ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು | ಪಶು ಆಸ್ಪತ್ರೆ: 48 ಹುದ್ದೆಗಳಲ್ಲಿ 33 ಹುದ್ದೆಗಳು ಖಾಲಿ!

Published 17 ಜುಲೈ 2023, 3:20 IST
Last Updated 17 ಜುಲೈ 2023, 3:20 IST
ಅಕ್ಷರ ಗಾತ್ರ

ಶಂಕರ ಕೊಪ್ಪದ

ಹಿರೇಕೆರೂರು: ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆಯಿಂದ ತಾಲ್ಲೂಕಿನ ಜಾನುವಾರುಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ರೈತರಿಂದ ವ್ಯಾಪಕವಾಗಿ ಕೇಳಿಬರುತ್ತಿವೆ. 

ತಾಲ್ಲೂಕಿನಲ್ಲಿ ಹಸು, ಎಮ್ಮೆ, ಎತ್ತು ಸೇರಿದಂತೆ 29 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಹಾಗೂ 11,000 ಸಾವಿರ ಕುರಿ, ಮೇಕೆಗಳು ಇವೆ. ತಾಲ್ಲೂಕಿನ ಬಹುತೇಕ ರೈತರು ತಮ್ಮಉಪ ಕಸುಬಾಗಿ ಜಾನುವಾರು, ಕುರಿ, ಮೇಕಗಳನ್ನು ಸಾಕುತ್ತಾರೆ.

ಹಿರೇಕೆರೂರು ತಾಲ್ಲೂಕಿನಲ್ಲಿ 7 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಸುತ್ತಿವೆ. 3 ಪಶು ಆಸ್ಪತ್ರೆ ಹಾಗೂ 2 ಪಶು ಚಿಕಿತ್ಸಾ ಕೇಂದ್ರಗಳೂ ಇವೆ. ಆದರೆ ಅನೇಕ ಕಡೆ ವೈದ್ಯರಿಲ್ಲದೆ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎನ್ನುತ್ತಾರೆ ರೈತರು. 

ಪಶು ವೈದ್ಯರ ಕೊರತೆಯಿಂದ ಚರ್ಮಗಂಟು ಕಾಯಿಲೆಗೆ ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ಜಾನುವಾರಗಳು ಮೃತಪಟ್ಟಿವೆ. ಆದರೂ ಸರ್ಕಾರ ಪಶು ವೈದ್ಯರನ್ನು ನೇಮಕ ಮಾಡುತ್ತಿಲ್ಲ. ಹೀಗೆ ಮುಂದುವರಿದರೆ ತಾಲ್ಲೂಕು ಕಚೇರಿ ಹಾಗೂ ಜಿಲ್ಲಾ ಪಶು ಸಂಗೋಪನಾ ಇಲಾಖೆಗೆ ಬೀಗ ಹಾಕಿ ಸರ್ಕಾರದ ಗಮನ ಸೆಳೆಯಲಾಗುವುದು.
ರಾಮಣ್ಣ ಕೆಂಚಳ್ಳೇರ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ

ತಾಲ್ಲೂಕಿನ ಪಶು ಸಂಗೋಪನಾ ಇಲಾಖೆಗೆ ಒಟ್ಟು 48 ಹುದ್ದೆಗಳು ಮಂಜೂರಾಗಿದ್ದು, 33 ಹುದ್ದೆಗಳು ಖಾಲಿ ಉಳಿದಿವೆ. 11 ಹುದ್ದೆಗಳು ಮಾತ್ರ ಭರ್ತಿ ಯಾಗಿವೆ. ತಾಲ್ಲೂಕಿನಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ 5 ಹುದ್ದೆಗಳಲ್ಲಿ 1 ಭರ್ತಿಯಾಗಿದ್ದು 4 ಖಾಲಿ ಉಳಿದಿವೆ. 3 ಪಶು ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ 2 ಭರ್ತಿಯಾಗಿದ್ದು 1 ಖಾಲಿ ಹುದ್ದೆ ಇದೆ.

ಜಾನುವಾರು ಅಧಿಕಾರಿಗಳ ಹುದ್ದೆ 1 ಖಾಲಿ ಇವೆ. ಹಿರಿಯ ಪಶು ಪರೀಕ್ಷಕರು 1 ಹುದ್ದೆ ಭರ್ತಿಯಾಗಿದ್ದು 7 ಖಾಲಿ ಉಳಿದಿವೆ. ಕಿರಿಯ ಪರೀಕ್ಷಕರು 3 ಭರ್ತಿಯಾಗಿದ್ದು, 6 ಹುದ್ದೆಗಳು ಖಾಲಿ ಇವೆ. ಡಿ– ದರ್ಜೆ ನೌಕರರ ಪೈಕಿ 19 ಹುದ್ದೆಗಳಲ್ಲಿ 3 ದಿನಗೂಲಿ ನೌಕರರನ್ನು ನೇಮಿಸಿಕೊಂಡಿದ್ದು, 16 ಹುದ್ದೆಗಳು ಭರ್ತಿಯಾಗಿಲ್ಲ. ವಾಹನ ಚಾಲಕರ 1 ಹುದ್ದೆ ಇದ್ದು, ಅದು ಕೂಡ ಖಾಲಿಯಿದೆ. 

ಯೋಜನೆ ಅನುಷ್ಠಾನಕ್ಕೆ ತೊಡಕು

ಪಶು ಇಲಾಖೆಯಲ್ಲಿ ಸರ್ಕಾರ ಪ್ರತಿ ವರ್ಷ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಪಶು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದ್ದು, ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. 

ರೈತರಿಗೆ ತೊಂದರೆ ಆಗದಂತೆ ಲಭ್ಯವಿರುವ ಸಿಬ್ಬಂದಿಗಳೇ ಆಸ್ಪತ್ರೆಗೆ ಬರುವ ಜಾನುವಾರಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ತೊಂದರೆ ಆಗಿಲ್ಲ. ಸರ್ಕಾರಕ್ಕೆ ಸಿಬ್ಬಂದಿಗಳ ಕೊರತೆ ಬಗ್ಗೆ ಮಾಹಿತಿ ನೀಡಿದ್ದೇವೆ.
ಡಾ.ಕಿರಣ್ ಎಲ್. , ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆಮ ಹಿರೇಕೆರೂರು

ಅಗತ್ಯ ಇರುವ ಕಡೆ ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವುದು, ಲಸಿಕೆ ಹಾಕುವ ಕಾರ್ಯಗಳನ್ನು ಪಶು ಇಲಾಖೆ ಸಿಬ್ಬಂದಿ ಮಾಡಬೇಕಾಗಿದೆ. ಹಿರೇಕೆರೂರು ತಾಲ್ಲೂಕು ಹಾಗೂ ಹೋಬಳಿ ಕೇಂದ್ರ ಸೇರಿದಂತೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಹ ಸಿಬ್ಬಂದಿಗಳಿಲ್ಲದೆ ತೊಂದರೆ ಉಂಟಾಗಿದೆ. ಕುರಿ, ಮೇಕೆ, ದನ-ಕರುಗಳಿಗೆ ಸಕಾಲಕ್ಕೆ ಲಸಿಕೆ ಹಾಗೂ ಚಿಕಿತ್ಸೆ ಕೊಡಲು ಸಿಬ್ಬಂದಿ ಕೊರತೆಯಿಂದ ಸರಿಯಾದ ಚಿಕಿತ್ಸೆ ದೊರೆಯದೆ ಜಾನುವಾರಗಳು ಮೃತಪಟ್ಟಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಅರೆ ಮಲೆನಾಡು ಎನಿಸಿಕೊಂಡಿರುವ ಹಿರೇಕೆರೂರು ತಾಲ್ಲೂಕಿನಲ್ಲಿ ಕೃಷಿ ಆಧಾರಿತ ಚಟುವಟಿಕೆಗಳು ಹೆಚ್ಚಾಗಿವೆ. ಇಂತಹ ಕಡೆ ಪಶು ಸಂಗೋಪನೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಹೊಣೆಯೂ ಇಲಾಖೆಯ ಮೇಲೆ ಇದೆ. ಸಿಬ್ಬಂದಿ ಕೊರತೆಯಿಂದ ಯೋಜನೆಗಳ ಅನುಷ್ಠಾನಕ್ಕೆ ತೊಡಕಾಗುತ್ತಿದೆ. 

ಸಿಗದ ಆಂಬುಲೆನ್ಸ್‌ ಸೌಲಭ್ಯ

ರೈತರ ಮನೆ ಬಾಗಿಲಿಗೆ ತೆರಳಿ ಪಶುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಬೇಕು ಎಂಬ ಉದ್ದೇಶದಿಂದ ಜಾರಿಗೊಂಡ ಕೇಂದ್ರ ಸರ್ಕಾರದ ‘ಪಶು ಸಂಜೀವಿನಿ’ ಯೋಜನೆಯ ಆಂಬುಲೆನ್ಸ್‌ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.  ಪಶುಗಳಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಆಂಬುಲೆನ್ಸ್‌ ಬರುತ್ತಿಲ್ಲ. ಹೀಗಾಗಿ ಆಂಬುಲೆನ್ಸ್‌ ಇದ್ದರೂ ರೈತರ ಪಾಲಿಗೆ ಇ‌ಲ್ಲದಂತಾಗಿದೆ ಎಂದು ರೈತ ಮುಖಂಡರು ದೂರಿದರು. 

ಯೋಜನೆಯನ್ನು ಕಾರ್ಯ ನಿರ್ವಹಿಸಲು ಖಾಸಗಿ ಕಂಪನಿಗೆ ಟೆಂಡರ್ ಕೊಡಲಾಗಿದೆ. ಇದುವರೆಗೂ ಆ ಕಂಪನಿ ಕಾರ್ಯನಿರ್ವಹಿಸದೇ ಇರುವುದರಿಂದ ಈ ಯೋಜನೆಯ ಲಾಭ ರೈತರಿಗೆ ಸಿಗುತ್ತಿಲ್ಲ
ಮಾಲತೇಶ ಪೂಜಾರ, ರೈತ ಮುಖಂಡ
ಹಾವೇರಿ ನಗರದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಹಸುವನ್ನು ಪರೀಕ್ಷೆ ಮಾಡುತ್ತಿರುವ ದೃಶ್ಯ (ಸಂಗ್ರಹ ಚಿತ್ರ)
ಹಾವೇರಿ ನಗರದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಹಸುವನ್ನು ಪರೀಕ್ಷೆ ಮಾಡುತ್ತಿರುವ ದೃಶ್ಯ (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT