ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ಅಭಿವೃದ್ಧಿ ಕಾಣದ ಬಂಕಾಪುರ ಕೋಟೆ

ಜಾನಪದ ವಿವಿಗೆ ಕಾಯಂ ಸಿಬ್ಬಂದಿ ನೇಮಿಸಿ: ಕಲಾಮಂದಿರ ನಿರ್ಮಾಣಕ್ಕೆ ಒತ್ತಾಯ
Last Updated 19 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಶಿಗ್ಗಾವಿ: ದೇಶದ ಪ್ರಥಮ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಒಂದು ದಶಕ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಅನುದಾನವಿಲ್ಲ, ಕಾಯಂ ಸಿಬ್ಬಂದಿ ನೇಮಕಾತಿಗೊಂಡಿಲ್ಲ. ವಿಶ್ವವಿದ್ಯಾಲಯದ ಪ್ರಗತಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಜನರಲ್ಲಿ ನಿರಾಸೆ ಮೂಡಿಸಿದೆ.

ಕಲಾವಿದರ ತವರೂರು ಎನ್ನಿಸಿಕೊಂಡಿರುವ ಶಿಗ್ಗಾವಿ ಕಲಾವಿದರು ದೊಡ್ಡಾಟ, ಸಣ್ಣಾಟದಲ್ಲಿ ರಾಜ್ಯ, ರಾಷ್ಟ್ರದ ಗಮನ ಸೆಳೆದಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ಕಲಾಮಂದಿರ ನಿರ್ಮಾಣವಾಗಬೇಕು. ಇದು ಕಲಾವಿದರ ಬಹುದಿನಗಳ ಕನಸಾಗಿದೆ. ಬಾಡ ಸಮಗ್ರ ದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ, ಶಿಶುವಿನಹಾಳದಲ್ಲಿ ರಾಷ್ಟ್ರೀಯ ಭಾವೈಕ್ಯ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು.

ಇನ್ನು ಬಂಕಾಪುರ ಕೋಟೆ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಪ್ರಮುಖ ಕೇಂದ್ರವಾಗಿದ್ದು, ಸುಮಾರು 149 ಎಕರೆ ಜಮೀನು ಹೊಂದಿದೆ. ಇಲ್ಲಿ ದೇಶದ ಪ್ರಥಮ ನವಿಲು ಧಾಮವಿದ್ದು, ಗೋವು ಸಂವರ್ಧನಾ ಕೇಂದ್ರ, ಮೊಲ ಸಾಕಾಣಿಕೆ ಕೇಂದ್ರವಿದೆ. ಅಮರ ಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ 66 ಕಂಬದ ನಗರೇಶ್ವರ ದೇವಸ್ಥಾವಿದ್ದು, ಇದು ರಾಷ್ಟ್ರೀಯ ಪುರಾತತ್ವ ಇಲಾಖೆಯಿಂದ ರಾಷ್ಟ್ರೀಯ ಸ್ಮಾರಕವೆಂದು ಘೋಷಣೆಯಾಗಿದೆ. ಆದರೆ ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ.

ರೈತರ ಆರ್ಥಿಕ ಗುಣಮಟ್ಟ ಹೆಚ್ಚಿಸಲು ಬೇಡ್ತಿ– ವರದಾ ನದಿಗಳ ಜೋಡಣೆ ಮಾಡುವ ಮೂಲಕ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕಿದೆ. ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರ ಸ್ಥಾಪನೆಯಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತಣ್ಣ ಗುಡಿಗೇರಿ ಆಗ್ರಹಿಸಿದರು.

ದೇಶದಲ್ಲಿ ಅಕ್ಷರ ಕ್ರಾಂತಿ ಮಾಡಿರುವ ಅರಟಾಳದ ರುದ್ರಗೌಡ್ರ ಮತ್ತು ಹಿರೇಮಲ್ಲೂರಿನ ಈಶ್ವರಣ್ಣ ಅವರ ಸ್ಮಾರಕಗಳನ್ನು ನಿರ್ಮಿಸಿ ಯುವಕರಿಗೆ ಅವರನ್ನು ಪರಿಚಯಿಸುವ ಕಾರ್ಯವಾಗಬೇಕು. ಅರಟಾಳದಲ್ಲಿನ ಜೈನ್ ಬಸದಿಯನ್ನು ಹೆಚ್ಚಿನ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವಾಗಿ ಮಾಡಬೇಕು. ಕೈಗಾರಿಕಾ (ಐಟಿ) ಕೇಂದ್ರಗಳ ಸ್ಥಾಪನೆ, ನರ್ಸಿಂಗ್ ಕಾಲೇಜು ಸ್ಥಾಪಿಸಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಎಂಬುದು ಕ್ಷೇತ್ರದ ಜನರ ಒಕ್ಕೊರಲ ಕೂಗು.

‘ಬಂಕಾಪುರ: ತಾಲ್ಲೂಕು ಕೇಂದ್ರವೆಂದು ಘೋಷಿಸಿ’
ಬಂಕಾಪುರ ಪಟ್ಟಣದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಆದರೆ ಕ್ರೀಡಾಂಗಣವಿಲ್ಲದೆ ಅವಕಾಶ ವಂಚಿತರಾಗಿದ್ದಾರೆ. ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣವಾಗಬೇಕು. ಕೋಟೆ ಆವರಣದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣವಾಗಬೇಕು. ಜನರ ನಿರೀಕ್ಷೆಯಂತೆ ಬಂಕಾಪುರ ಅಭಿವೃದ್ಧಿ ಕಂಡಿಲ್ಲ. ಬಂಕಾಪುರ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಮಾಜ ಸೇವಕ ಮಂಜುನಾಥ ಕೂಲಿ ಆಗ್ರಹಿಸುತ್ತಾರೆ.

***

‌ಬಂಕಾಪುರ ಪಟ್ಟಣವನ್ನು ಕಾಗಿನೆಲೆ ಪ್ರಾಧಿಕಾರಕ್ಕೆ ಸೇರಿಸಬೇಕು. ಕವಿ ಚಕ್ರವರ್ತಿ ರನ್ನನ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಬೇಕು.
-ಮಂಜುನಾಥ ಕೂಲಿ, ಸಮಾಜ ಸೇವಕ, ಬಂಕಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT