ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ಯಾಗದಿಂದ ಬಂತು ಸ್ವಾತಂತ್ರ್ಯ’ 

 ‘ಆ ದಿನಗಳನ್ನು’ ಮೆಲುಕು ಹಾಕಿದ ಸ್ವಾತಂತ್ರ್ಯ ಹೋರಾಟಗಾರ ಪರಮಣ್ಣ ಹರಕಂಗಿ ‌
Last Updated 14 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಗುತ್ತಲ:ಅನೇಕ ಮಹನೀಯರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಆದರೆ, ಏಳು ದಶಕಗಳ ಬಳಿಕ ಭ್ರಷ್ಟಾಚಾರ, ಜಾತಿ–ಧರ್ಮಗಳ ಲಾಬಿ, ಅತ್ಯಾಚಾರಗಳು ಹೆಚ್ಚುತ್ತಿರುವುದು ಕಂಡಾಗ ನೋವಾಗುತ್ತದೆ ಎಂದು ನೆಗಳೂರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಪರಮಣ್ಣ ಹರಕಂಗಿ ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಗಾಂಧಿ ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯದ ಕಿಚ್ಚಿನಿಂದ ಯವೌನದಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಪರಮಣ್ಣ ಹರಕಂಗಿ ಅವರಿಗೀಗ 93 ವರ್ಷ. ಈ ಇಳಿವಯಸ್ಸಿನಲ್ಲೂ ದೇಶದ ಕುರಿತು ತೋರುತ್ತಿರುವ ಕಾಳಜಿ ಮಾತ್ರ ಅಪಾರ.

‘ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಸ್ವಾರ್ಥದ ರಾಜಕಾರಣ ಮಾಡುವವರೇ ದೇಶದಲ್ಲಿ ಹೆಚ್ಚಾಗಿದ್ದಾರೆ. ಹಣ ತೆಗೆದುಕೊಂಡು ಮತ ಹಾಕುವ ಹಂತಕ್ಕೆ ಜನತೆಯೂ ತಲುಪಿರುವುದೇ ದೇಶದ ದುರಂತ’ ಎಂದು ಬೇಸರದಿಂದ ನುಡಿದರು.

ಅಂದು:ದೇಶಕ್ಕೆ ಸ್ವಾತಂತ್ರ್ಯ ಪಡೆಯುವುದೇ ಅಂದು ಕಾಂಗ್ರೆಸ್ ನಿಲುವಾಗಿತ್ತು. ಚಳಿವಳಿಯಲ್ಲಿ ನಾವೆಲ್ಲ ಬಹಳಷ್ಟು ಕಷ್ಟಪಟ್ಟೆವು. ಹಗಲು– ರಾತ್ರಿ ಎನ್ನದೇ ಹೋರಾಡಿದೆವು. ಬಿಟೀಷರ ಸವಣೂರ ಠಾಣೆಯನ್ನು ಸುಟ್ಟು ಹಾಕಿದ್ದೆವು. ಹೊನ್ನತ್ತಿ, ಹಾವನೂರ, ಸೂರಣಗಿ, ಹೊಸರಿತ್ತಿ, ಹಾಲಗಿ, ನೆಗಳೂರ, ಬೆಳವಗಿ, ಶಿಗ್ಲಿ ಗ್ರಾಮಗಳ ಬ್ರಿಟೀಷರ ಚಾವಡಿ ಮತ್ತು ದಾಖಲೆಗಳನ್ನು ಸುಟ್ಟು ಹಾಕಿದ್ದೆವು ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ಈ ಹೋರಾಟದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಕೂಗನೂರ, ಹಾಲಗಿ, ಹೊಸರಿತ್ತಿ, ನೆಗಳೂರ, ಬೆಳವಗಿ, ಶಿಗ್ಲಿ ಗ್ರಾಮದವರು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟಗಾರರನ್ನು ಹಿಡಿದು ಸೆರೆಮನೆಗೆ ಹಾಕಲು ಬ್ರಿಟೀಷರು ಹೊಂಚು ಹಾಕುತ್ತಿದ್ದರು. ಆಗ ನಾವೆಲ್ಲರೂ 2ರಿಂದ 3 ದಿನಗಳ ಕಾಲ ಉಪವಾಸ ತಿರುಗಿ ಜೋಳ, ಕಬ್ಬಿನ ಗದ್ದೆ, ಕ್ಯಾದಿಗೆ ಗಿಡ, ದೊಡ್ಡ ದೊಡ್ಡ ಬಂಡೆಗಳಲ್ಲಿ ಅಡಗಿ ಕುಳಿತುಕೊಂಡು ಬದುಕು ಸಾಗಿಸುತ್ತಿದ್ದೆವು ಎಂದು ನೆನೆಪಿಸಿಕೊಂಡರು.

ಕಪ್ಪತಗುಡ್ಡದಲ್ಲಿ 3 ದಿನ ಇದ್ದೆವು. ಆರಂಭದಲ್ಲಿ ಉಪವಾಸ ಇರಬೇಕಾಯಿತು. ಆ ಬಳಿಕ ಹಂದಿಯ ಗೂಡಿನಲ್ಲಿ ಅಡಗಿ ಕೊಳ್ಳಬೇಕಾದ ಪ್ರಸಂಗವೂ ಬಂತು. ಆಗ ಪಕ್ಕದ ತಾಂಡಾದ ಜನರು ಊಟವನ್ನು ತಂದುಕೊಡುತ್ತಿದ್ದರು. ಆದರೆ, ಊಟ ತರುತ್ತಿದ್ದವರ ಪೈಕಿ 11 ಜನರನ್ನು ಅಂದಿನ ಸರ್ಕಾರ ಜೈಲಿಗೆ ಅಟ್ಟಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT