ಮಂಗಳವಾರ, ಸೆಪ್ಟೆಂಬರ್ 28, 2021
21 °C

ರಾಣೆಬೆನ್ನೂರು: ಕಾರ್ಮಿಕರಲ್ಲದವರಿಗೆ ಕಿಟ್ ವಿತರಣೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ಬಡ ಕಾರ್ಮಿಕರಿಗೆ ಸರ್ಕಾರ ನೀಡಿದ ಆಹಾರ್‌ ಕಿಟ್‌ಗಳನ್ನು ನೀಡಬೇಕೆಂದು ಆಗ್ರಹಿಸಿ ಸಾವಿರಾರು ಕಾರ್ಮಿಕರು ಶುಕ್ರವಾರ ಕಾರ್ಮಿಕ ಇಲಾಖೆಯ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯು ಶಿದ್ಧೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಯರೇಕುಪ್ಪಿ ರಸ್ತೆಯ ಕಾರ್ಮಿಕ ಇಲಾಖೆಗೆ ತಲುಪಿತು. ಮೆರವಣಿಗೆಯುದ್ದಕ್ಕೂ ಕಾರ್ಮಿಕರು ಇಲಾಖೆ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಜವಾದ ಕಾರ್ಮಿಕರಿಗೆ ಸರ್ಕಾರದ ಕಿಟ್‌ಗಳನ್ನು ವಿತರಣೆ ಮಾಡಿಲ್ಲ. ಚುನಾಯಿತ ಪ್ರತಿನಿಧಿಗಳ ಮಾತು ಕೇಳಿ ಕಾರ್ಮಿಕರಲ್ಲದವರಿಗೆ ಸರ್ಕಾರದ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿಗೆ ಒಟ್ಟು 8,000 ಕಿಟ್‌ಗಳು ಬಂದಿದ್ದು, ಕಳೆದ ಎರಡು ಮೂರು ತಿಂಗಳಿಂದ ಎಪಿಎಂಸಿ ಗೋದಾಮಿನಲ್ಲಿ ಕೊಳೆಯುತ್ತಿದ್ದವು. ಈ ಬಗ್ಗೆ ಕಾರ್ಮಿಕ ಮುಖಂಡರು ಇಲಾಖೆ ಅಧಿಕಾರಿಗಳಿಗೆ ಅನೇಕ ಮನವಿ ಮಾಡಿದರೂ ಕಿಟ್‌ ವಿತರಣೆ ಮಾಡಲು ವಿಳಂಬ ನೀತಿ ಅನುಸರಿಸಿದರು. ಈಗ ಏಕಾಏಕಿ ಕಾರ್ಮಿಕರಲ್ಲದವರಿಗೆ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ ಎಂದು ದೂರಿದರು.

ನಿಜವಾದ ಕಾರ್ಮಿಕರಿಗೆ ಕಿಟ್‌ ವಿತರಣೆಯಾಗಿಲ್ಲ, ಅವರು ಕಿಟ್‌ಗಾಗಿ ಪರಿತಪಿಸುವಂತಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ನೋಂದಣಿ ಮಾಡಿಸಿದ ಪಟ್ಟಿ ಪ್ರಕಾರ ಕಾರ್ಮಿಕರಿಗೆ ದಿನಕ್ಕೆ 100- 200 ಕಿಟ್‌ಗಳನ್ನು ವಿತರಿಸಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ನಿಜವಾದ ಫಲಾನುಭವಿಗಳಿಗೆ ಕಿಟ್‌ ತಲುಪಿದಂತಾಗುತ್ತಿತ್ತು. ಕಾರ್ಮಿಕ ಇಲಾಖೆ ಅಧಿಕಾರಿಗಳು ಒತ್ತಡಕ್ಕೆ ಮಣಿದು ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿ ಕೈತೊಳೆದುಕೊಂಡಿದ್ದಾರೆ. ಕೂಡಲೇ ಸರಿಪಡಿಸಿ ನಿಜವಾದ ಕಾರ್ಮಿಕರಿಗೆ ಸರ್ಕಾರದ ಕಿಟ್‌ಗಳನ್ನು ವಿತರಣೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಅಶೋಕರಡ್ಡಿ ತೆಲಗಿ, ಪರಸಪ್ಪ ಕುರುಬರ, ರಾಮಪ್ಪ ಗೊಲ್ಲರ, ಹಾಲಪ್ಪ ಗುಡಗುಡಿ, ಬೀರಪ್ಪ ಹೀಲದಹಳ್ಳಿ, ಮಾರುತೆಪ್ಪ ಭೋವಿ, ನಾಗಪ್ಪ ಹಣಿಗಿ, ನಾಗೇಶ ಕಾಳಿ, ಹನುಮಂತಪ್ಪ ಐರಣಿ, ಸೋಮಲಿಂಗಪ್ಪ ಬಾರ್ಕಿ, ಹಾಲಪ್ಪ ಸನಿದಿ, ರಾಮಪ್ಪ ಉದಗಟ್ಟಿ, ದೇವೆಂದ್ರ ಹಡಗಲಿ,ಮಂಜಪ್ಪ, ಹಾಲಪ್ಪ ಗುಡಗುಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು