ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

Published 9 ಮೇ 2024, 6:54 IST
Last Updated 9 ಮೇ 2024, 6:54 IST
ಅಕ್ಷರ ಗಾತ್ರ

ಹಿರೇಕೆರೂರು: ತಾಲ್ಲೂಕಿನಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಕುಂಬಾರರ ಮಡಕೆಗಳತ್ತ ಜನರು ಗಮನ ಹರಿಸತೊಡಗಿದ್ದಾರೆ. ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಕೆಗಳ ಖರೀದಿ ಜೋರಾಗಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಬಿಸಿಲಿನ ತಾಪ 38 ಡಿಗ್ರಿ ಸೆಲ್ಶಿಯಸ್ ದಾಟಿದೆ. ಇದರೊಂದಿಗೆ ಕುಂಬಾರರು ಸಿದ್ಧಪಡಿಸುವ ‘ಬಡವರ ಫ್ರಿಡ್ಜ್’ ಎಂದು ಕರೆಯುವ ಕೆಂಪು ಮಣ್ಣಿನ ಮಡಕೆಗಳ ಬೇಡಿಕೆ ಹೆಚ್ಚಿದೆ. ಆಧುನಿಕತೆಗೆ ತಕ್ಕಂತೆ ಕುಂಬಾರರು ಮಡಕೆಗಳಿಗೆ ಹೊಸ ರೂಪ ನೀಡಿ ಜನರನ್ನು ಆಕರ್ಷಿಸುತ್ತಿದ್ದಾರೆ.

ಈ ಮುಂಚೆ ಮಡಕೆಗಳನ್ನು ಬಗ್ಗಿಸಿಯೇ ನೀರು ಕುಡಿಯಬೇಕಿತ್ತು. ಈಗ ಅವುಗಳಿಗೂ ಆಧುನಿಕ ಸ್ಪರ್ಶ ನೀಡಲಾಗಿದೆ. ತಳದಲ್ಲಿ ನಲ್ಲಿ ಜೋಡಣೆ ಮಾಡಲಾಗಿದೆ. ಮಡಕೆ ಕೆಳಭಾಗದಲ್ಲಿ ಮರಳು ಹಾಕಿ ರಾಗಿ ಪೈರು ಬೆಳೆಸಲಾಗುತ್ತದೆ. ಇದು ನೀರನ್ನು ಮತ್ತಷ್ಟು ತಂಪಾಗಿಸುತ್ತದೆ.

ಫ್ರಿಡ್ಜ್ ನೀರು ಕುಡಿಯುವ ಬದಲು ಮಣ್ಣಿನ ಮಡಕೆಯ ತಣ್ಣನೆಯ ನೀರು ಆರೋಗ್ಯಕ್ಕೆ ಹಿತ ಎಂಬ ಕಾರಣ ಮಡಕೆಗಳ ಮಾರಾಟ ಪಟ್ಟಣ ಹಾಗೂ ತಾಲ್ಲೂಕಿನ ಕೋಡ, ಹಂಸಭಾವಿ, ಚಿಕ್ಕೇರೂರು ಸೇರಿದಂತೆ ವಿವಿಧೆಡೆ ಮಡಕೆಗಳ ವ್ಯಾಪಾರ ಭರಾಟೆಯಿಂದ ನಡೆಯುತ್ತದೆ.

ಪಟ್ಟಣದ ವಾರದ ಸಂತೆ ಸೋಮವಾರ ಆಗಿರುವುದರಿಂದ ಸಂತೆಯ ದಿನದಲ್ಲಿ ರಾಣೆಬೆನ್ನೂರುನಿಂದ ಕುಂಬಾರರು ಆಟೊಗಳಲ್ಲಿ ತುಂಬಿಕೊಂಡು ತಾಲ್ಲೂಕಿನಲ್ಲಿ ನಡೆಯುವ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಫೆಬ್ರುವರಿ ತಿಂಗಳನಿಂದ ಮೇ ಎರಡನೇ ವಾರದವರೆಗೆ ಮಡಕೆಗಳ ಮಾರಾಟ ಜೋರಾಗಿರುತ್ತದೆ.

ಹೂಜಿ, ರಂಜಣಿಗೆ ಸೇರಿದಂತೆ ಮಣ್ಣಿನಿಂದ ಮಾಡುವ ಪಾತ್ರೆಗಳಿಗೂ ಬೇಡಿಕೆ ಹೆಚ್ಚು. ಸಂಘ ಸಂಸ್ಥೆಗಳು, ಸಾರ್ವಜನಿಕರು ಸೇರುವ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟಿಗೆಗಳನ್ನು ಪ್ರಾರಂಭಿಸಿಲು ದೊಡ್ಡ ದೊಡ್ಡ ಮಡಕೆಗಳನ್ನು ಜನರು ತೆಗೆದುಕೊಂಡು ಹೋಗುತ್ತಿದ್ದಾರೆ.

‘ಬೇಸಿಗೆಯ ನಾಲ್ಕು ತಿಂಗಳು ಏನೂ ಸಮಸ್ಯೆಯಿಲ್ಲದೆ ಚೆನ್ನಾಗಿ ವ್ಯಾಪಾರ ನಡೆಯುತ್ತದೆ. ಮೂರು ತಿಂಗಳಲ್ಲಿ 10 ಸಾವಿರ ಮಣ್ಣಿನ ಮಡಕೆಗಳನ್ನು ಮಾರಾಟ ಮಾಡುತ್ತೇವೆ. ಒಂದು ಮಡಕೆಗೆ ₹50 ಲಾಭ ಪಡೆದು ಮಾರಾಟ ಮಾಡುತ್ತೇವೆ. ಮೂರು ತಿಂಗಳಲ್ಲಿ ಸುಮಾರು ₹5 ಲಕ್ಷ ಲಾಭ ಗಳಿಸುತ್ತೇವೆ’ ಎಂದು ವ್ಯಾಪಾರಿ ಗಣೇಶ ಕುಂಬಾರ ಹೇಳಿದರು.

ಈ ಬಾರಿಯ ಬೇಸಿಗೆ ಬಿಸಿಲಿಗೆ ಮನೆಯಲ್ಲಿ ಕುಡಿಯಲು ಇಟ್ಟಿರುವ ನೀರು ಸಹ ಬಿಸಿಯಾಗುತ್ತಿವೆ. ಅದನ್ನು ತಪ್ಪಿಸಲು ಮಣ್ಣಿನ ಮಡಕೆಗಳ ಮೊರೆ ಹೋಗುವುದು ಅನಿವಾರ್ಯ. ಫ್ರಿಡ್ಜ್‌ ನೀರು ಕುಡಿಯುವುದಕ್ಕಿಂತ ಮಡಕೆಯಲ್ಲಿನ ನೀರು ಸೇವನೆ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ವಿಧಾನ ಎಂದು ವೈದ್ಯರು ಸಹ ಹೇಳುತ್ತಾರೆ. ಹೀಗಾಗಿ ನಾವು ಮಣ್ಣಿನ ಮಡಕೆ ಖರೀದಿ ಮಾಡಿದ್ದೇವೆ’ ಎಂದು ಸುನೀತಾ ಎಂ. ಹೇಳಿದರು.

ಗಾತ್ರದ ಆಧಾರದಲ್ಲಿ ಬೆಲೆ
12 ಲೀಟರ್‌‌ನಿಂದ ಹಿಡಿದು 25 ಲೀಟರ್‌ವರೆಗೂ ಮಡಕೆಗಳು ಗ್ರಾಹಕರಿಗೆ ಲಭ್ಯವಿದೆ. 12 ಲೀಟರ್‌‌ ಮಣ್ಣಿನ ಮಡಕೆಗೆ ₹280 18 ಲೀಟರ್ ಮಡಕೆಗೆ ₹340 20 ಲೀಟರ್ ಮಡಕೆಗೆ ₹360 ಹಾಗೂ 25 ಲೀಟರ್‌ ಮಡಕೆಗೆ ₹400 ಬೆಲೆ ನಿಗದಿ ಮಾಡಲಾಗಿದೆ. ಬಣ್ಣ ಬಣ್ಣದ ಚಿತ್ರ ಬಿಡಿಸಿರುವ ಮಡಕೆಗಳ ಬೆಲೆ ತುಸು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT