡಿದ್ದವರು ದೋಚ್ಕೊಂಡ್ರು ಎಂಬ ರೀತಿಯಲ್ಲಿ ಆಗಿದೆ ಈಗಿನ ಪಾಡು.ನಾವು ಮಬ್ಬು ಜನ. ನಮ್ಮೂರ ಅಣ್ಣಂದಿರು ಮಾತಾಡ್ತಾರೆ ಅಂತ ಮುಂದೆ ಬಿಟ್ಟೆವು. ಅವರೇ ಕಂಪನಿಯವರ ಜೊತೆ ಸೇರಿ ಬರೋಬ್ಬರಿ ಹಣ ಮಾಡ್ಕೊಂಡ್ರು.ಕಾರ್ಖಾನೆ ಹಂತ ಹಂತವಾಗಿ ಗ್ರಾಮವನ್ನು ಆವರಿಸಿತ್ತಲೇ ಬಂದಿದೆ. ಈಗ ಹೆಣ ಹೂಳೋಕೆ ಸ್ಮಶಾನವೂ ಇಲ್ಲದಂತಾಗಿದೆ’ ಎಂದೂ ಬೇಸರ ವ್ಯಕ್ತಪಡಿಸಿದರು.

‘ಮೊದಲೆಲ್ಲ ಫಿಲ್ಟರ್ ಕೂಡ ಮಾಡದೆ ಹೊಗೆ ಹೊರಗೆ ಬಿಡುತ್ತಿದ್ದರು. ಆರಂಭದಲ್ಲಿ ಆ ವಾಸನೆ ಬಂದರೆ ನಾವೂ ಮೂಗು, ಬಾಯಿ ಮುಚ್ಚಿಕೊಂಡು ಓಡಾಡುತ್ತಿದ್ದೆವು. ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಕಾರ್ಖಾನೆಯವರು ಚಿಮಣಿ ಕೊಳವೆಗಳನ್ನು ಎತ್ತರಿಸಿದರು. ಜತೆಗೆ ಫಿಲ್ಟರ್ ಮಾಡಿ ಹೊಗೆ ಬಿಡಲಾರಂಭಿಸಿದರು. ಆದರೂ ದುರ್ನಾತ ಕಡಿಮೆ ಆಗಿಲ್ಲ. ಕಾರ್ಖಾನೆಯ ನೀರೂ ಕೆರೆ ಸೇರುತ್ತಿದ್ದು, ಪೂರ್ತಿ ‘ಕೆಮಿಕಲ್ ಗ್ರಾಮ’ವಾಗಿ ಬದಲಾಗಿದೆ. ವಾಸನೆ ಕುಡಿದೂ ಕುಡಿದು ನಮ್ಮ ಮೂಗೂ ಸ್ವಾಧೀನ ಕೆಳೆದುಕೊಂಡಿದೆ’ ಎನ್ನುತ್ತಾರೆ ಕೆಂಚಪ್ಪ ಓಲೇಕಾರ.

ಮಕ್ಕಳು ಸದಾ ಕೆಮ್ಮಿನಿಂದ ನರಳುತ್ತಿರುತ್ತವೆ. ಯಾರೋ ನರ್ಸ್‌ ಬಂದು ಪ್ರತಿ ಗುರುವಾರ ಗುಳಿಗೆ ಕೊಟ್ಟು ಹೋಗುತ್ತಾರೆ. ಗ್ರಾಮದಲ್ಲಿ ನಮ್ಮ ಜಾಗ ಎಷ್ಟಿದಿಯೋ ಅಷ್ಟು ಜಾಗವನ್ನು ಹೊಸ ಬಡಾವಣೆಯಲ್ಲಿ ಕೊಟ್ಟರೆ ನಾವೂ ಸ್ಥಳಾಂತರವಾಗುವ ಯೋಚನೆ ಮಾಡಲು ಸಿದ್ಧರಿದ್ದೇವೆ. ಆದರೆ, ಕಂಪನಿ ಪಟ್ಟು ಬಿಡುತ್ತಿಲ್ಲ.ಅದೇನು ಪಾಪ ಮಾಡಿ ಈ ಊರಲ್ಲಿ ಹುಟ್ಟಿದೆವೋ ಗೊತ್ತಿಲ್ಲ’ ಎನ್ನುವಾಗ ಕೆಂಚಪ್ಪ ಅವರ ಕಣ್ಣಾಲಿಗಳು ತುಂಬಿದ್ದವು.

ಹೊಸ ಬಡಾವಣೆಯೂ ವಿಲವಿಲ: ಇನ್ನು ಹೊಸ ನೆಲವಾಗಲ ಗ್ರಾಮದಲ್ಲಿ ಈಗಾಗಲೇ ಸ್ವಂತ ಖರ್ಚಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ 52 ಅರ್ಹ ಫಲಾನುಭವಿಗಳಿಗೆ, ಒಪ್ಪಂದದ ಅನುಸಾರ ಇನ್ನೂ ಹಣ ಬಂದಿಲ್ಲ. ‘ಕಂಪನಿಯ ನಿಲುವು, ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯ್ತಿಯ ದುರಾಡಳಿತದಿಂದ ಗ್ರಾಮಸ್ಥರುಸಂಕಷ್ಟಕ್ಕೀಡಾಗಿದ್ದಾರೆ.ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಪಾರ್ಕ್, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನೂ ಒದಗಿಸಿಲ್ಲ’ ಎನ್ನುತ್ತಾರೆ ಹೊಸ ನಲವಾಗಲ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಶಂಭುಲಿಂಗಪ್ಪ ಚನ್ನಗೌಡ್ರ.

‘ಕಾರ್ಖಾನೆಯವರು ತಮ್ಮ ವ್ಯವಹಾರದ ಲಾಭಕ್ಕಾಗಿ ಇತ್ತೀಚೆಗೆ ₹ 400 ಕೋಟಿ ಖರ್ಚು ಮಾಡಿ ಗ್ರಾಮದಲ್ಲೇ ಕೆರೆ ಕಟ್ಟಿಕೊಳ್ಳುತ್ತಿದ್ದಾರೆ. ₹ 30 ಕೋಟಿಯಿಂದ ₹ 40 ಕೋಟಿಯಲ್ಲಿ ಬಗೆಹರಿಯುವ ಗ್ರಾಮದ ಸಮಸ್ಯೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.ಪಂಚಾಯ್ತಿಯವರೂ ಕಾರ್ಖಾನೆಯವರ ಜತೆ ಸೇರಿಕೊಂಡಿದ್ದು, ಅವರು ನಮ್ಮ ಮನೆಗೆ ಸಂಬಂಧಿಸಿದ ದಾಖಲೆಗಳನ್ನೂ ಕೊಡುತ್ತಿಲ್ಲ’ ಎಂದು ದೂರುತ್ತಾರೆ ಅವರು.

‘ನೀವು ಮನೆ ಕಟ್ಟಿಕೊಳ್ಳಿ. ಆಮೇಲೆ ಹಣ ಕೊಡುತ್ತೇವೆ ಎಂದು ಕಾರ್ಖಾನೆಯವರು ಹೇಳಿದ್ದರು. 2004ರಲ್ಲಿ ಧೈರ್ಯ ಮಾಡಿ ₹ 25 ಲಕ್ಷ ವೆಚ್ಚದಲ್ಲಿ ನಾನು ಮೊದಲು ಮನೆ ಕಟ್ಟಿದೆ. ಇಷ್ಟು ವರ್ಷವಾದರೂ ಆ ದುಡ್ಡು ಬಂದಿಲ್ಲ. ನಮ್ಮ ಪಾಡು ಒಂದು ರೀತಿ ಬಾಂಗ್ಲಾ ವಲಸಿಗರಂತೆ ಆಗಿದೆ’ ಎಂದು ದುಃಖ ತೋಡಿಕೊಂಡರು.

‘ಮದುವೆನೂ ಆಗಲ್ರೀ’

‘ದುರ್ನಾತದ ಕಾರಣಕ್ಕೆ ಗ್ರಾಮದ ಯುವಕ–ಯುವತಿಯರನ್ನು ಯಾರೂ ಮದುವೆ ಆಗುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚೆಂದರೆಈ ಊರಿಂದ 10 ಮಂದಿಯ ಮದುವೆ ಆಗಿರಬಹುದು. ಗ್ರಾಮದಲ್ಲಿ ಅಪರೂಪಕ್ಕೆ ಒಂದು ಮದುವೆ ನಡೆದರೂ, ಬಂದವರು ಮೂಗು ಮುಚ್ಚಿಕೊಂಡೇ ಅಕ್ಷತೆ ಹಾಕಿ ಓಡುತ್ತಾರೆ’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT