ಸೋಮವಾರ, ಡಿಸೆಂಬರ್ 6, 2021
23 °C
ವಂಚನೆಗೆ ಒಳಗಾಗುತ್ತಿರುವವರಲ್ಲಿ ವಿದ್ಯಾವಂತರೇ ಹೆಚ್ಚು: ಸಿಪಿಐ ಸಂತೋಷ ಪವಾರ್‌ ಹೇಳಿಕೆ

ಹಾವೇರಿ: ಸೈಬರ್‌ ಅಪರಾಧ ಪ್ರಕರಣ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ದೇಶದಲ್ಲಿ ಪ್ರತಿ ವರ್ಷ 25ರಿಂದ 50 ಸಾವಿರದವರೆಗೆ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚು ವಿದ್ಯಾವಂತರು ವಂಚನೆಗೆ ಒಳಗಾಗುತ್ತಿರುವುದು ವಿಷಾದನೀಯ’ ಎಂದು ಹಾವೇರಿ ಸೈಬರ್ ಕ್ರೈಂ ಠಾಣೆಯ ಸಿ.ಪಿ.ಐ ಸಂತೋಷ ಪವಾರ್ ಹೇಳಿದರು.

ನಗರದ ಸರ್.ಎಂ. ವಿಶ್ವೇಶ್ವರಯ್ಯ ಶಾಲೆಯಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಾವೇರಿ ಸೈಬರ್ ಕ್ರೈಂ ವಿಭಾಗದ ಸಹಯೋಗದಲ್ಲಿ ನಡೆದ ಹಾವೇರಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಕ್ಕೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಸೈಬರ್ ಅಪರಾಧ ಹೆಚ್ಚಾಗಿ ಮೊಬೈಲ್‌ನಿಂದ ಆಗುತ್ತಿದ್ದು, ಮೊಬೈಲ್ ಬಳಸುವಾಗ ಎಚ್ಚರಿಕೆ ವಹಿಸಬೇಕು. ಬ್ಯಾಂಕಿನ ಮ್ಯಾನೇಜರ್‌ ಅಥವಾ ಸಿಬ್ಬಂದಿ ತಮ್ಮ ಬ್ಯಾಂಕ್‌ ವಿವರಗಳನ್ನು ಎಂದಿಗೂ ಕೇಳುವುದಿಲ್ಲ, ತಮಗೆ ಯಾವುದೇ ಮೊಬೈಲ್ ಕರೆಯಿಂದ ಬ್ಯಾಂಕ್ ವಿವರ ಕೇಳಿದರೆ ನೀಡಬಾರದು. ಎ.ಟಿ.ಎಂ ಪಿನ್ ಹಾಕುವಾಗ ಜಾಗರೂಕತೆ ವಹಿಸಬೇಕು. ಯಾವುದೇ ಅನಾಮಧೇಯ ಕರೆಗಳಿಗೆ ತಮ್ಮ ಬ್ಯಾಂಕ್‌ ವಿವರ ನೀಡಬಾರದು ಎಂದರು.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿವರವನ್ನು ತಮ್ಮ ಸ್ನೇಹಿತರಿಗೆ ಅಲ್ಲದೆ ಬೇರೆಯವರು ನೋಡದಂತೆ ಜಾಗ್ರತೆ ವಹಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಫೋಟೊ ಹಾಗೂ ಕೌಟುಂಬಿಕ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ತೊಂದರೆಗಳಾಗುತ್ತವೆ. ಸೈಬರ್ ಕ್ರೈಂಗಳಲ್ಲಿ ಹಣ ಕಳೆದುಕೊಂಡರೆ ಮರಳಿ ಸಿಗುವುದು ಕಷ್ಟಸಾಧ್ಯ. ಹಾಗಾಗಿ ಹಣ ಕಳೆದುಕೊಳ್ಳುವ ಮುನ್ನ ಜಾಗರೂಕತೆಯಿಂದ ವ್ಯವಹರಿಸಬೇಕು ಸಲಹೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಆಥವಾ ದೂರುಗಳಿಗಾಗಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ:100/ 08375-233766 ಅಥವಾ ಸಿ.ಇ.ಎನ್ ಕ್ರೈ ಪೊಲೀಸ್ ಠಾಣೆ ನಂ 08375-232770 ಗೆ ಸಂಪರ್ಕಿಸಲು ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ, ಅಧಿಕಾರಿಗಳು ಸೈಬರ್ ಕ್ರೈಂಗೆ ಒಳಗಾಗದಂತೆ ಎಚ್ಚರವಹಿಸಿ. ಒಂದು ವೇಳೆ ಸೈಬರ್ ಕ್ರೈಂ ಗೆ ಒಳಗಾದರೆ ಯಾವುದೇ ಮುಜುಗರ ಪಡದೆ ಸೈಬರ್ ಕ್ರೈಂಗೆ ಪ್ರಕರಣ ದಾಖಲಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಸಲಹೆ ನೀಡಿದರು.

‘ಸೈಬರ್ ಕ್ರೈಂ ಅಪರಾಧ ಕುರಿತು ಜಾಗೃತಿ ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ತಮ್ಮ ಸಹೋದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು