ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು | ಗರ್ಭಕೋಶ ಶಸ್ತ್ರಚಿಕಿತ್ಸೆ: ಮತ್ತೊಬ್ಬ ಮಹಿಳೆ ಸಾವು

Published 27 ಜೂನ್ 2024, 16:31 IST
Last Updated 27 ಜೂನ್ 2024, 16:31 IST
ಅಕ್ಷರ ಗಾತ್ರ

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಗರ್ಭಕೋಶದ ಶಸ್ತ್ರಚಿಕಿತ್ಸೆಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು ಎನ್ನಲಾದ ನೀಲವ್ವ ಲಮಾಣಿ (42) ಎಂಬುವರು ದಾವಣಗೆರೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗೆ ಸಾವನ್ನಪ್ಪಿದವರಲ್ಲಿ ಇವರು ಆರನೆಯವರು ಆಗಿದ್ದಾರೆ.

‘ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ರಾಣೆಬೆನ್ನೂರು ತಾಲ್ಲೂಕಿನ ಚನ್ನಾಪುರ ತಾಂಡಾದ ನೀಲವ್ವ ಅನಾರೋಗ್ಯ ಸಮಸ್ಯೆಗೆ ಒಳಗಾಗಿ ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ಕುಟುಂಬದವರು ತಿಳಿಸಿದ್ದಾರೆ.

‘ರಾಣೆಬೆನ್ನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಡಾ.ಪಿ.ಶಾಂತ (ಸದ್ಯ ಗೋಕಾಕ್ ಆಸ್ಪತ್ರೆ) ಅವರು ಹಣದ ಆಸೆಗೆ ತಾಲ್ಲೂಕಿನ 1,522 ಮಹಿಳೆಯರಿಗೆ ಅಕ್ರಮವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದರು’ ಎಂದು ಸ್ಥಳೀಯರು ದೂರುತ್ತಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ.

ದಿನವೂ ಸಮಸ್ಯೆ, ಆಸ್ಪತ್ರೆಗೆ ಅಲೆದಾಟ:

‘ಡಾ. ಶಾಂತ ಅವರು 2010ರಿಂದ 2016ರವರೆಗೆ ಕೆಲಸ ಮಾಡಿದ್ದರು. ಇದೇ ಅವಧಿಯಲ್ಲಿ ಹೊಟ್ಟೆ ನೋವು ಎಂದು ಹೇಳಿ ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಯರನ್ನು ಪರೀಕ್ಷಿಸುತ್ತಿದ್ದ ಅವರು, ‘ಗರ್ಭಕೋಶದಲ್ಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಮಾಡಿಸಬೇಕು. ಇಲ್ಲದಿದ್ದರೆ, ನಿಮ್ಮ ಜೀವಕ್ಕೆ ಅಪಾಯವಿದೆ’ ಎನ್ನುತ್ತಿದ್ದರು. ಇದರಿಂದ ಹೆದರಿ ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು’ ಎಂದು ವಂದೇ ಮಾತರಂ ಯುವಕ ಸ್ವಸೇವಾ ಸಂಘದ ಅಧ್ಯಕ್ಷ ಜಗದೀಶ್ ಕೆರೂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೈದ್ಯರ ಕೃತ್ಯದ ವಿರುದ್ಧ ಮಹಿಳೆಯರ ಪರ ಹೋರಾಡುತ್ತಿದ್ದೇವೆ. ಈ ಬಗ್ಗೆ ಹಲವರಿಗೆ ಮನವಿ ಸಲ್ಲಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲೂ ವಿಚಾರಣೆ ನಡೆದಿದೆ. ಆದರೆ, ಯಾವುದೇ ಪ್ರಗತಿ ಕಂಡಿಲ್ಲ. ಸಾಕಷ್ಟು ಸಂಕಷ್ಟದಲ್ಲಿ ಇರುವ ಮಹಿಳೆಯರ ಜೀವನಾಂಶಕ್ಕೆ ಶಾಶ್ವತವಾದ ನೆರವು ನೀಡಬೇಕು’ ಎಂದು ಮಹಿಳೆಯರ ಪರ ಹೋರಾಟ ಸಮಿತಿ ಅಧ್ಯಕ್ಷೆ ಲಲಿತಾ ಲಮಾಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT