ಶನಿವಾರ, ಜೂನ್ 25, 2022
25 °C
ಸಿಡಿಲು ಬಡಿದು, ಗೋಡೆ ಕುಸಿದು ಐವರ ಸಾವು: ₹24 ಲಕ್ಷ ಪರಿಹಾರ ಪಾವತಿ

ಅತಿವೃಷ್ಟಿ ಹಾನಿ: ಮೇ 25ರೊಳಗೆ ವರದಿ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ ಅತಿವೃಷ್ಟಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಯುದ್ಧೋಪಾದಿಯಲ್ಲಿ ಪಾರದರ್ಶಕ ಸಮೀಕ್ಷೆ ನಡೆಸಿ ಮೇ 25ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಮೇ 26ರಂದು ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಮಾನವ ಹಾಗೂ ಜಾನುವಾರು ಜೀವಹಾನಿಗೆ 48 ಗಂಟೆಯೊಳಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್‌ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಎಂಟು ತಾಲ್ಲೂಕುಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನುಸಾರ ಪರಿಹಾರ ಪಾವತಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕು ಹಾಗೂ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದರು.

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅನುದಾನದ ಕೊರತೆಯಿಲ್ಲ. ಅಧಿಕಾರಿಗಳು ನೆರೆ ಪರಿಹಾರ ನೀಡುವಾಗ ಅಕ್ರಮ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನೊಂದವರ ಕಣ್ಣೀರು ಒರೆಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು. ರಜೆ ಹೋಗದಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು. 

ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಐದು ಮಾನವ ಜೀವಹಾನಿ ಸಂಭವಿಸಿದ್ದು, ಈಗಾಗಲೇ ₹24 ಲಕ್ಷ ಪರಿಹಾರ ಪಾವತಿಸಲಾಗಿದೆ. ಎರಡು ಎತ್ತು ಒಂದು ಎಮ್ಮೆ ಮೃತಪಟ್ಟಿದ್ದು, ತಲಾ ₹25 ಸಾವಿರದಂತೆ ₹75 ಸಾವಿರ ಪರಿಹಾರ ಪಾವತಿಸಲಾಗಿದೆ. ಜಿಲ್ಲೆಯ ವಾಡಿಕೆ ಮಳೆ 41 ಮಿ.ಮೀ ಬದಲು 197 ಮಿ.ಮೀ. ಮಳೆಯಾಗಿದೆ. ಮೇ 15ರಿಂದ ಮೇ 21ರವರೆಗೆ ವಾಡಿಕೆ ಮಳೆ 15 ಮಿ.ಮೀ. ಬದಲಾಗಿ 137 ಮಿ.ಮೀ. ಮಳೆಯಾಗಿದೆ ಎಂದರು.

ಬೆಳೆಹಾನಿ: ಜಿಲ್ಲೆಯಲ್ಲಿ 481.8 ಹೆಕ್ಟೇರ್ ಕೃಷಿ (ಹಾವೇರಿ-25 ಹೆ., ರಾಣೆಬೆನ್ನೂರು-352 ಹೆ., ಹಿರೇಕೆರೂರು-26.6 ಹೆ., ಶಿಗ್ಗಾವಿ-332 ಹೆ. ಹಾಗೂ ಹಾನಗಲ್-45 ಹೆ.) ಹಾಗೂ 278.99 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

1498 ವಿದ್ಯುತ್ ಕಂಬಗಳು, 71 ವಿದ್ಯುತ್‌ ಪರಿವರ್ತಕಗಳು ಮತ್ತು 11.48 ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ 9.05 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 44.06 ಕಿ.ಮೀ. ಜಿಲ್ಲಾ ಹೆದ್ದಾರಿ ಹಾಗೂ 11 ಸೇತುವೆಗಳಿಗೆ ಹಾನಿಯಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್‌ ವಿಭಾಗದ 289 ಕಿ.ಮೀ. ಗ್ರಾಮೀಣ ರಸ್ತೆಗಳು, 17 ಸೇತುವೆಗಳು ಹಾಗೂ ಆರು ಕೆರೆಗಳಿಗೆ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು