ಮಂಗಳವಾರ, ನವೆಂಬರ್ 24, 2020
21 °C
ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಒತ್ತು; ಬ್ಯಾಂಕ್‌, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡಕ್ಕೆ ಕುತ್ತು

ಹಾವೇರಿ: ಏಲಕ್ಕಿ ನಾಡಿನಲ್ಲಿ ಕನ್ನಡದ ಕಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮಧ್ಯ ಕರ್ನಾಟಕ’ ಪ್ರದೇಶವಾದ ಏಲಕ್ಕಿ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆಯಿದೆ. ಹೀಗಾಗಿ ಅನ್ಯಭಾಷೆಗಳ ಪ್ರಭಾವ ಇಲ್ಲಿ ತುಂಬಾ ಕಡಿಮೆ. ಉತ್ತರ ಕರ್ನಾಟಕದ ಜವಾರಿ ಭಾಷೆ ಮತ್ತು ದಕ್ಷಿಣ ಕರ್ನಾಟಕದ ಲಿಖಿತ ರೂಪದ ಭಾಷಾ ಶೈಲಿಯ ಸಂಗಮ ಸ್ಥಳವಾದ ಹಾವೇರಿ ‘ಸಾಹಿತ್ಯದ ತವರೂರು’ ಎನಿಸಿದೆ. ಇಲ್ಲಿನ ಜನರ ನರ–ನಾಡಿಗಳಲ್ಲಿ ಕನ್ನಡ ಪ್ರೇಮ ಉಕ್ಕಿ ಹರಿಯುತ್ತಿದೆ. 

ಗಡಿ ಜಿಲ್ಲೆಗಳಲ್ಲಿದ್ದಂತೆ ಬೇರೆ ಭಾಷೆಗಳ ಪ್ರಭಾವ ಮತ್ತು ದಾಳಿ ಇಲ್ಲಿಲ್ಲ. ಆಡಳಿತದಲ್ಲಿ ಕನ್ನಡ ಅನುಷ್ಠಾನ ಶೇ 98ರಷ್ಟು ಜಾರಿಯಾಗಿದೆ. ರಾಜ್ಯ ಸರ್ಕಾರದ ಎಲ್ಲ ಕಚೇರಿಗಳ ಆಡಳಿತದಲ್ಲಿ ಕಡತಗಳು, ಪತ್ರ ವ್ಯವಹಾರಗಳು ಕನ್ನಡದಲ್ಲೇ ನಡೆಯುತ್ತಿವೆ. ನ್ಯಾಯಾಲಯ, ಎಂಜಿನಿಯರಿಂಗ್‌ ವಿಭಾಗಗಳು ಹಾಗೂ ಕೇಂದ್ರ ಸರ್ಕಾರದೊಂದಿಗಿನ ಪತ್ರ ವ್ಯವಹಾರಗಳಲ್ಲಿ ಕೆಲವು ಬಾರಿ ಇಂಗ್ಲಿಷ್‌ ಅನ್ನು ಬಳಸುವುದು ಅನಿವಾರ್ಯ ಎನ್ನುತ್ತಾರೆ ಅಧಿಕಾರಿಗಳು. 

ಸಾಹಿತ್ಯದ ಸಾರಥಿಗಳು: ಮೂರು ಕಾಲ ಉಳಿಯುವಂತೆ ತ್ರಿಪದಿಯಲ್ಲಿ ಬರೆದ ಕವಿ ಸರ್ವಜ್ಞ, ‘ದಾಸ ಸಾಹಿತ್ಯದ ಮೇರು ಪರ್ವತ’ ಕನಕದಾಸ, ಭಾವೈಕ್ಯದ ಹರಿಕಾರ ಶಿಶುನಾಳ ಶರೀಫ, ‘ಕಾದಂಬರಿ ಪಿತಾಮಹ’ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ, ಕನ್ನಡದ ಕಟ್ಟಾಳುಗಳಾದ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಡಾ.ಮಹಾದೇವ ಬಣಕಾರ, ಶ್ರೇಷ್ಠ ಕಥನ ಕವನಗಳ ಕವಿ ಸು.ರಂ.ಯಕ್ಕುಂಡಿ ಮುಂತಾದವರು ಕನ್ನಡ ಸಾರಸ್ವತ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಇವರೆಲ್ಲರೂ ಹಾವೇರಿ ನಾಡಿನವರು ಎಂಬ ಹೆಮ್ಮೆ ಇಲ್ಲಿನ ಜನರದ್ದು.

ನಾಮಫಲಕಗಳಲ್ಲಿ ಇಂಗ್ಲಿಷ್‌: ಹಾವೇರಿ ಜಿಲ್ಲೆಯ ಸರ್ಕಾರಿ ಕಚೇರಿ, ಅಂಗಡಿ, ಹೋಟೆಲ್‌, ಸಿನಿಮಾ ಮಂದಿರಗಳ ನಾಮ
ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಕ್ಕಿದೆ. ಕೆಲವು ಕಡೆ ಮಾತ್ರ ಇಂಗ್ಲಿಷ್‌ ನಾಮಫಲಕಗಳು ರಾರಾಜಿಸುತ್ತಿವೆ.

‘ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು ಎಂಬ ನಿಯಮವಿದ್ದರೂ ಕೆಲವು ವ್ಯಾಪಾರಿಗಳು ಅದನ್ನು ಗಾಳಿಗೆ ತೂರುತ್ತಿದ್ದಾರೆ. ದಂಡ ವಿಧಿಸಲು ಅಧಿಕಾರಿಗಳು ಮುಂದಾದರೆ, ಪ್ರಭಾವ ಬಳಸಿ ಉದ್ಯಮಿಗಳು, ವ್ಯಾಪಾರಿಗಳು ತಪ್ಪಿಸಿಕೊಳ್ಳುತ್ತಾರೆ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಕರವೇ ಜಿಲ್ಲಾ ಘಟಕದ (ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ಅಧ್ಯಕ್ಷ ಮಂಜುನಾಥ ಓಲೇಕಾರ.  

‘ಮಾರುಕಟ್ಟೆ, ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌‌ ಭಾಷೆ ಎರಡರಲ್ಲೂ ನಾಮಫಲಕಗಳಿದ್ದವು. ಕನ್ನಡ ದೊಡ್ಡ ಅಕ್ಷರ ಬರೆಸಲು ಸ್ವಾಭಿಮಾನಿ ಕರವೇ ಸಂಘಟನೆಯಿಂದ ಸೂಚನೆ ನೀಡಲಾಗಿತ್ತು. ಈಗ ಶೇ 75ರಷ್ಟು ಕನ್ನಡ ಅಕ್ಷರ ದೊಡ್ಡದಾಗಿ ಬರೆಸಿದ್ದಾರೆ’ ಎನ್ನುತ್ತಾರೆ ಸ್ವಾಭಿಮಾನಿ ಕರವೇ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ. 

ಬ್ಯಾಂಕ್‌ನಲ್ಲಿ ಇಂಗ್ಲಿಷ್‌ಗೆ ಮಣೆ: ‘ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ತೀವ್ರ ವಿರಳವಾಗಿದೆ. ವಿಜಯಾ ಬ್ಯಾಂಕ್‌, ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾದ ಬಳಿಕ ಕನ್ನಡ ಬಳಕೆ ವಿರಳವಾಗಿದೆ. ಅಲ್ಲಿಯ ಚಲನ್‍ಗಳು ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮುದ್ರಿತಗೊಂಡಿವೆ. ಈ ಬಗ್ಗೆ ವ್ಯವಸ್ಥಾಪಕರಿಗೆ ದೂರು ನೀಡಿದ್ದೇವೆ’ ಎಂದು ಕಸಾಪ ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಜಗಾಪುರ ಹೇಳಿದರು.

‘ಬ್ಯಾಂಕ್‌ಗಳಲ್ಲಿ ಕನ್ನಡಿಗರನ್ನು ಕಡೆಗಣಿಸಿ ಹೊರ ರಾಜ್ಯದವರಿಗೆ ಉದ್ಯೋಗದಲ್ಲಿ ಅವಕಾಶ ನೀಡಲಾಗಿದೆ. ಕನ್ನಡ ಬಾರದ ಇಂತಹ ಉದ್ಯೋಗಿಗಳಿಂದ ಗ್ರಾಮೀಣ ಭಾಗದ ರೈತರು ಹಾಗೂ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’ನಾಗಿರಬೇಕು. ಹೀಗಾಗಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಕನ್ನಡ ಭಾಷೆಗೆ ಒತ್ತು ನೀಡುವಂತೆ ಮನವಿ ಸಲ್ಲಿಸುತ್ತೇವೆ’ ಎನ್ನುತ್ತಾರೆ ಕರವೇ ಮುಖಂಡರಾದ ಸತೀಶಗೌಡ ಮುದಿಗೌಡರ. 


ಆಟೊದಲ್ಲಿ ರಾರಾಜಿಸುವ ಕರ್ನಾಟಕ ನಕ್ಷೆ 

ಲೇಖಕರ ವಿಳಾಸ ಪುಸ್ತಕವೇ ಇಲ್ಲ!: ಹಾವೇರಿ ಲೇಖಕರ ಮತ್ತು ಕಲಾವಿದರ ವಿಳಾಸ ಪುಸ್ತಕವೇ ನಮ್ಮಲ್ಲಿಲ್ಲ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ ಸಾಂದರ್ಭಿಕ ಆಚರಣೆಗಳ ಜತೆಗೆ‌ ಹೊಸ ಹೆಜ್ಜೆಗಳನ್ನು ಇಡಬೇಕಿದೆ. ನಾಟಕ ಅಕಾಡೆಮಿ ಮೈಕೊಡವಿಕೊಂಡು ಕ್ರಿಯಾಶೀಲವಾಗಬೇಕಿದೆ. ಕನ್ನಡ ಪುಸ್ತಕಗಳು ಓದುಗರ ಕೈಗೆಟುಕುವ ದರದಲ್ಲಿ ಸಿಗಬೇಕಿದೆ. ಕಾಲಕ್ಕೆ ತಕ್ಕಂತೆ ಇಲಾಖೆ ಮತ್ತು ಅಕಾಡೆಮಿಗಳು ಹೊಸ ಯೋಜನೆಗಳನ್ನು ರೂಪಿಸಿ, ಕನ್ನಡ ಅನುಷ್ಠಾನಕ್ಕೆ ಕಟಿಬದ್ಧರಾಗಬೇಕು’ ಎಂಬುದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರ ಅನಿಸಿಕೆ. 

‘ಕನ್ನಡದ ಬೇರು ಮತ್ತು ಜವಾರಿತನ ನಮ್ಮ ಜಿಲ್ಲೆಯಲ್ಲಿ ಗಟ್ಟಿಯಾಗಿವೆ. ಸಂವಹನದ ದೃಷ್ಟಿಯಿಂದ ಮಾತಿನ ನಡುವೆ ಅಲ್ಲೊಂದು ಇಲ್ಲೊಂದು ಇತರ ಭಾಷೆಗಳ ಪದಗಳು ಇಣುಕುವುದೂ ಉಂಟು. ಪಾಟೀಲ ಪುಟ್ಟಪ್ಪ ಮತ್ತು ಡಾ.ಮಹಾದೇವ ಬಣಕಾರ ಕನ್ನಡ ಕಾವಲು ಸಮಿತಿಯ ಎರಡು ಸಿಂಹಗಳು. ಬಣಕಾರ ಅವರಿಗೆ ಗ್ಯಾಂಗ್ರಿನ್‌ ಆದಾಗ ಅವರ ಹೇಳಿದ ಮಾತು ‘ನನ್ನ ಕಾಲು ಅಷ್ಟೇ ಕಡಿದಿದ್ದಾರೆ. ನನ್ನ ತಲೆಯನ್ನು ಕಡೆದಿಲ್ಲವಲ್ಲ’ ಎಂಬ ನುಡಿ ಕನ್ನಡ ಮನಸುಗಳಲ್ಲಿ ಇಂದಿಗೂ ಮಾರ್ದನಿಗೊಳ್ಳುತ್ತದೆ ಎಂದು ಗೋಕಾಕ ಚಳವಳಿ, ಕನ್ನಡ ಪರ ಹೋರಾಟಗಳ ನೆನಪುಗಳನ್ನು ಸತೀಶ ಕುಲಕರ್ಣಿ ಬಿಚ್ಚಿಟ್ಟರು. 


ಹಾವೇರಿ ನಗರದಲ್ಲಿ ಆಟೊ ಚಾಲಕರ ಕನ್ನಡ ಪ್ರೀತಿ –ಪ್ರಜಾವಾಣಿ ಚಿತ್ರಗಳು: ನಾಗೇಶ ಬಾರ್ಕಿ

ಶಿಗ್ಗಾಂವ ಅಲ್ಲ, ಶಿಗ್ಗಾವಿ!

‘ಶಿಗ್ಗಾಂವ’ ಎಂಬ ಪದವನ್ನು ಬದಲಾಯಿಸಿ ‘ಶಿಗ್ಗಾವಿ’ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿರುವ ಹಲವು ನಾಮಫಲಕಗಳಿಗೆ ಮಸಿ ಹಚ್ಚುವ ಮೂಲಕ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿವೆ. ಆದರೂ ಶಿಗ್ಗಾಂವ ಎಂಬ ಪದ ಮರೆಯಾಗಿಲ್ಲ. 

‘ಶಿಗ್ಗಾಂವ ಎಂಬ ನಾಮಫಲಕಗಳನ್ನು ತೆಗೆದು ಶಿಗ್ಗಾವಿ ಎಂಬ ನಾಮಫಲಕ ಹಾಕದಿದ್ದರೆ ಹೋರಾಟ ಅನಿವಾರ್ಯವಾಗಿದೆ’ ಎನ್ನುತ್ತಾರೆ ಕರವೇ ಮುಖಂಡ ಹನುಮಂತ ಬಂಡಿವಡ್ಡರ. 

‘ಶಿಗ್ಗಾವಿ’ ಎಂಬ ನಾಮಫಲಕ ಹಾಕುವಂತೆ ಯಾರೂ ಮನವಿ ಮಾಡಿಲ್ಲ. ಸರ್ಕಾರವು ಯಾವುದೇ ನೋಟಿಸ್ ಕಳುಹಿಸಿಲ್ಲ. ಹೀಗಾಗಿ ಸರ್ಕಾರದ ಆಡಳಿತ ಭಾಷೆಯಲ್ಲಿ ಈವರೆಗೆ ‘ಶಿಗ್ಗಾಂವ’ ಎಂದು ನಮೂದಿಸಲಾಗುತ್ತಿದೆ. ನಿತ್ಯದ ಬಳಕೆಯಲ್ಲಿ, ಕಚೇರಿಗಳ ನಾಮಫಲಕದಲ್ಲಿ ಶಿಗ್ಗಾಂವ ಎಂದು ಗುರುತಿಸಲಾಗಿದೆ’ ಎಂದು ತಹಶೀಲ್ದಾರ್ ಪ್ರಕಾಶ ಕುದರಿ ಹೇಳಿದರು. 


ಸಾರಿಗೆ ಸಂಸ್ಥೆಯ ಬಸ್‌ ಮತ್ತು ನಿಲ್ದಾಣಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿರುವುದು

‘ರಾಜ್ಯಭಾಷೆ’ಯಲ್ಲಿ ಶಿಕ್ಷಣ ದೊರೆಯಲಿ

‘ಕರ್ನಾಟಕದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು ಎಂದು ಹೇಳುತ್ತಿರುವುದು ತಪ್ಪು ಹೆಜ್ಜೆ. ನಮ್ಮ ರಾಜ್ಯದಲ್ಲಿ ಅನೇಕ ಮಾತೃಭಾಷೆಯವರಿದ್ದಾರೆ. ಉರ್ದು, ಮರಾಠಿ, ತೆಲುಗು, ತಮಿಳು, ಕೊಂಕಣಿ, ಮಲಯಾಳಿ ಮುಂತಾದವರು ಇರುವುದರಿಂದ ಅವರವರ ಮಾತೃ ಭಾಷೆಯಲ್ಲಿ ಶಿಕ್ಷಣವಾದರೆ, ಅವರಿಗಾಗಿ ಪ್ರತ್ಯೇಕ ಶಾಲೆ ತೆರೆಯಬೇಕಾಗುತ್ತದೆ. ಹೀಗಾಗಿ ರಾಜ್ಯ ಭಾಷೆ ಕನ್ನಡದಲ್ಲೇ 1ರಿಂದ 10ನೇ ತರಗತಿವರೆಗೆ ಶಿಕ್ಷಣ ದೊರೆಯುವಂತಾಗಬೇಕು’ ಎನ್ನುತ್ತಾರೆ ಹಿರಿಯ ಸಾಹಿತಿ ಗಂಗಾಧರ ನಂದಿ. 

ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಸಂಸ್ಕೃತಿ ಕೈಬಿಟ್ಟು, ಸಾಧನೆ ಮತ್ತು ಜ್ಯೇಷ್ಠತೆ ಆಧಾರದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಗುರುತಿಸಿ ಪ್ರಶಸ್ತಿ ನೀಡಿದರೆ, ಪ್ರಶಸ್ತಿಗಾಗಿ ಲಾಬಿ ಮಾಡುವುದು ನಿಲ್ಲುತ್ತದೆ. ಅರ್ಹ ಸಾಧಕರಿಗೆ ಗೌರವ ಸಿಗುತ್ತದೆ ಎಂಬುದು ಅವರ ಮನದಾಳದ ಮಾತು. 

ಸಮ್ಮೇಳನಕ್ಕೆ ಮಾತ್ರ ಅನುದಾನ

‘ಪ್ರತಿ ವರ್ಷ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹5 ಲಕ್ಷ, ತಾಲ್ಲೂಕು ಸಮ್ಮೇಳನಕ್ಕೆ ₹1 ಲಕ್ಷ ಅನುದಾನ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಿಗುತ್ತದೆ. ಆದರೆ, ಕನ್ನಡ ಪರ ಚಟುವಟಿಕೆಗಳಿಗೆ ಪ್ರತ್ಯೇಕ ಅನುದಾನವಿಲ್ಲ. ದತ್ತಿ ದಾನಿಗಳು ಕೊಟ್ಟ ಹಣದಿಂದ ಬಂದ ಬಡ್ಡಿಯಿಂದ ದಾನಿಗಳ ಅಪೇಕ್ಷೆಯಂತೆ ಕಾರ್ಯಕ್ರಮ ಆಯೋಜಿಸುತ್ತೇವೆ. ನಾಡು–ನುಡಿಗೆ ಅಪಾರ ಕೊಡುಗೆ ಕೊಟ್ಟ ಪಾಟೀಲ ಪುಟ್ಟಪ್ಪ, ಗಳಗನಾಥ ಮುಂತಾದವರ ಸ್ಮಾರಕಗಳನ್ನು ಸರ್ಕಾರ ನಿರ್ಮಿಸಿದರೆ ಮುಂದಿನ ಪೀಳಿಗೆಗೆ ದೊಡ್ಡ ಕೊಡುಗೆಯಾಗುತ್ತದೆ’ ಎನ್ನುತ್ತಾರೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ. 

**********

ಕೆಲವು ನಾಮಫಲಕಗಳಲ್ಲಿ ಕನ್ನಡ ಕಡೆಗಣಿಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ನಮ್ಮ ಸಿಬ್ಬಂದಿಯಿಂದ ಪರಿಶೀಲನೆ ನಡೆಸಿ, ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದು
-ಪರಶುರಾಮ ಚಲವಾದಿಪೌರಾಯುಕ್ತ, ಹಾವೇರಿ ನಗರಸಭೆ

ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕೆ ಗಟ್ಟಿ ನೆಲೆಯಿದೆ. ಇಂಗ್ಲಿಷ್‌ ಶಾಲಾ ಅಂಗಳದಲ್ಲೂ ಮಕ್ಕಳಿಗೆ ಕನ್ನಡ ಪ್ರೀತಿ ಬೆಳೆಸುವ ಕೆಲಸಗಳು ತುರ್ತಾಗಿ ಆಗಬೇಕಿದೆ
-ಸತೀಶ ಕುಲಕರ್ಣಿ,ಹಿರಿಯ ಸಾಹಿತಿ, ಹಾವೇರಿ

ಹಾವೇರಿಯಲ್ಲಿ ‘ಸಾಹಿತ್ಯ ಗ್ರಾಮ’ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದರಿಂದ ನಾಡು–ನುಡಿ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಲಿದೆ
-ಲಿಂಗಯ್ಯ ಹಿರೇಮಠ, ಜಿಲ್ಲಾ ಘಟಕದ ಅಧ್ಯಕ್ಷ, ಕಸಾಪ

ಜಿಲ್ಲೆಯಲ್ಲಿ ಶೇ 100ರಷ್ಟು ಕನ್ನಡ ಅನುಷ್ಠಾನವಾಗಿದೆ. ಇಲಾಖೆಯಿಂದ ಕನ್ನಡ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಸಂಸ್ಕೃತಿ ಕಾರ್ಯಕ್ರಮಗಳು ನಡೆಯುತ್ತಿವೆ
-ಶಶಿಕಲಾ ಹುಡೇದ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಬ್ಯಾಂಕಿನಲ್ಲಿ ಡಿಡಿ, ಚೆಕ್‌ಗಳನ್ನು‌ ಕನ್ನಡದಲ್ಲಿ ಬರೆದರೆ ಸಿಬ್ಬಂದಿ ಮುಖ ನೋಡುತ್ತಾರೆ. ಕನ್ನಡ ಭಾಷೆ ಅನುಷ್ಠಾನಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು  
-ಪ್ರೊ.ಸಿ.ಎನ್‌.ಜಗದೇವನವರ, ರಾಣೆಬೆನ್ನೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು