ಸೋಮವಾರ, ಸೆಪ್ಟೆಂಬರ್ 27, 2021
21 °C
ಕೋವಿಡ್‌ 3ನೇ ಅಲೆ ಎದುರಿಸಲು ಸನ್ನದ್ಧರಾಗಿ: ಮನೋಜ್‌ ಜೈನ್‌ ಸೂಚನೆ

ಹಾವೇರಿ: ಮನೆಹಾನಿ, ಕೂಡಲೇ ಪರಿಹಾರ ವಿತರಿಸಲು ಮನೋಜ್‌ ಜೈನ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೋವಿಡ್ ಮೂರನೇ ಅಲೆ ಎದುರಿಸಲು ಗರಿಷ್ಠ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಎರಡನೇ ಅಲೆಯ ತಪ್ಪುಗಳು ಮರುಕಳಿಸಬಾರದು. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮೂರು ದಿನಗಳ ಒಳಗಾಗಿ ಪರಿಹಾರ ಪಾವತಿಸಬೇಕು’ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.

ದೇವಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ, ನೆರೆ ಹಾಗೂ ಅತಿವೃಷ್ಟಿ ಪರಿಹಾರ ಕಾರ್ಯಗಳು ಹಾಗೂ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಕಾಲಮಿತಿಯೊಳಗೆ ಪ್ರಸಕ್ತ ಸಾಲಿನ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ, ಪ್ರಗತಿಯ ಫಲಿತಾಂಶ ನೀಡಬೇಕು ಎಂದು ಸೂಚನೆ ನೀಡಿದರು. 

ನೆರೆ ಹಾಗೂ ಅತಿವೃಷ್ಟಿಯಿಂದ ಮನೆಹಾನಿ ಪರಿಹಾರ ನೀಡುವಲ್ಲಿ ಕೆಲ ತಾಲ್ಲೂಕುಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಾನಿಯಾಗಿ 20 ದಿನ ಕಳೆದರೂ ಪರಿಹಾರ ಪಾವತಿಸಿಲ್ಲ. ಪಾವತಿಗೆ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಮೂರು ದಿನದೊಳಗಾಗಿ ಪರಿಹಾರ ಪಾವತಿಸುವಂತೆ ಖಡಕ್ ಸೂಚನೆ ನೀಡಿದರು.

ಕಳೆದ ವರ್ಷ ನೆರೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಹಣ ಬಿಡುಗಡೆ ಮಾಡಿದರೂ ಮನೆ ನಿರ್ಮಾಣ ಆರಂಭ ಮಾಡದ ಫಲಾನುಭವಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಮೂರನೇ ಅಲೆ:

ಕೋವಿಡ್‌ಗೆ ಸಂಬಂಧಿಸಿದ ಪ್ರತಿ ಮರಣದ ಆಡಿಟ್ ಮಾಡಬೇಕು. ಸೋಂಕು ತಗುಲಿದ ಅವಧಿ, ರೋಗ ತಪಾಸಣೆ ಮಾಡಿದ ಅವಧಿ, ಚಿಕಿತ್ಸೆ ಆರಂಭಿಸಿದ ಅವಧಿ, ಮರಣದ ಅವಧಿ ಹಾಗೂ ಕಾರಣಗಳ ಕುರಿತಂತೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ಮೂರನೇ ಅಲೆಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಸೋಂಕಿತರಿಗೆ ಮುಂಚಿತವಾಗಿ ತಪಾಸಣೆ, ವೈದ್ಯಕೀಯ ಉಪಚಾರಗಳು ಸಕಾಲಕ್ಕೆ ಆರಂಭವಾದರೆ ಸೋಂಕಿನ ಗಂಭೀರತೆಯನ್ನು ತಡೆಯಬಹುದು. ಕೋವಿಡ್ ವಾರ್ಡ್‌ಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವೈದ್ಯರುಗಳು ಕೋವಿಡ್ ವಾರ್ಡ್‌ಗಳಿಗೆ ತೆರಳಿ ಕಾಲಕಾಲಕ್ಕೆ ತಪಾಸಣೆ ಮಾಡಬೇಕು ಎಂದರು. 

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಜಿ.ಪಂ. ಉಪಕಾರ್ಯದರ್ಶಿ ಮೆಳ್ಳಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.