ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು | ಶಿಲ್ಪಕಲಾ ವೈಭವ ಸಾರುವ ದೇಗುಲ

Published 31 ಡಿಸೆಂಬರ್ 2023, 4:41 IST
Last Updated 31 ಡಿಸೆಂಬರ್ 2023, 4:41 IST
ಅಕ್ಷರ ಗಾತ್ರ

ಹಿರೇಕೆರೂರು: ತಾಲ್ಲೂಕಿನ ಅಬಲೂರು ಗ್ರಾಮದಲ್ಲಿ ಚಾಲುಕ್ಯರ ವಾಸ್ತು ಶಿಲ್ಪದಲ್ಲಿ ಜಕಣಾಚಾರಿ ನಿರ್ಮಿಸಿರುವ ಸೋಮೇಶ್ವರ (ಬ್ರಹ್ಮಶ್ವರ) ಹಾಗೂ ಬಸವೇಶ್ವರ ದೇವರ ದೇವಸ್ಥಾನಗಳು ಕಲಾ ವೈಭವದಿಂದ ಕೂಡಿವೆ.

ಶಿಲಾ ಶಾಸನಗಳು ಹಾಗೂ ಸುಂದರ ಶಿಲಾ ಮೂರ್ತಿಗಳ ಕೆತ್ತನೆಯ ಬಸವೇಶ್ವರ ದೇವರ ದೇವಸ್ಥಾನ ಈ ಗ್ರಾಮದ ವಿಶೇಷವಾಗಿದೆ.

ಬಸವೇಶ್ವರ- ಬ್ರಹ್ಮಶ್ವರ ದೇವಸ್ಥಾನಗಳನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಭವ್ಯ ಇತಿಹಾಸ, ಕಲೆ, ಐತಿಹಾಸಿಕ, ಸಾಹಿತ್ಯಕ ಹಾಗೂ ಕಲಾ ವೈಭವ ಸಾರುವ ದೇಗಲು ಹಾಗೂ ಶಿಲಾ ಶಾಸನಗಳು ಇಲ್ಲಿ ಕಂಡು ಬರುತ್ತವೆ.

ಧಾರ್ಮಿಕ ಭಾವನೆ ಮೂಡಿಸುವ ಸುಂದರ ಮೂರ್ತಿಗಳ ಕೆತ್ತನೆ ಇಲ್ಲಿನ ಆಕರ್ಷಣೆಯಾಗಿದೆ. ಅಬಲೂರು ಚರಿತ್ರೆ ಎಂಬ ಗ್ರಂಥವನ್ನು ಕ್ರಿ.ಶ.1636 ರಲ್ಲಿ ರಚಿಸಿದ ಸೋಮೇಶ್ವರ ಶಾಂತ ನಿರಂಜನ ಕವಿಗಳು ಅಬಲೂರಿನ ಮೇಲೆ ಸಾಹಿತ್ಯಕ ಬೆಳಕನ್ನು ಚೆಲ್ಲಿದ್ದಾರೆ.

ಹಿಂದೂ ಧರ್ಮದ ಜಾಗೃತಿಗಾಗಿ ಶರಣ ಚಳವಳಿ ನಡೆಸಿ ಹಿಂದೂ ಧರ್ಮದ ಸತ್ವವನ್ನು ಶಿರಸ್ ಪವಾಡದ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟ ಏಕಾಂತ ರಾಮಯ್ಯನ ನೆಲೆಬೀಡು ಅಬಲೂರು ಗ್ರಾಮವಾಗಿದೆ. ಶಿರಸ್ ಪವಾಡದ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಿದ್ದನ್ನು ಸೋಮೇಶ್ವರ ದೇವಸ್ಥಾನದಲ್ಲಿ ಇಂದಿಗೂ ಕಾಣಬಹುದಾಗಿದೆ. 

ಗ್ರಾಮದಲ್ಲಿ ಆದಿನಾರಾಯಣ, ಬಸವಣ್ಣ (ನಂದಿ), ಬ್ರಹ್ಮಲಿಂಗೇಶ್ವರ, ಸೋಮೇಶ್ವರ, ವೀರ ನಾರಾಯಣ, ಗ್ರಾಮದೇವರು, ಸೂರ್ಯನಾರಯಣ, ಶಿವ-ಪಾರ್ವತಿ, ಬಸವೇಶ್ವರ ಮೂರ್ತಿ ಮಾಹಾಸರಸ್ವತಿ, ಗ್ರಾಮದೇವತೆ, ಉಡ ಚಲಾಂಬ, ತೇರುಬಸವಾಂಬ ಮೂರ್ತಿಗಳು, ವೀರಗಲ್ಲುಗಳು, ಶಿಲಾ ಮಹಾ ಸತಿಕಲ್ಲುಗಳು, 21 ಶಾಸನಗಳು ಸಾಂಸ್ಕೃತಿಕ ಶ್ರೀಮಂತಿಕೆ ಸಾರುತ್ತವೆ.

ವಚನಕಾರ ಜೇಡರ ದಾಸಿಮಯ್ಯ ಅವರ ಕುರುಹು ಈ ಗ್ರಾಮದಲ್ಲಿ ಕಂಡು ಬರುತ್ತದೆ. ಅಂಬಿಗರ ಚೌಡಯ್ಯ, ಮಡಿವಾಳಮಾಚಯ್ಯ, ಕುಂಬಾರ ಗುಂಡಯ್ಯ, ಚಂಗೇಳೆಯರಂಥ ಶರಣ-ಶರಣೆಯರ ಉಲ್ಲೇಖವೂ ಕಂಡು ಬರುತ್ತದೆ.

ಪ್ರತಿವರ್ಷ ಶಿವರಾತ್ರಿ ನಂತರದ ಎಂಟನೇ ದಿನದಂದು ದೇವರ ರಥೋತ್ಸವ ನಡೆಯುತ್ತದೆ. ಪ್ರತಿ ಸೋಮ ವಾರ ಹಾಗೂ ಅಮಾವಾಸ್ಯೆ ದಿನದಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.

ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದಿಂದ 11 ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 35 ಅಂತರದಲ್ಲಿದೆ. ಇಲ್ಲಿಗೆ ಹಿರೇಕೆರೂರ, ಕೋಡ, ಹಂಸಭಾವಿಯಿಂದ ವಾಹನ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT