ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ–ಸವಣೂರಿನಲ್ಲಿ ನೀರಾವರಿ ಕ್ರಾಂತಿ: ಸಿಎಂ ಬಸವರಾಜ ಬೊಮ್ಮಾಯಿ

ಹಿರೇಬೆಂಡಿಗೇರಿ ಗ್ರಾಮದ ದೊಡ್ಡಕೆರೆಗೆ ಬಾಗಿನ ಅರ್ಪಣೆ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 12 ಫೆಬ್ರುವರಿ 2022, 15:47 IST
ಅಕ್ಷರ ಗಾತ್ರ

ಹಾವೇರಿ: ‘ಶಿಗ್ಗಾವಿ ಕ್ಷೇತ್ರದ ಪ್ರತಿ ಹಳ್ಳಿಗೆ ನಳದ ನೀರು ಕೊಡುವ ನಿಟ್ಟಿನಲ್ಲಿ ₹638 ಕೋಟಿ ವೆಚ್ಚದಲ್ಲಿ ಶಿಗ್ಗಾವಿ ಹಾಗೂ ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಹಳ್ಳಿಗೆ ತುಂಗಭದ್ರಾ ನೀರು ಒದಗಿಸುವ ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ತಾಲ್ಲೂಕು ಹಿರೇಬೆಂಡಿಗೇರಿ ಗ್ರಾಮದಲ್ಲಿ ಶನಿವಾರ ಸವಣೂರ ಏತ ನೀರಾವರಿ ಯೋಜನೆಯಡಿ 48 ಕೆರೆಗಳ ತುಂಬಿಸುವ ₹90.57 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 40 ಕಿ.ಮೀ.ದೂರದಿಂದ ವರದೆ ಇಂದು ಹಿರೇಬೆಂಡಿಗೇರಿಗೆ ಹರಿದು ಬಂದಿದ್ದು, ವರದಾನವಾಗಿದೆ. ನಾನು ಕೊಟ್ಟಮಾತು ಮಾತು ಉಳಿಸಿಕೊಂಡಿದ್ದು ಸಮಾಧಾನವಾಗಿದೆ ಎಂದು ಹೇಳಿದರು.

ಅವ್ವ ಗಂಗಮ್ಮನ ಆಶೀರ್ವಾದ

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ರಾಜ್ಯದಲ್ಲಿ 7.5 ಲಕ್ಷ ಎಕರೆ ನೀರಾವರಿ ಮಾಡಲಾಗಿದೆ. ಶಿಗ್ಗಾವಿ ಮತ್ತು ಸವಣೂರ ಏತ ನೀರಾವರಿ ಯೋಜನೆ ಮೂಲಕ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿದ್ದೆ, ನನ್ನ ಅವ್ವ ಗಂಗಮ್ಮನ ಆಶೀರ್ವಾದಿಂದ ಇಂದು ನನಸಾಗಿದೆ. ತವರು ಕ್ಷೇತ್ರದಲ್ಲಿ ‘ನೀರಾವರಿ ಕ್ರಾಂತಿ’ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬರುವ ದಿನಗಳಲ್ಲಿ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಿ ಕನ್ನಡನಾಡಿನ ಭೂಮಿತಾಯಿಗೆ ‘ಹಸಿರು ಸೀರೆ’ ಉಡಿಸುವ ಸಂಕಲ್ಪ ಮಾಡಲಾಗಿದೆ. ಇದರ ಜವಾಬ್ದಾರಿಯನ್ನು ಸಚಿವರಾದ ಕಾರಜೋಳ ಅವರಿಗೆ ವಹಿಸಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ₹400 ಕೋಟಿ ಮಂಜೂರು ಮಾಡಿ ಕಾರ್ಮಿಕರ ಮಕ್ಕಳ ಖಾತೆಗೆ ಜಮೆ ಮಾಡಲಾಗಿದೆ. ರೈತರು, ಕಾರ್ಮಿಕರು ಹಾಗೂ ಬಡವರ ಸಂಕಷ್ಟಕ್ಕೆ ನಮ್ಮ ಸರ್ಕಾರ ಸದಾ ಮಿಡಿಯುತ್ತದೆ ಎಂದರು.

ಪ್ರತ್ಯೇಕ ಹಾಲು ಒಕ್ಕೂಟ

ಹಾವೇರಿ ಜಿಲ್ಲೆಗೆ ಪ್ರತ್ಯೇಕವಾದ ಹಾಲು ಒಕ್ಕೂಟ ಸ್ಥಾಪಿಸುವ ಪ್ರಕ್ರಿಯೆಯೂ ಅಂತಿಮ ಘಟ್ಟದಲ್ಲಿದ್ದು, ಅಧಿವೇಶನದ ನಂತರ ಪ್ರತ್ಯೇಕ ಮಾಡಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, ‘2013ರಲ್ಲಿ ಬೃಹತ್ ನೀರವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ದೂರ ದೃಷ್ಟಿಯಿಂದ ₹690 ಕೋಟಿ ವೆಚ್ಚದ 30 ಹಳ್ಳಿಗಳ 38 ಸಾವಿರ ಎಕರೆ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದರು. ಇಂದು ಮುಖ್ಯಮಂತ್ರಿಗಳಾಗಿ ಲೋಕರ್ಪಾಣೆ ಮಾಡಿದ್ದಾರೆ’ ಎಂದರು.

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು, ದೇಶಕ್ಕೆ ಅನ್ನನೀಡುವ ರೈತರ ಮಕ್ಕಳ ಶಿಕ್ಷಣಕ್ಕಾಗಿ ತಾವು ಅಧಿಕಾರ ವಹಿಸಿಕೊಂಡ ಒಂದು ಗಂಟೆಯೊಳಗೆ ಒಂದು ಸಾವಿರ ಕೋಟಿ ಅನುದಾನ ನೀಡಿದ್ದಾರೆ. ನಾಡಿನ ರೈತರ ಕಣ್ಮಣಿಯಾಗಿದ್ದಾರೆ ಎಂದರು.

‘ರಾಜ್ಯದಲ್ಲಿ ಶಾಂತಿ ನೆಲೆಸಬೇಕು’

‘ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ಹೈಕೋರ್ಟ್‌ ಆದೇಶವನ್ನು ಪರಿಪೂರ್ಣವಾಗಿ ಜಾರಿ ಮಾಡಬೇಕು. ಮಕ್ಕಳು ಯಾವುದೇ ಭೇದ ಭಾವವಿಲ್ಲದೆ, ಒಮ್ಮನಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡುವಂತೆ ಮಾಡುವುದು ನನ್ನ ಮೊದಲ ಕರ್ತವ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದ ಆಯವ್ಯಯ ಪ್ರಕ್ರಿಯೆ ಪ್ರಾರಂಭವಾಗಿದೆ. ಬಹುತೇಕ ಎಲ್ಲಾ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದೆ. ನಂತರ ಸಂಘ–ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರದ ಯೋಜನೆಗಳನ್ನು ರೂಪಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗುವುದು ಎಂದರು.

‘ಕಾಂಗ್ರೆಸ್‌ ಸರ್ಕಾರದಲ್ಲಿ ಅತಿ ಹೆಚ್ಚು ಸಾಲ’

ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ ಇಲ್ಲದ ಸಂದರ್ಭದಲ್ಲಿಯೂ ಅತಿ ಹೆಚ್ಚು ಸಾಲ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಹಿಂದಿನ ಸಾಲಗಳನ್ನು ನಿಭಾಯಿಸಿ, ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತವನ್ನೂ ನಿಭಾಯಿಸಿ, ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಹೆಚ್ಚಿಸಲು ಸರ್ವ ಪ್ರಯತ್ನವನ್ನೂ ನಮ್ಮ ಸರ್ಕಾರದಿಂದ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಮಾಜಿ ಶಾಸಕ ಶಿವರಾಜ ಸಜ್ಜನರ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

***

ಕಸಾಪ ಅಭಿಲಾಷೆಯಂತೆ ಚನ್ನವೀರ ಕಣವಿ ಅವರಿಗೆ ರಾಷ್ಟ್ರಕವಿ ಬಿರುದು ನೀಡಬೇಕೆನ್ನುವ ಬೇಡಿಕೆಯನ್ನು ಪರಿಗಣಿಸಿ ಶಿಫಾರಸು ಮಾಡಲಾಗುವುದು
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT