ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಮಳೆ ಆರ್ಭಟ; ಶಾಲಾ ಕಾಲೇಜುಗಳಿಗೆ ರಜೆ

ಐದು ದಿನಗಳಲ್ಲಿ 300 ಮಿ.ಮೀ ಮಳೆ * ನಳನಳಿಸುತ್ತಿವೆ ಕೆರೆ–ಕಟ್ಟೆಗಳು * 50ಕ್ಕೂ ಹೆಚ್ಚು ಮನೆ ಕುಸಿತ
Last Updated 6 ಆಗಸ್ಟ್ 2019, 7:07 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ನಾಲ್ಕೈದು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಒಡಲಲ್ಲಿ ನೀರು ಸಂಗ್ರಹವಾಗಿ ಕೆರೆ–ಕಟ್ಟೆಗಳು ನಳನಳಿಸುತ್ತಿವೆ. ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ 300 ಮಿ.ಮೀ ಮಳೆಯಾಗಿದ್ದು, 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ. ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.ಇದೇ ಪರಿಸ್ಥಿತಿ ಮುಂದುವರಿದರೆ ಬುಧವಾರವೂ ರಜೆ ಘೋಷಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾನುವಾರ ಒಂದೇ ದಿನ 142 ಮಿ.ಮೀ ಮಳೆ ಸುರಿದಿದ್ದು, ನೀರು ಹರಿದು ಚರಂಡಿಗಳು ಸ್ವಚ್ಛಗೊಂಡಿವೆ. ದೇವಗಿರಿ ಗ್ರಾಮದಲ್ಲಿ ಹೊಲಗಳಿಗೆ ನೀರು ನುಗ್ಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೆಲವಡೆ ರಸ್ತೆಗಳು ಜಲಾವೃತವಾಗಿದ್ದರೆ, ಹಿರೇಕೆರೂರಿನಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಶಿಗ್ಗಾವಿಯಲ್ಲಿ 26 ಹಾಗೂ ಸವಣೂರಿನಲ್ಲಿ 15 ಮನೆಗಳ ಗೋಡೆಗಳು ಕುಸಿದಿವೆ.

ಗುತ್ತಲ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನೀರು ತುಂಬಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ನಾಗೇಂದ್ರನ ಮಟ್ಟಿಯಲ್ಲಿ ಗಟಾರ ತುಂಬಿ ಕೊಳಚೆ ನೀರು ರಸ್ತೆಗೆ ನುಗ್ಗಿದೆ. ಭಾನುವಾರ ಹಾನಗಲ್‌ (43.6 ಮಿ.ಮೀ), ಶಿಗ್ಗಾವಿ (29.8 ಮಿ.ಮೀ), ಹಾವೇರಿ (19.8 ಮಿ.ಮೀ) ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.

ಶಿಗ್ಗಾವಿ: ತಾಲ್ಲೂಕಿನಲ್ಲಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.ಚಂದಾಪುರ, ಕೋಣನಕೆರಿ, ಅಂದಲಗಿ ಭಾಗದಲ್ಲಿನ ಹಲಗದ್ದೆಗಳಲ್ಲಿ ನೀರು ನುಗ್ಗಿದೆ.ಹೊಸ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗಿನ ಜೋಡು ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಬಂಕಾಪುರ ಪಟ್ಟಣದಲ್ಲಿ ನೀರು ನುಗ್ಗಿಮನೆ ಹಿತ್ತಲಿನಲ್ಲಿ ಸಂಗ್ರಹಿಸಿಟ್ಟಿದ್ದ ಜಾನುವಾರುಗಳ ಹೊಟ್ಟು, ಮೇವು ಹಾನಿಯಾಗಿದೆ.

ಮುಗಳಿಕಟ್ಟಿ ಗ್ರಾಮದ ದಸ್ತಗಿರಿಸಾಬ ಗೌಂಡಿ, ದುಂಢಸಿ ಗ್ರಾಮದ ಚರಂತಯ್ಯ ಸಂತಿಮಠ, ಮೂಕಬಸರಿಕಟ್ಟಿ ಗ್ರಾಮದ ಚಂದ್ರಪ್ಪ ಹಿತ್ತಲಮನಿ, ಕಬನೂರ ಗ್ರಾಮದ ಅನ್ನಪೂರ್ಣ ಗೊಟಗೋಡಿಮಠ ಅವರ ಮನೆಗಳು ಬಿದ್ದಿವೆ. ಅಷ್ಟೇ ಅಲ್ಲದೆ ಹೊಸೂರ, ಯತ್ನಹಳ್ಳಿ, ಕುನ್ನೂರ, ಕುಂದೂರ, ಹುಲಗೂರ ಗ್ರಾಮಗಳಲ್ಲೂ ಮನೆಗಳ ಗೋಡೆಗಳು ಕುಸಿದಿವೆ. ಚಂದಾಪುರ ರೈತ ಶಿವಾನಂದ ತಳವಾರ ಅವರ ಗದ್ದೆಗೆ ನುಗ್ಗಿದ ಮಳೆ ನೀರಿನಿಂದಾಗಿ, ಒಂದು ಎಕರೆಗಿಂತ ಹೆಚ್ಚಿನ ಬೆಳೆ ಹಾನಿಯಾಗಿದೆ.

‘ಪ್ರತಿ ಗ್ರಾಮ ಪಂಚಾಯ್ತಿಗಳ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ನಮ್ಮ ಕಚೇರಿ ಸಿಬ್ಬಂದಿಯಿಂದ ಮಳೆ ವಿವರ ಸಂಗ್ರಹಿಸುತ್ತಿದ್ದೇನೆ. ಮನೆ, ಬೆಳೆಹಾನಿ ಕುರಿತು ಇನ್ನಷ್ಟು ಪರಿಶೀಲಿಸಿ ಪ್ರಕೃತಿ ವಿಕೋಪ ಯೋಜನೆಯಡಿ ತಕ್ಷಣ ಪರಿಹಾರ ನೀಡುವ ಕಾರ್ಯ ಹಮ್ಮಿಕೊಳ್ಳಲಾಗುವುದು’ ಎಂದುತಹಶೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದ್ದಾರೆ.

ಸವಣೂರು: ತಾಲ್ಲೂಕಿನ ಹುರಳಿಕುಪ್ಪಿ, ಮಂತ್ರವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 15 ಮನೆಗಳ ಛಾವಣಿ, ಗೋಡೆ ಕುಸಿದು ಅಪಾರ ಹಾನಿ ಉಂಟಾಗಿದೆ. ಯಾವುದೆ ರೀತಿಯ ಜೀವ ಹಾನಿ ಸಂಭವಿಸಿಲ್ಲ.

ಹುರಳಿಕುಪ್ಪಿ ಗ್ರಾಮದಲ್ಲಿ ಸಿದ್ದನಗೌಡ ಕನ್ನಗೌಡ್ರ, ಎಸ್.ಆರ್.ಕಟಗಿ, ಮಲ್ಲವ್ವ ಸಂದ್ಲಿ, ಭೀರವ್ವ ಸಂದ್ಲಿ, ಎಸ್.ಎಮ್.ತಿಪ್ಪಕ್ಕನವರ, ನಿಂಗಪ್ಪ ಕಲಾದಗಿ, ತಿಪ್ಪಣ್ಣ ಸಂದ್ಲಿ, ಕನ್ನವ್ವ ಕರ್ಜಗಿ, ನಿಂಗಪ್ಪ ಕೂಡಲ ಹಾಗೂ ಮಂತ್ರವಾಡಿ ಗ್ರಾಮದ ನಿಂಗಪ್ಪ ಭೀಮಪ್ಪ ಕಳಲಕೊಂಡ, ಶಿವಪ್ಪ ಕಳಲಕೊಂಡ, ರೇಣವ್ವ ಕಳಲಕೊಂಡ, ಶಿದ್ದಪ್ಪ ಹುಡೇದ, ನಿಂಗವ್ವ ಶಿಗ್ಗಾಂವಿ ಕುಟುಂಬಸ್ಥರ ಮನೆಗಳು ಕುಸಿದಿವೆ.

ಹಾನಗಲ್: ಮುಂಗಾರ ಆರಂಭದಲ್ಲಿ ಮಳೆ ಕೊರತೆ ಅನುಭವಿಸಿದ್ದ ತಾಲ್ಲೂಕಿನಲ್ಲಿ ಈಗ ಅಪ್ಪಟ ಮಲೆನಾಡ ಸೊಬಗು.ವರದಾ, ಧರ್ಮಾ ನದಿಗಳ ಒಡಲು ತುಂಬಿಕೊಳ್ಳತೊಡಗಿದೆ. ಕೆರೆ–ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿರುವುದು ಜನರ ಮಂದಹಾಸಕ್ಕೆ ಕಾರಣವಾಗಿದೆ.

ಕಾಮನಹಳ್ಳಿ, ಬ್ಯಾಗವಾದಿ, ಬಿಂಗಾಪೂರ, ಅರಳೇಶ್ವರ, ಹಿರೂರ ಗ್ರಾಮಗಳಲ್ಲಿ ತಲಾ ಒಂದು ಮನೆ ಭಾಗಶಃ ಹಾನಿಗೊಂಡಿವೆ. ‘ಮಳೆ ಆರ್ಭಟ ಮುಂದುವರಿದಿದ್ದರೂ, ವಾಡಿಕೆ ಮಳೆಯಲ್ಲಿ ಈಗಲೂ 250 ಮಿ.ಮೀ ಮಳೆ ಕೊರತೆ ಇದೆ. ತಾಲ್ಲೂಕಿನಲ್ಲಿ ಬಿತ್ತನೆಗೊಂಡ ಬೆಳೆಗಳು ಉತ್ತಮ ಸ್ಥಿತಿಯಲ್ಲಿವೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಕಡ್ಲೇರ.

‘ತಾಲ್ಲೂಕಿನ ಅರ್ಧದಷ್ಟು ಕೃಷಿಭೂಮಿಯ ನೀರಾವರಿಗೆ ಆಸರೆಯಾಗಿರುವ ಮಳಗಿ ಸಮೀಪದ ಧರ್ಮಾ ಜಲಾಶಯದಲ್ಲಿ 23 ಅಡಿಯಷ್ಟು ನೀರು ಸಂಗ್ರಹಗೊಂಡಿದೆ. ಜಲಾಶಯದ ಗರಿಷ್ಠ ಮಟ್ಟ 29 ಅಡಿ ಇದ್ದು, ವಾರದ ಒಳಗಾಗಿ ಜಲಾಶಯ ಕೋಡಿ ಬೀಳುವ ಸಾಧ್ಯತೆ ಇದೆ’ ಎಂದು ನೀರಾವರಿ ಇಲಾಖೆ ಎಂಜನಿಯರ್‌ ಜಾವೇದ್‌ ಮುಲ್ಲಾ ಹೇಳುತ್ತಾರೆ.

ರಾಣೆಬೆನ್ನೂರು: ಹೊಲ ಗದ್ದೆಗಳಲ್ಲಿ ಮುಂಗಾರು ಬೆಳೆಗಳು ನಳನಳಿಸುತ್ತಿದ್ದು, ಮೇಲುಗೊಬ್ಬರವಾಗಿ ಯೂರಿಯಾ ನೀಡಲು ಮಳೆ ಬಿಡುತ್ತಿಲ್ಲ. ಈಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಿತ್ತಿದ ಹೊಲಗಳಲ್ಲಿ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ.

ನಾಗರಪಂಚಮಿ ಹಬ್ಬವಿದ್ದ ಕಾರಣ ಭಕ್ತರುಜಿಟಿ ಜಿಟಿ ಮಳೆಯಲ್ಲಿಯೇ ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತುಂಗಭದ್ರಾ ಹಾಗೂ ಕುಮಧ್ವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಮಳೆಯಲ್ಲೇ ಗಂಗವ್ವನ ವಿಶೇಷ ಪೂಜೆ ನಡೆಯಿತು. ನದಿಗಳಿಗೆ ಬಾಗಿನ ಕೂಡಅರ್ಪಿಸಿದರು.

‘ತಾಲ್ಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ ಅಷ್ಟೆ.ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಅಂತಹ ಪರಿಸ್ಥಿತಿ ಬಂದರೆ ಎದುರಿಸಲು ಕಂದಾಯ ಇಲಾಖೆ ಸಜ್ಜಾಗಿದೆ’ ಎಂದು ತಹಶಿಲ್ದಾರ್ ಸಿ.ಎಸ್.ಕುಲಕರ್ಣಿ ಹೇಳಿದರು.

ಬ್ಯಾಡಗಿ: ತಾಲ್ಲೂಕಿನಲ್ಲಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದು, ಎರಡು ದಿನಗಳಲ್ಲಿಬ್ಯಾಡಗಿಯಲ್ಲಿ 17 ಮಿ.ಮೀ, ಕಾಗಿನೆಲೆಯಲ್ಲಿ 20.2ಮಿ.ಮೀ ಹಾಗೂ ಹೆಡಿಗ್ಗೊಂಡದಲ್ಲಿ 18.6ಮಿ.ಮೀ ಮಳೆಯಾದ ಕುರಿತು ಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ.

‘ಮಳೆಯಿಂದ ತೇವಾಂಶ ಹೆಚ್ಚಿದೆ. ಇದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ರೈತರು ಆತಂಕಪಡುವ ಅಗತ್ಯವಿಲ್ಲ. ಪ್ರತಿ 16 ಲೀಟರ್ ನೀರಿಗೆ 20 ಎಂ.ಎಲ್ ಪ್ರೋಫಿಕೊನೆಂಜೋಲ್ ಬೆರೆಸಿ ಸಿಂಪರಣೆ ಮಾಡಬೇಕು. ಜತೆಗೆ ಪ್ರತಿ 16 ಲೀಟರ್ ನೀರಿಗೆ 20ಮಿ.ಲೀ ಕಾರಬೆಂಡೋಜಿನ್ ಬೆರೆಸಿ ಸಿಂಪಡಿಸಿದರೆ ಬೆಳೆಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಬಸವರಾಜ ಮರಗಣ್ಣನವರ ಸಲಹೆ ನೀಡಿದ್ದಾರೆ.

ಹಿರೇಕೆರೂರ: ತಾಲ್ಲೂಕಿನಲ್ಲಿ ಸೋಮವಾರ ದಿನವಿಡೀ ಸುರಿದ ಮಳೆಯ ಪರಿಣಾಮ ವಾರದ ಸಂತೆಯ ಮೇಲೂ ಬೀರಿತು. ದುರ್ಗಾದೇವಿ ಸಂತೆ ಮೈದಾನ ಕೆಸರು ಗದ್ದೆಯಂತಾಗಿದ್ದು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಸಾಕಷ್ಟು ಕಡಿಮೆಯಾಗಿತ್ತು. ಪ್ರತಿ ವಾರಕ್ಕಿಂತ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT