ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ ಉದ್ಯೋಗ ಮೇಳ 8ರಂದು

ಹುಬ್ಬಳ್ಳಿಯ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರದಿಂದ ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಆವರಣದಲ್ಲಿ ಆಯೋಜನೆ
Last Updated 5 ಜುಲೈ 2018, 9:58 IST
ಅಕ್ಷರ ಗಾತ್ರ

ಹಾವೇರಿ:ಹುಬ್ಬಳ್ಳಿಯ ಉದ್ಯೋಗ ಮಾಹಿತಿ ಕೇಂದ್ರ ಹಾಗೂ ತರಬೇತಿ ಕೇಂದ್ರ, ಲಾಜಿಕ್ ಕಂಪ್ಯೂಟರ್ ಸೆಂಟರ್ ಸಹಯೋಗದಲ್ಲಿ ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್‌ನಲ್ಲಿ ಜುಲೈ 8ರಂದು ‘ಬೃಹತ್ ಉದ್ಯೋಗ ಮೇಳ’ ನಡೆಯಲಿದೆ.

ಉದ್ಯೋಗ ಮಾಹಿತಿ ಕೇಂದ್ರದ ಅಧ್ಯಕ್ಷರಾದ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ತಮ್ಮ ಕ್ಷೇತ್ರ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಧಾರವಾಡದಲ್ಲಿ ಎರಡು ಹಾಗೂ ಗದಗದಲ್ಲಿ ಒಂದು ಆಯೋಜಿಸಿದ್ದು, ಹಾವೇರಿಯಲ್ಲಿ ನಾಲ್ಕನೇ ಉದ್ಯೋಗ ಮೇಳ ನಡೆಯಲಿದೆ ಎಂದು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಎಸ್. ಬೇವಿನಮರದ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಧಾರವಾಡದ ಉದ್ಯೋಗ ಮೇಳಗಳಲ್ಲಿ ತಲಾ 850 ಮತ್ತು 423 ಹಾಗೂ ಗದಗದಲ್ಲಿ 450 ಅಭ್ಯರ್ಥಿಗಳು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಉದ್ಯೋಗ ಮೇಳಕ್ಕೆ ಪೂರ್ವಭಾವಿಯಾಗಿ ಸುಮಾರು 4 ಸಾವಿರ ಆಕಾಂಕ್ಷಿಗಳಿಗೆ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡಲಾಗಿದೆ. ಹುಬ್ಬಳ್ಳಿ ಮತ್ತು ಬೆಂಗಳೂರು ಮೂಲದ 25 ಉದ್ಯೋಗದಾತ ಕಂಪೆನಿಗಳು ಪಾಲ್ಗೊಳ್ಳಲಿವೆ. ಒಟ್ಟು 2 ಸಾವಿರ ಹುದ್ದೆಗಳ ಭರ್ತಿಗಾಗಿ ಈ ಕಂಪೆನಿಗಳು ಬರಲಿವೆ ಎಂದು ವಿವರಿಸಿದರು.

ಜು.8ರಂದು ಯುಜಿಸಿ–ಎನ್ಇಟಿ ಪರೀಕ್ಷೆಯಿದೆ. ಉದ್ಯೋಗ ಆಕಾಂಕ್ಷಿಗಳು ಜು.7ರಂದು ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡು, ಪರೀಕ್ಷೆ ಮುಗಿದ ಬಳಿಕ ಬಂದು ಸಂದರ್ಶನ ಎದುರಿಸಬಹುದು. ಸಂಜೆ 6ರ ತನಕ ಅವಕಾಶ ಕಲ್ಪಿಸಲಾಗುವುದು ಎಂದರು.

ಮೇಳದ ಸಂಯೋಜಕ ಮಹೇಶ್ ಭಟ್ಟ ಮಾತನಾಡಿ, ಅಭ್ಯರ್ಥಿಗಳ ಅರ್ಹತೆಗೆ ತಕ್ಕಂತೆ ಉದ್ಯೋಗಾವಕಾಶದ ವಿವರ ನೀಡಲಾಗುವುದು. ಉಚಿತವಾಗಿ ನೋಂದಾಯಿಸಿಕೊಂಡು, ತಾವು ಇಚ್ಛಿಸಿದ ಕಂಪೆನಿಯ ಸಂದರ್ಶನ ಎದುರಿಸಬಹುದು. ಇತರ ಎಲ್ಲ ಪೂರಕ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಜು.8ರಂದು ಬೆಳಿಗ್ಗೆ 10ಕ್ಕೆ ಶಾಸಕ ಸಿ.ಎಂ. ಉದಾಸಿ ಉದ್ಘಾಟಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಶಾಸಕರಾದ ಬಸವರಾಜ ಬೊಮ್ಮಾಯಿ, ವಿರೂಪಾಕ್ಷಪ್ಪ ಬಳ್ಳಾರಿ, ಕೆ.ಎಲ್.ಇ ಆಡಳಿತ ಮಂಡಳಿಯ ಶಂಕರಣ್ಣ ಮುನವಳ್ಳಿ ಪಾಲ್ಗೊಳ್ಳುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಪ್ರಾಚಾರ್ಯ ಚನ್ನಪ್ಪ ಬಿ., ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಎಚ್.ಬಿ. ಲಿಂಗಯ್ಯ, ಎಂ.ಪಿ. ಕರಬಸಯ್ಯ ಇದ್ದರು.

‘ಸಂದರ್ಶನ ತರಬೇತಿ ಜು.7ರಂದು’
ಉದ್ಯೋಗ ಮೇಳಕ್ಕೆ ಪೂರಕವಾಗಿ, ಆಕಾಂಕ್ಷಿಗಳಿಗೆ ಜುಲೈ 7ರಂದು ತರಬೇತಿ ಆಯೋಜಿಸಲಾಗಿದೆ. ನಾಲ್ವರು ಪರಿಣಿತರು ಸಂದರ್ಶನ ಎದುರಿಸುವುದು, ಸಂವಹನ, ಉದ್ಯೋಗ ಆಯ್ಕೆ ಸೇರಿದಂತೆ ಮಾಹಿತಿ ನೀಡುವರು. ಅಲ್ಲದೇ, ಮಾದರಿ ಪ್ರಶ್ನೆಗಳನ್ನು ನೀಡಲಿದ್ದು, ಆಕಾಂಕ್ಷಿಗಳಿಗೆ ಸಹಕಾರಿಯಾಗಲಿದೆ ಎಂದು ಉದ್ಯೋಗ ಮೇಳದ ಸಂಯೋಜಕ ಮಹೇಶ್ ಭಟ್ಟ ತಿಳಿಸಿದರು. ಜುಲೈ 7ರಂದು ಬೆಳಿಗ್ಗೆ 10ಕ್ಕೆ ವಿಧಾನ ಪರಿಷತ್ ಸದಸ್ಯ ವಿ.ಎಸ್. ಸಂಕನೂರ ಅಧ್ಯಕ್ಷತೆಯಲ್ಲಿ ಮಹೇಶ ಕೆ. ಭಟ್, ಸಂತೋಷ ಹಬೀಬ, ಹನುಮೇಶ ಪಿ. ಮತ್ತಿತರರು ಮಾಹಿತಿ ನೀಡುವರು. ಜಿ.ಎಚ್. ಕಾಲೇಜು ಪ್ರಾಚಾರ್ಯ ಎಸ್.ಬಿ. ನಾಡಗೌಡ ಇರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT