ಭಾನುವಾರ, ಫೆಬ್ರವರಿ 23, 2020
19 °C
ಕಬಡ್ಡಿಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಆಟಗಾರರು

ಅಕ್ಕಿ ಆಲೂರ: ‘ಅರಳೇಶ್ವರ ಅಶ್ವ ತಂಡ’ದ ಮಿಂಚು

ಸುರೇಖಾ ಪೂಜಾರ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ದೇಸಿ ಸೊಗಡಿನ ಕಬಡ್ಡಿಯಲ್ಲಿ ಅರಳೇಶ್ವರ ಗ್ರಾಮದ ‘ಅರಳೇಶ್ವರ ಅಶ್ವ ತಂಡದ’ ಆಟಗಾರರು ಗಮನ ಸೆಳೆಯುತ್ತಿದ್ದಾರೆ.

ಅರಳೇಶ್ವರ ಗ್ರಾಮದಲ್ಲಿ 8 ವರ್ಷಗಳ ಹಿಂದೆ ಗೆಳೆಯರು ಸೇರಿ ‘ಜೈ ಭಜರಂಗಿ’ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡು ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸಲು ಆರಂಭಿಸಿದರು. ಕ್ರಮೇಣ ಅಕ್ಕಪಕ್ಕದ ತಾಲ್ಲೂಕು, ಜಿಲ್ಲೆಗಳಲ್ಲಿಯೂ ಸಹ ಆಯೋಜಿಸಲಾಗುವ ಟೂರ್ನಿಗಳಲ್ಲಿ ಪಾಲ್ಗೊಂಡು ಜಯದ ನಗೆ ಬೀರಲಾರಂಭಿಸಿದರು. ಬಳಿಕ ತಂಡಕ್ಕೆ ‘ಅರಳೇಶ್ವರ ಅಶ್ವ’ ಎಂದು ಮರುನಾಮಕರಣ ಮಾಡಲಾಯಿತು.

ಹಾವೇರಿ ಜಿಲ್ಲೆ ಮಾತ್ರವಲ್ಲದೇ ತುಮಕೂರು, ದಾವಣಗೆರೆ, ಚಿತ್ರದುರ್ಗ, ಗದಗ, ಧಾರವಾಡ, ಕಾರವಾರ, ಶಿವಮೊಗ್ಗ ಹೀಗೆ ಹಲವೆಡೆಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಅರಳೇಶ್ವರ ಅಶ್ವ ತಂಡ ಭಾಗವಹಿಸಿ, ವಿಜಯದ ನಗೆ ಬೀರಿದೆ. ಹಾನಗಲ್ ತಾಲ್ಲೂಕಿನಲ್ಲಂತೂ ಈ ತಂಡವೇ ಕಬಡ್ಡಿಯಲ್ಲಿ ಪಾರಮ್ಯ ಮೆರೆಯುತ್ತಿರುವುದು ವಿಶೇಷ.

ಬನವಾಸಿಯ ಕದಂಬೋತ್ಸವದ ಕ್ರೀಡಾಕೂಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ತಂಡ ಇತ್ತೀಚಿಗೆ ಹಾನಗಲ್‍ನಲ್ಲಿ ನಡೆದ ಪ್ರೊ ಕಬಡ್ಡಿಯಲ್ಲಿ 3ನೇ ಸ್ಥಾನ ಗಳಿಸಿದೆ. ತಂಡದ ಹಲವು ಆಟಗಾರರಿಗೆ ವೈಯಕ್ತಿಕ ವಿಭಾಗಗಳಲ್ಲಿ ಹಲವು ಬಾರಿ ಪ್ರಶಸ್ತಿ ಲಭಿಸಿರುವುದು ಗಮನಾರ್ಹ. ಅಲ್ಲದೆ, ಕೆಲವರು ಜಿಲ್ಲೆ ಮತ್ತು ವಿಭಾಗ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ನಾವು ಗ್ರಾಮೀಣ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತೇವೆ. ಗ್ರಾಮದಲ್ಲಿ ಪ್ರತಿವರ್ಷವೂ ಪಂದ್ಯಾವಳಿ ಆಯೋಜಿಸಿ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಹ ಗ್ರಾಮೀಣ ಆಟಗಾರರು ಭಾಗವಹಿಸುವಂತಾಗಬೇಕು ಎನ್ನುತ್ತಾರೆ ತಂಡದ ನಾಯಕ ಮಲ್ಲೇಶ ಕೂಡಲ.

ಕಬಡ್ಡಿಗಿಂದು ಹೆಚ್ಚು ಉತ್ತೇಜನ ಸಿಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಅವಕಾಶ ಬಳಸಿಕೊಂಡು ನಮ್ಮ ತಂಡದ ಆಟಗಾರರೂ ಸಹ ದೇಶ-ವಿದೇಶಗಳಲ್ಲಿ ಮಿಂಚಬೇಕು ಎನ್ನುವ ಅಭಿಲಾಷೆ ಇದೆ. ಇದಕ್ಕೆ ಪ್ರಯತ್ನವೂ ಸಾಗಿದೆ ಎಂದು ಅವರು ವಿವರಿಸಿದರು.

ನಮ್ಮ ತಂಡದಲ್ಲಿ ಶಿವಕುಮಾರ ಸಣ್ಣಗೌಡ್ರ, ಸಚಿನ್ ಪೂಜಾರ, ಮಹೇಶ ಬಂಕೊಳ್ಳಿ, ಮಂಜುನಾಥ ಬಂಕೊಳ್ಳಿ, ಮಂಜುನಾಥ ಕೊರಡೂರ, ರಾಘವೇಂದ್ರ ಕಚವಿ, ಬಸವರಾಜ್ ಕರಿಭೀಮಣ್ಣನವರ, ರಮೇಶ ದೊಡ್ಡಮನಿ, ನಾಗರಾಜ್ ತಿಳವಳ್ಳಿ, ನಿಂಗಪ್ಪ ಜಾವೋಜಿ ಸೇರಿದಂತೆ ಇನ್ನೂ ಹಲವರು ಅರಳೇಶ್ವರ ಅಶ್ವ ತಂಡ ಪ್ರತಿನಿಧಿಸುತ್ತಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು